ನೆಲ್ಯಾಡಿ: ತೋಟಗಾರಿಕೆ ಇಲಾಖೆ (ಜಿ.ಪಂ.) ಪುತ್ತೂರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕಡಬ ತಾಲೂಕು ಕೃಷಿಕ ಸಮಾಜ ಹಾಗೂ ಗ್ರಾಮ ಪಂಚಾಯತ್ ನೆಲ್ಯಾಡಿ ಇವುಗಳ ಸಹಯೋಗದೊಂದಿಗೆ ಅಡಿಕೆ ಕೃಷಿ ಸಮಗ್ರ ನಿರ್ವಹಣೆ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಡಿ.10ರಂದು ಬೆಳಿಗ್ಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ, ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಕೃಷಿ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದ ಅವರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾದ ಸಲಾಂ ಬಿಲಾಲ್ ಮಾತನಾಡಿ, ನಾನೂ ಕೃಷಿಕನಾಗಿದ್ದು, ಅಡಿಕೆ ಕೃಷಿಯಲ್ಲಿ ಹಲವಾರು ಸಮಸ್ಯೆ ಎದುರಿಸುತ್ತಿದ್ದೇವೆ. ಅಡಿಕೆ ಕೃಷಿಯ ಬಗ್ಗೆ ಹಲವು ಸಲಹೆ ಸೂಚನೆಗಳ ಅಗತ್ಯವಿದ್ದು ಇದೊಂದು ಕೃಷಿಕರಿಗೆ ಅತೀ ಉಪಯುಕ್ತವಾದ ಕಾರ್ಯಾಗಾರ ಆಗಿದೆ ಎಂದರು.

ಅತಿಥಿಯಾಗಿದ್ದ ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯಕುಮಾರ್ ರೈ ಕೋರಂಗ ಸಂದರ್ಭೋಚಿತವಾಗಿ ಮಾತನಾಡಿದರು.
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಅಡಿಕೆ ಕೃಷಿ ಸಮಗ್ರ ನಿರ್ವಹಣೆ ಮಾಹಿತಿ ಮತ್ತು ಸಂವಾದ ಕಾರ್ಯಾಗಾರವು ಸಂಘದ ಸದಸ್ಯರ ಹಲವಾರು ಸಮಯದ ಬೇಡಿಕೆಯಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಈ ಕಾರ್ಯಾಗಾರ ಆಯೋಜಿಸಿದ್ದೇವೆ ಎಂದರು. ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ನಮ್ಮ ಸಂಘಕ್ಕೆ ಹಲವಾರು ರೀತಿಯ ನೆರವು ನೀಡಿದ್ದಾರೆ ಎಂದು ಹೇಳಿ ಅವರಿಗೆ ಕೃತಜ್ಞತೆ ಸೂಚಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಕೆ.ವಿ.ಕೆ.ವಿಜ್ಞಾನಿ ಡಾ.ರಶ್ಮಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ತಾ.ಪಂ.ಮಾಜಿ ಸದಸ್ಯರೂ, ಪ್ರಗತಿಪರ ಕೃಷಿಕರೂ ಆದ ಎನ್.ವಿ.ವ್ಯಾಸ, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಶಿರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ್ ರೈ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ವಂದಿಸಿದರು. ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ಸಂಘದ ಸಿಬ್ಬಂದಿ ಧನುಷ್ ಪ್ರಾರ್ಥಿಸಿದರು.
ಸನ್ಮಾನ:
2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ್ ಶೆಟ್ಟಿ ನೆಲ್ಯಾಡಿ ಹಾಗೂ ಅರ್ಚನಾ ಎಸ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗೋಳಿತ್ತೊಟ್ಟು ಶಾಖೆಯ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್ ಪಿ., ಶಿರಾಡಿ ಶಾಖೆಯ ವ್ಯವಸ್ಥಾಪಕ ರಮೇಶ್ ನಾಯ್ಕ್ ಸನ್ಮಾನಿತರನ್ನು ಪರಿಚಯಿಸಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ, ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸಲಾಯಿತು.