






ಪುತ್ತೂರು:2025-26ನೇ ಸಾಲಿನಲ್ಲಿ 251.06 ಕೋಟಿ ರೂ.ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು 2259.65 ಕೋಟಿ ಅನುದಾನ ಬಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.


ಶಾಸಕರ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದು ರಾಜ್ಯ ಸರಕಾರ ಎಲ್ಲಾ ಶಾಸಕರಿಗೆ ರಸ್ತೆಗಳ ಅಭಿವೃದ್ಧಿಗಾಗಿ ತಲಾ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.ಇದರಲ್ಲಿ ಸುಮಾರು 550 ರಸ್ತೆಗಳ ಕಾಮಗಾರಿಗೆ ಹಣ ಮೀಸಲಿಟ್ಟಿದ್ದೇನೆ.79 ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಒಟ್ಟು 629 ಕಾಮಗಾರಿಗಳಿಗೆ ಟೆಂಡರ್ ಆಗಿ ಶೇ.13ರಷ್ಟು ಹಣ ಬಿಡುಗಡೆಯಾಗಿದ್ದು ಮುಂದಿನ 15ರಿಂದ 20 ದಿನಗಳ ಒಳಗಾಗಿ 5 ಗುತ್ತಿಗೆದಾರರ ಮೂಲಕ ತಲಾ 10 ಕೋಟಿಯ ಕಾಮಗಾರಿ ನಿರ್ವಹಣೆ ಮೂಲಕ 629 ಕಾಮಗಾರಿಗಳು ನಡೆಯಲಿದೆ ಎಂದು ತಿಳಿಸಿದರು.



ನಾನು ಶಾಸಕನಾದ ಬಳಿಕ 2023-24ನೇ ಸಾಲಿನಲ್ಲಿ 1479.59 ಕೋಟಿ ರೂ, 2024-25ನೇ ಸಾಲಿನಲ್ಲಿ 529 ಕೋಟಿ ರೂ.ಹಾಗೂ 2025-26ನೇ ಸಾಲಿನಲ್ಲಿ 251.06 ಕೋಟಿ ರೂ ಸೇರಿದಂತೆ ಈವರಗೆ ಒಟ್ಟು ಈ 2259.65 ಕೋಟಿ ರೂ. ಅನುದಾನ ಪುತ್ತೂರು ಕ್ಷೇತ್ರಕ್ಕೆ ಬಂದಿದೆ.ಇದರಲ್ಲಿ ಸುಮಾರು 300 ಕೋಟಿ ರೂ.ಗಳಷ್ಟು ಅನುದಾನದ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.ರಸ್ತೆ ಅನುದಾನದಲ್ಲಿ 85 ಕಿ.ಮೀ.ಗಳ ರಸ್ತೆ ದುರಸ್ತಿಯಾಗಲಿದೆ.ಕಿ.ಮೀಗೆ ತಲಾ ಒಂದು ಕೋಟಿ ರೂ.ಅನುದಾನದ ಬೇಡಿಕೆ ಕುರಿತ ಪ್ರಸ್ತಾವನೆ ಸರಕಾರದಲ್ಲಿದೆ.ಈಗಾಗಲೇ 38 ಕಿ.ಮೀ.ಗೆ 38 ಕೋಟಿ ರೂ.ಅನುದಾನಕ್ಕೆ ಸರಕಾರ ಅಂಗೀಕಾರದ ಆಗಿದ್ದು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.30 ಕೋಟಿ ರೂ ಅನುದಾನ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.
ಮೆಡಿಕಲ್ ಆಸ್ಪತ್ರೆಗೆ ಡಿಪಿಆರ್‌ಗೆ 450 ಕೋಟಿ ರೂ:
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪೂರಕವಾಗಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 450 ಕೋಟಿ ರೂ.ಅಂದಾಜು ಪಟ್ಟಿ ಮಾಡಲಾಗಿದೆ.ಇದಕ್ಕೆ ಸರಕಾರದಿಂದ ಅನುಮತಿ ಕೂಡ ಸಿಕ್ಕಿದೆ.ಹಣಕಾಸು ಸಚಿವರಿಂದ ಅಪ್ರೂವಲ್ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಕ್ಯಾಬಿನೆಟ್‌ಗೆ ಹೋಗುತ್ತದೆ.ಇದರ ಅನುದಾನ ಸೇರಿ ಒಟ್ಟು 2709.65 ಪುತ್ತೂರಿಗೆ ಬಂದ ಹಾಗೆ ಆಗುತ್ತದೆ ಎಂದರು.
ಹಿಂದೂ ದೇವಾಲಯ, ಬಸದಿ, ಅಲ್ಪಸಂಖ್ಯಾತ ಸಮುದಾಯಗಳಿಗೂ ಅನುದಾನ:
ಹಿಂದೂ ಧರ್ಮದ ದೇವಾಲಯಗಳಿಗೆ 8 ಕೋಟಿ ರೂ. ಅನುದಾನವನ್ನು ಈ ವರ್ಷದ ಬಜೆಟ್‌ನಲ್ಲಿ ಇಟ್ಟಿದ್ದೇವೆ.ಯಾವ ಸರಕಾರ ಕೂಡ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಅನುದಾನ ನೀಡಲಿಲ್ಲ.ಕಳೆದ ಬಾರಿ 3 ಕೋಟಿ ರೂ. ಇಟ್ಟಿದ್ದೇವೆ.ಈ ಬಾರಿ 8 ಕೋಟಿ ರೂ ಇಟ್ಟಿದ್ದೇವೆ.ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಯಲ್ಲಿ ದೇವಾಲಯದ ಪೂರ್ತಿ ಕೆರೆ ಅಭಿವೃದ್ಧಿ ಆಗುತ್ತದೆ ಎಂದ ಶಾಸಕರು,ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಳೆದ ಬಾರಿ 3 ಕೋಟಿ ರೂ. ಬಳಿಕ 5 ಕೋಟಿ ರೂ. ಅನುದಾನ ಬಂದಿದೆ.ಈ ಬಾರಿ 9 ಕೋಟಿ ರೂ ಅನುದಾನ ಮಂಜೂರಾತಿ ಹಂತದಲ್ಲಿದೆ.ಜೈನ ಧರ್ಮದವರಿಗೆ ಉಪ್ಪಿನಂಗಡಿ ಬಸದಿಗೆ 1 ಕೋಟಿ ರೂ., ಬಜತ್ತೂರು ಬಸದಿಗೆ 1 ಕೋಟಿ ರೂ ಅನುದಾನ ಸೇರಿದಂತೆ 2 ಕೋಟಿ ರೂ. ಅನುದಾನ ನೀಡುವ ಕೆಲಸ ಮಾಡಿದ್ದೇವೆ ಎಂದರು.
ಕಬಕ-ವಿಟ್ಲ 4 ಲೇನ್ ರಸ್ತೆಗೆ 25 ಕೋಟಿ ರೂ.:
ಕಬಕದಿಂದ ವಿಟ್ಲದವರೆಗೆ 4 ಲೇನ್ ಕಾಂಕ್ರೀಟ್ ರಸ್ತೆಗೆ ಪ್ರಸ್ತಾವನೆ ಇಟ್ಟಿದ್ದು ಈಗಾಗಲೇ 10 ಕೋಟಿ ರೂ. ಮಂಜೂರು ಆಗಿದೆ. ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿಯ ಅಪೆಂಡಿಕ್ಸ್ ಇ.ಯ 30 ಕೋಟಿ ರೂ. ಅನುದಾನದಲ್ಲಿ 15 ಕೋಟಿ ರೂ. ಈ ರಸ್ತೆಗೆ ಇಡುವ ಕೆಲಸ ಮಾಡುತ್ತೇನೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.
ಪುತ್ತೂರು- ಉಪ್ಪಿನಂಗಡಿ ರಸ್ತೆಗೆ 12 ಕೋಟಿ ರೂ:
ಪುತ್ತೂರು- ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ 12 ಕೋಟಿ ರೂ.ಗಳ ಟೆಂಡರ್ ಕ್ಯಾಬಿನೆಟ್‌ಗೆ ಬಂದಿದ್ದು ಮುಂದಿನ ದಿನಗಳಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಪೂರ್ತಿ 4 ಲೇನ್ ಕಾಂಕ್ರಿಟೀಕರಣವಾಗಲಿದೆ.ಕೃಷ್ಣನಗರದಿಂದ ಉಪ್ಪಿನಂಗಡಿವರೆಗೆ ರಸ್ತೆ ಮಧ್ಯೆ ಲೈಟ್ ಅಳವಡಿಸಲು 5 ಕೋಟಿ ರೂ ಮಂಜೂರು ಆಗಿದೆ ಎಂದರು.
ಕೊಂಬೆಟ್ಟಿನಲ್ಲಿ ಮಹಿಳಾ ಠಾಣೆ:
ಮಹಿಳಾ ಪೊಲೀಸ್ ಠಾಣಾ ಕಟ್ಟಡಕ್ಕೆ 1 ಕೋಟಿ ರೂ.ಅನುದಾನ ನೀಡುವುದಾಗಿ ಈ ಹಿಂದೆಯೇ ಮುಖ್ಯಮಂತ್ರಿಯವರು ಹೇಳಿದ್ದಾರೆ.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ 9 ಸೆಂಟ್ಸ್ ಜಾಗವನ್ನು ಮಹಿಳಾ ಪೊಲೀಸ್ ಠಾಣೆಗಾಗಿ ನೀಡಲಾಗಿತ್ತು.ಎಸ್‌ಪಿಯವರ ಬೇಡಿಕೆಯಂತೆ ಹೆಚ್ಚುವರಿ ಜಾಗಕ್ಕಾಗಿ ಅದನ್ನು ರದ್ದು ಮಾಡಿ ಕೊಂಬೆಟ್ಟಿನಲ್ಲಿ 30 ಸೆಂಟ್ಸ್ ಜಾಗ ಕೊಡುವ ಕೆಲಸ ಮಾಡಿದ್ದೇವೆ.ಅಲ್ಲಿ ಮಹಿಳಾ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣವಾಗಲಿದೆ.
ಬಡವರಿಗೆ ನಿವೇಶನ:
ಬಡವರಿಗೆ ನಿವೇಶನ ಒದಗಿಸುವ ಕೆಲಸ ಪ್ರಗತಿಯಲ್ಲಿದೆ.ಮುಂದಿನ 5 ತಿಂಗಳಿನೊಳಗೆ ನನ್ನ ಕ್ಷೇತ್ರದಲ್ಲಿ 2 ಸಾವಿರ ಜನರಿಗೆ ನಿವೇಶನ ಕೊಡುವ ಕೆಲಸ ಆಗಲಿದೆ.800 ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ.ಪುತ್ತೂರು ಕ್ಷೇತ್ರದಲ್ಲಿ ಯಾರೂ ಕೂಡ ಮನೆ ಇಲ್ಲದೆ, ಕರೆಂಟ್ ಇಲ್ಲದೆ, ನೀರು ಇಲ್ಲದೆ ಇರಬಾರದು.ನಮ್ಮ ಟ್ರಸ್ಟ್ ಮುಖಾಂತರ ವಿಟ್ಲ ಮುಡ್ನೂರು ಗ್ರಾಮದಲ್ಲಿ 8 ಎಕರೆ ಜಾಗ ಖರೀದಿ ಮಾಡಿ 168 ಸೈಟ್ ಮಾಡಲಾಗಿದೆ.ಈ ಸೈಟ್‌ಗಳನ್ನು ಬಾಡಿಗೆ ಮನೆಯಲ್ಲಿರುವ ವಿಧವೆಯವರಿಗೆ ನೀಡಲಾಗುವುದು.ಅವರಿಗೆ ಮನೆ ಮಟ್ಟಿಕೊಡುವ ಕಲ್ಪನೆ ಕೂಡ ಇದೆ ಎಂದು ಶಾಸಕರು ಹೇಳಿದರು.
ಮುಂಡೂರುನಲ್ಲಿ 15.5 ಎಕ್ರೆ ಜಾಗ ಮೈದಾನ ನಿರ್ಮಾಣಕ್ಕೆ ಮಂಜೂರು ಆಗಿದ್ದು 9.5 ಕೋಟಿ ರೂ. ಅನುದಾನದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ.ಕುರಿಯದಲ್ಲಿ 7 ಎಕ್ರೆ ಜಾಗ ಕಾರ್ಮಿಕರ ವಸತಿ ಶಾಲೆಗೆ ಮಂಜೂರಾಗಿದ್ದು 38 ಕೋಟಿ ರೂ.ಟೆಂಡರ್ ಆಗಿದೆ.ಪಿಡಬ್ಲ್ಯೂಡಿ ರಸ್ತೆಯಲ್ಲಿ ಸಂಟ್ಯಾರು-ಬೆಟ್ಟಂಪಾಡಿ-ಪಾಣಾಜೆ ರಸ್ತೆಯಲ್ಲಿ 3 ಕಿ.ಮೀ. ರಸ್ತೆ ದುರಸ್ತಿಯಾಗಿದೆ.ಮುಂದಿನ ಅಭಿವೃದ್ಧಿಗಾಗಿ 6 ಕೋಟಿ ರೂ. ಇಡಲಾಗಿದೆ.
ವಸತಿ ಯೋಜನೆ ಅನುದಾನ ಹೆಚ್ಚಳ:
ಸರಕಾರದ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ರೂ.1.5 ಲಕ್ಷದವರೆಗೆ ಸಿಗುತ್ತಿದ್ದ ಮೊತ್ತವನ್ನು 3.5 ಲಕ್ಷದವರೆಗೆ ಏರಿಕೆ ಮಾಡಲಾಗಿದೆ ಎಂದರು.
ಆರ್ಯಾಪು ಗ್ರಾಮದ ಕೊಲ್ಯದಲ್ಲಿರುವ ಸುಮಾರು 120 ಮನೆಗಳಿಗೆ ತಡೆಗೋಡೆ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಮಂಜೂರು ಆಗಿದೆ.ಹವಾಮಾನ ಬೆಳೆ ವಿಮೆ ಪರಿಹಾರದಲ್ಲಿ ಅಽಕಾರಿಗಳು ನೀಡಿದ ಮಾಹಿತಿಯಿಂದ ಸಮಸ್ಯೆಯಾಗಿದೆ.ಫೆಬ್ರವರಿ ಮೊದಲ ವಾರದಲ್ಲಿ ಸಮಸ್ಯೆ ಪರಿಹಾರ ಆಗಬಹುದು.ತಾಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 57 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು.
ಪುತ್ತೂರಿನಲ್ಲಿಯೂ ಸೆಂಟ್ರಲ್ ಐಬಿ
ಕೇಂದ್ರ ಸರಕಾರದ ಇಂಟಲಿಜೆನ್ಸ್ ಬ್ಯೂರೋ ಪುತ್ತೂರಿನಲ್ಲಿಯೂ ಕಾರ್ಯನಿರ್ವಹಿಸಲಿದೆ.ಇದರ ಕಚೇರಿಗೆ ಪಡ್ನೂರಿನಲ್ಲಿ 44 ಸೆಂಟ್ಸ್ ಜಾಗ ಮಂಜೂರು ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಪುತ್ತೂರಿನಿಂದ ಕೂಡ ಇಂಟಲಿಜೆನ್ಸ್ ಬ್ಯೂರೋ ಕಛೇರಿ ಕಾರ್ಯನಿರ್ವಹಿಸಲಿದೆ ಎಂದು ಶಾಸಕರು ತಿಳಿಸಿದರು.
ಜ.31ಕ್ಕೆ ಬನ್ನೂರು ಆನೆಮಜಲು ನ್ಯಾಯಾಲಯ ಸಂಕೀರ್ಣ ಉದ್ಘಾಟನೆ
ಬನ್ನೂರು ಆನೆಮಜಲಿನಲ್ಲಿ ನಿರ್ಮಾಣವಾದ ನ್ಯಾಯಾಲಯ ಸಂಕೀರ್ಣ ಜನವರಿ 31ರಂದು ಉದ್ಘಾಟನೆಗೊಳ್ಳಲಿದೆ.ಮುಖ್ಯಮಂತ್ರಿ, ಗವರ್ನರ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್,ಲೋಕೋಪಯೋಗಿ,ಕಾನೂನು ಹಾಗೂ ಉಸ್ತುವಾರಿ ಸಚಿವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.
ವೈದ್ಯಕೀಯ ಸೀಟ್‌ನಲ್ಲಿ ತುಳು ಭಾಷಿಗರಿಗೆ ಮೀಸಲಾತಿ ಕೊಡಬೇಕು
ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕು ಎಂದು ಅಽವೇಶನದಲ್ಲಿ ಮಾತನಾಡಿದ್ದೇನೆ.ವೈದ್ಯಕೀಯ ಸೀಟು ಹಂಚಿಕೆಯಲ್ಲಿ ತುಳು ಭಾಷಿಕರಿಗೆ ಮೀಸಲಾತಿ ಇದೆ. ಆದರೆ ಡೀಮ್ಡ್ ಯುನಿವರ್ಸಿಟಿಗಳಾದ ಕಾರಣ ಇದನ್ನು ನಿಲ್ಲಿಸಲಾಗಿದೆ.ಈ ಮೀಸಲಾತಿಯನ್ನು ಮತ್ತೆ ಕೊಡುವ ಕೆಲಸ ಆಗಬೇಕು.ಅಲ್ಲದೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆ ಮಾಡಬೇಕು. ಇದನ್ನು ಖಂಡಿತಾ ಮಾಡಿಸುತ್ತೇನೆ ಎಂದು ಶಾಸಕರು ಹೇಳಿದರು.










