






ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.


ಶಿರಾಡಿ ಗ್ರಾಮದ ದೇರಾಣೆ ಮನೆ ನಿವಾಸಿ ಸುರೇಶ್ ಕೆ.ಕೆ. ಅವರಿಗೆ ಸೇರಿದ ಆಂಬ್ಯುಲೆನ್ಸ್ ಕಳವುಗೊಂಡಿದೆ. ಸುರೇಶ್ ಕೆ.ಕೆ.ಅವರು ಡಿ.19ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಬಂದು ಆಂಬ್ಯುಲೆನ್ಸ್ ಸ್ವಚ್ಛಗೊಳಿಸಿ ತುರ್ತು ಕರೆಗಳಿಗಾಗಿ ಕಾಯುತ್ತಿದ್ದರು. ಆದರೆ ಸಂಜೆ ತನಕ ಯಾವುದೇ ತುರ್ತು ಕರೆಗಳು ಬರದೇ ಇದ್ದುದರಿಂದ, ರಾತ್ರಿ ಸುಮಾರು 8.30 ಗಂಟೆಗೆ ಗುಂಡ್ಯ ಚೆಕ್‌ಪೋಸ್ಟ್ ಬಳಿ ಆಂಬ್ಯುಲೆನ್ಸ್ ನಿಲ್ಲಿಸಿ ಲಾಕ್ ಮಾಡಿ, ತುರ್ತು ಸಂದರ್ಭಗಳಲ್ಲಿ ಬದಲಿ ಚಾಲಕರ ಅನುಕೂಲಕ್ಕಾಗಿ ವಾಹನದ ಕೀಲಿಯನ್ನು ಆಂಬ್ಯುಲೆನ್ಸ್ನ ಮ್ಯಾಟ್‌ನ ಕೆಳಗೆ ಇಟ್ಟು ಮನೆಗೆ ತೆರಳಿದ್ದರು. ಡಿ.20ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಮರಳಿ ಬಂದು ನೋಡಿದಾಗ ಹಿಂದಿನ ರಾತ್ರಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ವಾಹನ ಸ್ಥಳದಲ್ಲಿಲ್ಲದೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಆಂಬ್ಯುಲೆನ್ಸ್ ವಾಹನದ ಮೌಲ್ಯ ರೂ.75 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುರೇಶ್ ಕೆ.ಕೆ. ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












