







ದಲಿತ ಸಮುದಾಯದ 35 ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ-ಶಾಸಕ ಅಶೋಕ್ ರೈ


ಪುತ್ತೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪುತ್ತೂರು ಸೇರಿದಂತೆ ರಾಜ್ಯದಲ್ಲಿ ದಲಿತರ ಶ್ರೇಯೋಭಿವೃದ್ದಿಗೆ ಸರಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಪುತ್ತೂರು ದಲಿತ ಸಮುದಾಯ ಅಂಬೇಡ್ಕರ್ ಭವನಕ್ಕೆ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅವರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.




ಅವರು ಬನ್ನೂರಿನಲ್ಲಿ ಸುಮಾರು 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಪುತ್ತೂರು ಮತ್ತು ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಅನುದಾನ ಮಂಜೂರಾಗಿದೆ. ಈ ಎರಡು ಬೇಡಿಕೆಗಳಿಗೆ ಅನೇಕ ವರ್ಷಗಳ ಹಿನ್ನೆಲೆ ಇದೆ. ಇದಕ್ಕಾಗಿ ದಲಿತ ಸಂಘಟನೆಗಳು ಹೋರಾಟ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಈ ಸಮುದಾಯದ ಮಂದಿ ಕಬಕದಿಂದ ಕಚೇರಿ ತನಕ ಪಾದಯಾತ್ರೆಯ ಮೂಲಕ ಬಂದು ಮನವಿ ಸಲ್ಲಿಸಿದ್ದರು ಅವರಿಗೆ ಕೊಟ್ಟ ಮಾತಿನಂತೆ ಅಂಬೇಡ್ಕರ್ ಭವನ ಮಂಜೂರು ಮಾಡಿದ್ದೇನೆ ಎಂದು ಶಾಸಕರು ಹೇಳಿದರು.
ದಲಿತ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರಬಹುದು ಆದರೆ ಅವರ ಹೋರಾಟದ ಹಾದಿ ನ್ಯಾಯಯುತವಾಗಿದೆ. ನ್ಯಾಯಯುತ ಹೋರಾಟ ಮಾಡುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ನಾನು ಮುಂದೆಯೂ ಈ ಸಮುದಾಯದ ಪರವಾಗಿ ನಿಲ್ಲುತ್ತೇನೆ ದಲಿತರು ಕೂಡಾ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇರುವುದಾಗಿ ಶಾಸಕರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಪರ ಸಿಎಂ ಆಗಿದ್ದು ಅವರಿಗೆ ಸಮುದಾಯದ ಪೂರ್ಣ ಬೆಂಬಲ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಅಶೋಕ್ ರೈ ಶೋಷಿತರ ಪರ-ಸೇಸಪ್ಪ ಬೆದ್ರಕಾಡು
ಪುತ್ತೂರು ಶಾಸಕ ಅಶೋಕ್ ರೈ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅಂಬೇಡ್ಕರ್ ಭವನಕ್ಕಾಗಿ ನಾವು 35 ವರ್ಷಗಳಿಂದ ಹೋರಾಟ ಮಾಡುತ್ತಿದ್ರೂ ನಮ್ಮ ನೋವು ಕೇಳಿದ್ದು ಅಶೋಕ್ ರೈ ಅವರಿಗೆ ಮಾತ್ರ.ಪುತ್ತೂರಿನಲ್ಲಿ ದಲಿತರ ಬೇಡಿಕೆಗಳಿಗೆ ಮನ್ನಣೆ ಸಿಗಬೇಕಾದರೆ ಅಶೋಕ್ ರೈ ಅವರೇ ಪುತ್ತೂರಲ್ಲಿ ಶಾಸಕರಾಗಿ ಇರಬೇಕು. ಬಡವರ ಮೇಲೆ ಅಪಾರ ಕಾಳಜಿ ಇರುವ ಶಾಸಕರಿಗೆ ದಲಿತ ಸಮುದಾಯದ ಪೂರ್ಣ ಬೆಂಬಲ ಮುಂದಿನ ದಿನಗಳಲ್ಲಿ ನೀಡಲಿದ್ದೇವೆ. ಪುತ್ತೂರು ಮತ್ತು ವಿಟ್ಲದಲ್ಲಿ ಏಕಕಾಲದಲ್ಲಿ ಅಂಬೇಡ್ಕರ್ ಭವನ ಮಂಜೂರಾಗಿದ್ದು ನಮ್ಮ ಸಮುದಾಯದ ಸುದಿನಕ್ಕೆ ಕಾರಣವಾಗಿದೆ ಎಂದು ದಲಿತ ಸೇವಾ ಸಮಿತಿ ಮುಖಂಡ ಸೇಸಪ್ಪ ಬೆದ್ರಕಾಡು ಹೇಳಿದರು.
ಅಂಬೇಡ್ಕರ್ ಭವನಕ್ಕಾಗಿ ನಾವು ರಸ್ತೆ ತಡೆ ಮಾಡಿದರೂ ಪ್ರಯೋಜನವಾಗಿರಲಿಲ್ಲ: ಸೇಸಪ್ಪ ನೆಕ್ಕಿಲು
ಅಂಬೇಡ್ಕರ್ ಭವನಕ್ಕಾಗಿ ನಾವು ಏನೆಲ್ಲಾ ಹೋರಾಟ ಮಾಡಿದ್ದೆವು. ಕೊನೆಗೆ ರಸ್ತೆ ತಡೆಯನ್ನೂ ಮಾಡಿದ್ದೆವು ಆದರೆ ನಮ್ಮ ಹೋರಾಟಕ್ಕೆ ಯಾವ ಜನಪ್ರತಿನಿಧಿಯೂ ಗೌರವ ಕೊಟ್ಟಿರಲಿಲ್ಲ ಮತ್ತು ಬೆಲೆ ಕೊಟ್ಟಿರಲಿಲ್ಲ. ನಮ್ಮ ಬೇಡಿಕೆ ಈಡೇರಬೇಕಾದರೆ ಅಶೋಕ್ ರೈ ಅವರೇ ಶಾಸಕರಾಗಿ ಬಂದದ್ದು ನಮಗೆ ಅತೀವ ಸಂತೋಷವಾಗಿದೆ. ಶಾಸಕರ ನೇತೃತ್ವದಲ್ಲೇ ಇದಕ್ಕೆ ಅನುದಾನ ಬಂದಿದ್ದು ಅವರ ಮೂಲಕವೇ ಇದರ ಉದ್ಘಾಟನೆಯೂ ನಡೆಯಲಿದೆ. ದಲಿತ ಸಮುದಾಯದ ಪರ ಧ್ವನಿ ಎತ್ತುವ ಯಾವ ಶಾಸಕರೂ ಈ ಹಿಂದೆ ಪುತ್ತೂರಲ್ಲಿ ಬಂದಿಲ್ಲ ಎಂದು ದಲಿತ ಮುಖಂಡ ಸೇಸಪ್ಪ ನೆಕ್ಕಿಲು ಹೇಳಿದರು.
ದಲಿತ ಮುಖಂಡ ಬಿ ಕೆ ಅಣ್ಣಪ್ಪ ಮಾತನಾಡಿ ಅಂಬೇಡ್ಕರ್ ಭವನಕ್ಕೆ ದಲಿತರು ಮಾಡಿದ ಹೋರಾಟಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ವಿಜಯಲಕ್ಷ್ಮಿ, ಗುತ್ತಿಗೆದಾರ ಆಶಿಕ್ ಕುಂಬ್ರ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂರ್ಣೆಶ್ ಭಂಡಾರಿ, ಅಂಗಾರ ಹಾರಾಡಿ, ಸುಂದರ ಕೇಪುಳು, ರಾಜು ಹೊಸ್ಮಠ, ಮಂಜುಳ, ಬೂತ್ ಅಧ್ಯಕ್ಷೆ ಸಹಿರಾ ಬಾನು, ಆಸಿಫ್, ಗಣೇಶ್ ಕಾರೆಕ್ಕಾಡು, ಪ್ರಕಾಶ್ ಹಾರಾಡಿ, ಪದ್ಮನಾಭ ಜಿಡೆಕಲ್ಲು, ಮೋನಪ್ಪ ಕೆರೆಮೂಲೆ, ದಾಮೋದರ ಮುರ, ಮನೋಹರ್ ಕೋಡಿಜಾಲ್, ಶಿವುನಗರ, ಹಕೀಂ ಬೊಳುವಾರು, ಜಯ ಕಾರೆಕ್ಕಾಡು, ಹೊನ್ನಪ್ಪ ಕುಂಜೂರುಪಂಜ, ಪ್ರಶಾಂತ್ ಹಾರಾಡಿ, ವಲ್ಪಿ ಕೆರೆಮೂಲೆ, ಬದ್ರುನ್ನಿಸಾ ಪರ್ಪುಂಜ, ವಿಜಯಲಕ್ಷ್ಮಿ, ಗುರುವ ಮರಿಕೆ, ವಸಂತ ಕಾರೆಕ್ಕಾಡು, ಚೆನ್ನಪ್ಪ ಮರಿಕೆ, ಗೀತಾ ಚೆನ್ನಪ್ಪ, ಲಲಿತಾ, ಶೌಕತ್ ಕೆಮ್ಮಾರ ಉಪಸ್ಥಿತರಿದ್ದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಸ್ವಾಗತಿಸಿ, ಎಸ್ ಸಿ ಘಟಕದ ಬ್ಲಾಕ್ ಅಧ್ಯಕ್ಷ ಬಾಬು ಮರಿಕೆ ವಂದಿಸಿದರು.










