ಹೊಸ ಕಾರ್ಮಿಕ ಸಂಹಿತೆಗಳು ಭವಿಷ್ಯದ ಭಾರತದ ದಿಕ್ಸೂಚಿ: ಮುರಳೀಧರ ಕೆ.
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಮಜ್ದೂರ್ ಸಂಘದ ಸಹಯೋಗದಲ್ಲಿ ‘ಹೊಸ ಕಾರ್ಮಿಕ ಸಂಹಿತೆಗಳು: ಒಂದು ವಿಮರ್ಶಾತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತು ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ ನಡೆಯಿತು.

ಈ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ನಿರ್ದೇಶಕರು ಹಾಗೂ ಹಾರ್ದಿಕ್ ಹರ್ಬಲ್ಸ್ ನ ಸಿ.ಇ.ಒ. ಮುರಳೀಧರ ಕೆ. ದೀಪ ಬೆಳಗುವ ಮೂಲಕ ಉದ್ಘಾಟಿಸಿ, ನಂತರ ಮಾತನಾಡಿದ ಅವರು, ದೇಶದಲ್ಲಿ ಅಭಿವೃದ್ಧಿ ಹಾಗೂ ಬದಲಾವಣೆಯು ಎಲ್ಲಾ ವಲಯಗಳಲ್ಲಿ ವೇಗವನ್ನು ಪಡೆದುಕೊಂಡಿದ್ದು, ಅದಕ್ಕೆ ಪೂರಕವಾಗಿ ಇತ್ತೀಚಿಗೆ ಕಾರ್ಮಿಕರ ಪರವಾದ ಕಾನೂನು ಸಂಹಿತೆಗಳು ಸಹಾ ಹೊಸ ರೂಪ ಪಡೆದುಕೊಂಡಿದೆ. ಹೊಸ ಕಾರ್ಮಿಕ ಸಂಹಿತೆಗಳು ಭಾರತದ ಕಾರ್ಮಿಕ ವಲಯವನ್ನು ಆಧುನೀಕರಿಸುವ, ಉದ್ಯೋಗದಾತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ, ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ದಿಕ್ಸೂಚಿಯಾಗಿದೆ, ಇದು “ಆತ್ಮನಿರ್ಭರ ಭಾರತ” ಪರಿಕಲ್ಪನೆಯ ಮೂಲಕ ದೇಶದ ಸಮಗ್ರ ಪ್ರಗತಿಗೆ ನೆರವಾಗುವ ಗುರಿ ಹೊಂದಿದೆ. ಇವು ಹಳೆಯ 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ಸಂಯೋಜಿಸಿ, ಪಾರದರ್ಶಕತೆ, ದಕ್ಷತೆ ಮತ್ತು ಸುಲಭ ವ್ಯಾಪಾರಕ್ಕೆ ಅಡಿಪಾಯ ಹಾಕುತ್ತಿವೆ. ಈ ಸಂಹಿತೆಗಳು ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿಯಾಗಿರುವ ಡಾ. ಕೆ. ಎಂ. ಕೃಷ್ಣ ಭಟ್ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆಗಳು ಭಾರತೀಯ ಮೌಲ್ಯಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಇದು ಭವಿಷ್ಯದ ಭಾರತದ ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯದ ದಿಕ್ಕನ್ನು ನಿರ್ದೇಶಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದರು. ಈ ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದರ ಮೂಲಕ ‘ನ್ಯಾಯದ ಸುಧಾರಣೆ’ಯನ್ನು ತರಲು ಪ್ರಯತ್ನಿಸುತ್ತಿವೆ. ಇದು ದೇಶದ ಭವಿಷ್ಯದ ಸಾಮಾಜಿಕ ಮತ್ತು ಆಡಳಿತಾತ್ಮಕ ಸುವ್ಯವಸ್ಥೆಗೆ ದಿಕ್ಸೂಚಿ ಆಗಲಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅನಿಲ್ ಕುಮಾರ್ ಯು. ಮಾತನಾಡಿ, ಕೇಂದ್ರ ಸರ್ಕಾರವು ಜಾರಿಗೊಳಿಸಿದ ನೂತನ ಕಾರ್ಮಿಕ ಕಾನೂನುಗಳು ಮಾನವ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಆತ್ಮಗೌರವ ಸಿಗುವಂತೆ ನಿರ್ಧಾರಗಳನ್ನು ಕೈಗೊಂಡಿದೆ. ಸ್ವಾವಲಂಬಿ ಭಾರತದ ಮೂಲಕ ವಿಕಸಿತ ಭಾರತವನ್ನು ನಿರ್ಮಾಣ ಮಾಡುವ ಪ್ರಧಾನಿ ಮೋದಿಯವರ ಮಹಾಸಂಕಲ್ಪದ ಗುರಿ ಸಾಧನೆಗೆ ಅತ್ಯಮೂಲ್ಯ ಮಾನವ ಶ್ರಮವನ್ನು ಸದ್ಭಳಕೆ ಮಾಡಿಕೊಳ್ಳುವ ಯೋಜನೆಗಳಿಗೆ ಮುಂದಾಗಿ ಈ ಸುಧಾರಿತ ಕಾನೂನನ್ನು ಜಾರಿಗೆ ತಂದಿದ್ದಾರೆ. ಈ ಹೊಸ ಕಾರ್ಮಿಕ ಸಂಹಿತೆಗಳ ಅರಿವನ್ನು ಪ್ರತಿಯೊಬ್ಬ ಕಾರ್ಮಿಕನಿಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಪ್ರೊ. ಬಾಬು ಮ್ಯಾಥ್ಯು ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕರ್ನಾಟಕದ ಉಪ ಕಾರ್ಮಿಕ ಆಯುಕ್ತರಾದ ಕೆ. ಜಿ. ಜಾನ್ಸನ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ ಉಪಸ್ಥಿತರಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ಎ. ವಂದಿಸಿದರು. ಕಾರ್ಯಕ್ರಮವನ್ನು ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ. ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಭಾರತೀಯ ಮಜ್ದೂರ್ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಲ್ವರು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆ ಹಾಗೂ ಸಮಾರೋಪ:
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಪ್ರೊ. ಬಾಬು ಮ್ಯಾಥ್ಯು, ಕರ್ನಾಟಕದ ಉಪ ಕಾರ್ಮಿಕ ಆಯುಕ್ತರಾದ ಕೆ. ಜಿ. ಜಾನ್ಸನ್, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಬಿ.ಕೆ. ಹೊಸ ಕಾರ್ಮಿಕರ ಸಂಹಿತೆಯ ಕುರಿತು ವಿಚಾರ ಮಂಡಿಸಿ, ಸಂವಾದ ನಡೆಸಿದರು. ನಂತರ ಸಮಾರೋಪ ಭಾಷಣವನ್ನು ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ ನೆರ್ವವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಪ್ರೊ. ಬಾಬು ಮ್ಯಾಥ್ಯು, ಕರ್ನಾಟಕದ ಉಪ ಕಾರ್ಮಿಕ ಆಯುಕ್ತರಾದ ಕೆ. ಜಿ. ಜಾನ್ಸನ್, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಬಿ.ಕೆ., ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಡಾ. ರಶ್ಮಿ ಶೆಟ್ಟಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ., ಕಾನೂನು ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ., ಕಾನೂನು ಸಹಾಯಕ ಪ್ರಾಧ್ಯಾಪಕಿ ಸುಭಾಷಿನಿ ಜೆ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ. ಎಂ. ಕಾರ್ಯಕ್ರಮ ನಿರೂಪಿಸಿದರು.