ಭಕ್ತಕೋಡಿಯಲ್ಲಿ ಧ್ವಜ ತೆರವು ಪ್ರಕರಣ: ತೆರವು ಮಾಡಿದ ಧ್ವಜಕ್ಕೂ, ದೇವಸ್ಥಾನಕ್ಕೂ ಸಂಬಂಧವಿಲ್ಲ-ಶಿವನಾಥ ರೈ ಮೇಗಿನಗುತ್ತು ಸ್ಪಷ್ಟನೆ

0

ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್‌ನಲ್ಲಿ ಧ್ವಜ ಅಳವಡಿಸಿ ಬಳಿಕ ಅದು ವಿವಾದವಾದಾಗ ಅದನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಅಧಿಕಾರಿಗಳು ತೆರವು ಮಾಡಿದ ತಕ್ಷಣ ಅದನ್ನು ಜಾತ್ರೋತ್ಸವದ ಧ್ವಜ ಎಂದು ಅಪಪ್ರಚಾರ ಮಾಡಿ, ಕಾಂಗ್ರೆಸ್ ಸರಕಾರ ಧ್ವಜವನ್ನು ಕಿತ್ತು ಹಾಕಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಮಾಧ್ಯಮಗಳಲ್ಲೂ ಜಾತ್ರೆಯ ಧ್ವಜ ತೆರವು ಎಂಬಂತೆ ಸುದ್ದಿ ಪ್ರಸಾರವಾಗಿದೆ. ವಾಸ್ತವದಲ್ಲಿ ಭಕ್ತಕೋಡಿಯಲ್ಲಿ ಸರ್ವೆ ಜಾತ್ರೆಯ ಧ್ವಜವನ್ನು ಹಾರಿಸಿಲ್ಲ ಮತ್ತು ಅವರಲ್ಲಿ ಜಾತ್ರೆ ಸಲುವಾಗಿ ನಾವು ಧ್ವಜವನ್ನು ಹಾಕಲೂ ಹೇಳಿಲ್ಲ, ಸರ್ವೆ ಜಾತ್ರೆಗೂ ಆ ಧ್ವಜ ಅಳವಡಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಸ್ಪಷ್ಟನೆ ನೀಡಿದ್ದಾರೆ.

ಜಾತೋತ್ಸವದ ಧ್ವಜವನ್ನು ನಮ್ಮ ಆಡಳಿತ ಸಮಿತಿ,ಊರ ಭಕ್ತಾಧಿಗಳು, ಹಿಂದೂ ಜಾಗರಣ ವೇದಿಕೆ, ಬಿಜೆಪಿ ಪಕ್ಷದ ಕಾರ್ಯಕರ್ತರು ಎಲ್ಲರೂ ಅಳವಡಿಸಿದ್ದೇವೆ. ಅದರಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ನಮ್ಮ ಜಾತ್ರೋತ್ಸವದ ಯಶಸ್ಸಿಗೆ ಸರ್ವೆ ಗ್ರಾಮದ ಹಿಂದೂ ಜಾಗರಣ ವೇದಿಕೆ, ಬಿಜೆಪಿ, ಕಾಂಗ್ರೆಸ್ ಹೀಗೆ ಎಲರೂ ಸೇರಿ ಒಗ್ಗಟ್ಟಿನಿಂದ ಯಶಸ್ವಿಗೊಳಿಸಲು ಶ್ರಮಿಸಿದ್ದೇವೆ. ಇಂತಹ ಸಂದರ್ಭದಲ್ಲಿ ವಿಘ್ನ ಸಂತೋಷಿಗಳು ದೇವಸ್ಥಾನದ ಜಾತ್ರೆಯ ಹೆಸರನ್ನು ಎಳೆದು ತಂದಿರುವುದು ವಿಷಾದನೀಯ. ಇದೇ ವಿಚಾರದಲ್ಲಿ ಬಿಜೆಪಿಯ ರಾಜ್ಯ, ತಾಲೂಕು ಮಟ್ಟದ ನಾಯಕರು ಬಿಜೆಪಿ ನಾಯಕರು ಖಂಡನಾ ಸಭೆ ನಡೆಸಿರುವುದು ಹಾಸ್ಯಾಸ್ಪದವಾಗಿದೆ.
ದೇವಸ್ಥಾನದ ಜಾತ್ರೆಯ ಧ್ವಜವನ್ನು ಯಾರೂ ತೆಗೆದಿಲ್ಲ, ತೆಗೆಯುವುದೂ ಇಲ್ಲ, ಖಾಸಗಿಯಾಗಿ ಹಾಕಿದ ಧ್ವಜವನ್ನು ಪಂಚಾಯತ್ ಅಧಿಕಾರಿಗಳು ಪೊಲೀಸರ ನೆರವಿನಿಂದ ತೆರವುಗೊಳಿಸಿರುತ್ತಾರೆ ಇದು ಪಂಚಾಯತ್ ಹಾಗೂ ಅಧಿಕಾರಿಗಳ ಶಾಂತಿ ಸಾಮರಸ್ಯ ಕಾಪಾಡುವ ಕಾರ್ಯಾಚರಣೆಯಾಗಿದ್ದು ಬೇರೆ ಯಾವುದೇ ದುರುದ್ದೇಶಗಳಿರುವುದಿಲ್ಲ, ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ಒಗ್ಗಟ್ಟಾಗಿ ನಡೆದ ಸರ್ವೆ ಜಾತ್ರೆಗೆ ಈ ರೀತಿಯ ವಿವಾದದ ಬಣ್ಣ ಹಚ್ಚುವುದು ಖಂಡನೀಯ ಎಂದು ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಶಿವನಾಥ ರೈ ಮೇಗಿನಗುತ್ತು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here