ವಿಟ್ಲ: ಅಂಗಡಿಗಳು ಬೆಂಕಿಗಾಹುತಿಯಾದ ಪ್ರಕರಣ : ರೂ. 1.20 ಕೋಟಿ ನಷ್ಟ- 5 ಪ್ರಕರಣ ದಾಖಲು

0

ವಿಟ್ಲ : ಎಲೆಕ್ಟ್ರಾನಿಕ್ಸ್ ಅಂಗಡಿ, ವೈನ್ ಶಾಪ್, ಹೊಟೇಲ್, ಟೈಲರ್ ಶಾಪ್, ಫಾಸ್ಟ್ ಫುಡ್ ಅಂಗಡಿ, ಡ್ರೈವಿಂಗ್ ಸ್ಕೂಲ್ ಬೆಂಕಿಗಾಹುತಿಯಾಗಿ ಅಕ್ಕಪಕ್ಕದ ಕೆಲವೊಂದು ಅಂಗಡಿ, ಮನೆಗಳಿಗೆ ಹಾನಿಯಾದ ಘಟನೆ ಡಿ.31ರಂದು ರಾತ್ರಿ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ಸಮೀಪದ ಮಂಗಳೂರು ರಸ್ತೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 5 ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.


ಮಂಗಳೂರು ರಸ್ತೆಯಲ್ಲಿರುವ ಸಂತೋಷ್ ಕುಮಾರ್ ಕೊಡಂಗೆ ಮಾಲಕತ್ವದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ರಾತ್ರಿ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬಳಿಕ ಅದು ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪಿ ಪಕ್ಕದ ಡ್ರೈವಿಂಗ್ ಸ್ಕೂಲ್, ಹೊಟೇಲ್, ವೈನ್ ಶಾಪ್, ಟೈಲರಿಂಗ್ ಶಾಪ್, ಫಾಸ್ಟ್ ಫುಡ್ ಅಂಗಡಿಗೂ ಹಬ್ಬಿದೆ.
ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಬೆಂಕಿ ಕೆನ್ನಾಲಗೆ ಸುತ್ತ ಮುತ್ತಲ ಅಂಗಡಿಗಳಿಗೆ ಆವರಿಸಿತ್ತು. ಬಳಿಕ ಬಂಟ್ವಾಳದಿಂದ ಆಗಮಿಸಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ನಾಗರಿಕರ ಸಹಕಾರದಲ್ಲಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು.


ಒಟ್ಟು ಐದು ಪ್ರಕರಣ:
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಫೈವ್ ಸ್ಟಾರ್ ವೈನ್ಸ್ ಮತ್ತು ಹೊಟೇಲ್ ನಲ್ಲಿ ಹಾನಿಯಾಗಿರುವ ಕುರಿತು ಜಗನ್ನಾಥ ಸಾಲ್ಯಾನ್ , ಎಲೆಕ್ಟ್ರಾನಿಕ್ ಸಂಸ್ಥೆಯ ಮಾಲಕ ಸಂತೋಷ್ ಕುಮಾರ್ ಕೊಡಂಗೆ, ಟೈಲರಿಂಗ್ ಅಂಗಡಿಯ ಮಾಲಕ ಸಂಜೀವ, ಫಾಸ್ಟ್ ಫುಡ್ ಅಂಗಡಿ ಮಾಲಕರಾದ ಮಹೇಶ್ ಹಾಗೂ ಡ್ರೈವಿಂಗ್ ಸ್ಕೂಲ್ ಮಾಲಕರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.


ಘಟನೆಯಿಂದಾಗಿ ಎಲೆಕ್ಟ್ರೋನಿಕ್ಸ್ ಅಂಗಡಿಯಲ್ಲಿದ್ದ ಸಾಮಾಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದ್ದು ಸುಮಾರು ಎಂಬತ್ತು ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.ಒಟ್ಟು ಘಟನೆಯಿಂದಾಗಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.


ಸ್ಕೂಟರ್, ಪಕ್ಕದ ಬಾಡಿಗೆ ಮನೆಗಳಿಗೂ ಹಾನಿ:
ಬೆಂಕಿ ಅವಘಡದಿಂದಾಗಿ ಎಲೆಕ್ಟ್ರೋನಿಕ್ಸ್ ಸಂಸ್ಥೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಬೆಂಕಿಗಾಹುತಿಯಾಗಿದೆ. ಅಂಗಡಿ ಹಿಂಭಾಗದಲ್ಲಿರುವ ಬಾಡಿಗೆ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಎಲೆಕ್ಟ್ರೋನಿಕ್ಸ್ ಅಂಗಡಿಗೆ ಬೆಂಕಿ ತಗುಲಿ ಅದು ಪಕ್ಕದ ಕಟ್ಟಡಕ್ಕೆ ಪಸರಿಸುತ್ತಿದ್ದಂತೆ ವೈನ್ ಶಾಪ್ ಅಂಗಡಿಯವರು ಮದ್ಯದ ಬಾಟಲಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು. ಇದರಿಂದಾಗಿ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದಂತಾಗಿದೆ. ವೈನ್ ಶಾಪ್‌ನ ಫರ್ನೀಚರ್ ಹಾಗೂ ಎಲೆಕ್ಟ್ರೋನಿಕ್ಸ್ ಉಪಕರಣಗಳು ಬೆಂಕಿಗಾಹುತಿಯಾಗಿದೆ.


ರಮಾನಾಥ ರೈ ಭೇಟಿ:
ಅಂಗಡಿಗಳು ಬೆಂಕಿಗಾಹುತಿಯಾಗಿರುವ ಸ್ಥಳಕ್ಕೆ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸಿ ಪರಿಶೀಲನೆ ನಡೆಸಿ ಅಂಗಡಿ ಮಾಲಕರಿಂದ ಮಾಹಿತಿ ಸಂಗ್ರಹಿಸಿ, ಅವರಿಗೆ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು. ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕುವ ಸಾಧ್ಯತೆಗಳಿವೆಯೇ ಎಂಬ ಬಗ್ಗೆ ಚರ್ಚಿಸುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭ ಕೊಳ್ನಾಡು ಕಾಂಗ್ರೆಸ್ ಮುಖಂಡ ಪವಿತ್ರ ಪೂಂಜಾ ಕೊಡಂಗೆ, ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಹಿರಿಯ ವಿದ್ಯುತ್ ಗುತ್ತಿಗೆದಾರ ಲಕ್ಷ್ಮಿನಾರಾಯಣ ಅಡ್ಯಂತಾಯ ಕುದ್ರಿಯ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿ ಪಂ.ಸದಸ್ಯ ಸಿದ್ದೀಕ್ ಸರವು ಮೊದಲಾದವರು ಉಪಸ್ಥಿತರಿದ್ದರು.


ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದ ತಂಡ ಭೇಟಿ:
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ನೇತೃತ್ವದ ತಂಡ ಅಗ್ನಿ ದುರಂತ ಸಂಭವಿಸಿದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್,,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ದ ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ. ಬ್ಲಾಕ್ ಉಪಾಧ್ಯಕ್ಷರಾದ ದಿನಕರ ಆಳ್ವ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ,ವಿಟ್ಲ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here