






ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ವಿಚಾರವೇ ದೊಡ್ಡ ಕಿರಿಕಿರಿಯಾಗಿದೆ. ಬಹುತೇಕ ಬಡವರ ಜಾಗವನ್ನು ಅಧಿಕಾರಿಗಳು ಕುಮ್ಕಿ ಎಂದು ಬರೆದಿದ್ದಾರೆ. ಕುಮ್ಕಿ ಎಂಬುದೇ ಇಲ್ಲ, ಉಭಯ ಜಿಲ್ಲೆಯ ಶಾಸಕರುಗಳು, ಇಬ್ಬರು ಸಂಸದರೆಲ್ಲಾ ಒಟ್ಟು ಸೇರಿ ಹೋರಾಟ ಮಾಡಿದರೆ ಕುಮ್ಕಿಯನ್ನೇ ತೆಗೆದು ಹಾಕಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು.ಪುತ್ತೂರು ತಾಲೂಕಿನ ಬನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ 18ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.


ಜನ ನಮ್ಮನ್ನು ವೋಟು ಹಾಕಿ ಗೆಲ್ಲಿಸಿದ್ದು ಅವರ ಸೇವೆ ಮಾಡಲು, ಸೇವೆ ಮಾಡಲು ನಾವು ಸಿದ್ದರಾಗಿರಬೇಕು. ಕುಮ್ಕಿ ಹೆಸರು ಹೇಳಿ ಅನೇಕ ಕೃಷಿಕರ ಜಾಗವನ್ನು ಅವರ ಹೆಸರಿಗೆ ಮಂಜೂರಾತಿ ಮಾಡಲು ಸಾಧ್ಯವಾಗುತ್ತಿಲ್ಲ. ಕುಮ್ಕಿ ಎಂಬುದು ಅಧಿಕಾರಿಗಳೇ ಮಾಡಿದ ಒಂದು ರಗಳೆ. ಇದನ್ನು ಕಿತ್ತು ಹಾಕಲು ರಾಜಕೀಯ ಬಿಟ್ಟು ಎಲ್ಲಾ ಶಾಸಕ ಸಂಸದರು ಒಂದಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಉಭಯ ಜಿಲ್ಲೆಯ 11 ಶಾಸಕರು, ಇಬ್ಬರು ಸಂಸದರು ಒಟ್ಟಾಗಿ ಸರಕಾರದಮುಂದೆ ಪ್ರಸ್ತಾವನೆ ಸಲ್ಲಿಸಿ ಆ ಬಗ್ಗೆ ಸರಕಾರದ ಜೊತೆ ಚರ್ಚೆ ನಡೆಸಬೇಕು ಆ ಮೂಲಕ ಕುಮ್ಕಿ ಸಮಸ್ಯೆ ಬಗೆಹರಿಸಬಹುದಾಗಿದೆ. ಇಂಥಹ ಕೆಲಸ ಮಾಡಲೆಂದೇ ಜನ ನಮ್ಮನ್ನು ಆರಿಸಿ ಕಳಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಶಾಸಕ ರೈ ಹೇಳಿದರು.



ಒಂದೇ ಬಸ್ಸಲ್ಲಿ ಹೋದರೂ ಅರ್ಧಕ್ಕೆ ತಲುಪುವಾಗ ರಾಜಕೀಯ ಆಗಬಹುದು
ಒಂದು ವೇಳೆ ಹೋರಾಟ ಮಾಡೋಣ ಎಂದು ಒಟ್ಟಿಗೇ ಒಂದೇ ಬಸ್ಸಲ್ಲಿ ಹೋದರೂ ಅರ್ಧ ತಲುಪುವಾಗಲೇ ಕಾಂಗ್ರೆಸ್ ಬಿಜೆಪಿ ಜಗಳ ಆಗಿ ಅವರು ಅವರ ದಾರಿ ಇವರು ಇವರ ದಾರಿ ಹಿಡಿಯಬಹುದು ಎಂದು ಹೇಳಿದ ಶಾಸಕರು ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಾವು ಜನರ ಸೇವೆ ಮಾಡಲು ಹಿಂದೇಟು ಹಾಕಬಾರದು. ಚುನಾವಣೆಯ ಸಮಯದಲ್ಲಿಮಾತ್ರ ರಾಜಕೀಯಮಾಡಿದರೆ ಸಾಕು ಉಳಿದ ದಿನ ಅಭಿವೃದ್ದಿ ಕೆಲಸ ಮಾಡೋಣ,ಜನಸೇವೆ ಮಾಡೋಣ ಎಂದು ಶಾಸಕರು ಮನವಿಮಾಡಿದರು.
4800 94ಸಿ, ಸಿಸಿ ಕಡತವನ್ನು ಮರುಪರಿಶೀಲನೆ ಮಾಡುತ್ತೇವೆ
ಈ ಹಿಂದೆ 94 ಸಿ ಮತ್ತು 94 ಸಿಸಿ ಗೆ ಅರ್ಜಿ ಹಾಕಿದ್ದವರ ಸುಮಾರು 4800 ಅರ್ಜಿಗಳನ್ನು ಯಾವುದೋ ಕಾರಣಕ್ಕೆ ತಿರಸ್ಕಾರ ಮಾಡಲಾಗಿದೆ, ತಿರಸ್ಕಾರ ಮಾಡಿದ ಕಡತವನ್ನು ವಾಪಸ್ ಕರೆಸಿದ್ದೇನೆ ಅದನ್ನು ಮರುಪರಿಶೀಲನೆ ಮಾಡಲಾಗುತ್ತದೆ. ನ್ಯಾಯ ಬದ್ದವಾಗಿರುವ ಎಲ್ಲಾ ಕಡತಗಳನ್ನು ಸ್ವೀಕಾರ ಮಾಡಿ ಅವರಿಗೆ ಹಕ್ಕು ಪತ್ರವನ್ನು ನೀಡಲಾಗುವುದು. ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರು 94 ಸಿ ಅಥವಾ 94 ಸಿಸಿಗೆ ಅರ್ಜಿ ಹಾಕಿದ್ದಲ್ಲಿ ಹಕ್ಕು ಪತ್ರ ಸಿಕ್ಕಿಲ್ಲ ಎಂದು ಬೇಸರ ಮಾಡುವುದು ಬೇಡ ಎಂದು ಶಾಸಕರು ಹೇಳಿದರು. ಕಳೆದ ಚುನಾವಣಾ ಸಮಯದಲ್ಲಿ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದ ಶಾಸಕರು ಪ್ರತೀಯೊಂದು ಅಕ್ರಮ ಸಕ್ರಮ ಕಡತವನ್ನು ಪರಿಶೀಲನೆ ಮಾಡಿಯೇ ಮಾಡುತ್ತೇನೆ. ನಿಮ್ಮ ಸ್ವಾಧೀನದಲ್ಲಿರುವ ಅಕ್ರಮ ಜಾಗವನ್ನು ಸಕ್ರಮ ಮಾಡಿಕೊಡುವುದಾಗಿ ಹೇಳಿದರು.
11 ವರ್ಷಗಳಿಂದ ಕಾಯುತ್ತಿದ್ದೆ: ಸುಪ್ರಿಯಾ ಹಿರೆಬಂಡಾಡಿ
ನಾನು ನನ್ನ ಜಾಗದ ಅಡಿಸ್ಥಳಕ್ಕೆ ಹಕ್ಕು ಪತ್ರ ಪಡೆಯಲು 94 ಸಿಯಡಿ ಅರ್ಜಿ ಹಾಕಿದ್ದೆ. ಕಳೆದ 11 ವರ್ಷಗಳಿಂಧ ನಾನು ಅಲೆದಾಡುತ್ತಿದ್ದೇನೆ ಯಾರೂ ನನ್ನ ನೋವನ್ನು ಆಲಿಸಿಲ್ಲ, ನನ್ನ ಸಮಸ್ಯೆಯ ಬಗ್ಗೆ ಶಾಸಕ ಅಶೋಕ್ ರೈ ಅವರಲ್ಲಿ ಹೇಳಿದ್ದೆ, ಖಂಡಿತವಾಗಿಯೂ ಮಾಡಿಕೊಡುವ ಎಂದು ಹೇಳಿದ್ದರು. ಇವತ್ತು ನನ್ನ ಆಸೆ ಈಡೇರಿದೆ, ಶಾಸಕರು ಹಕ್ಕು ಪತ್ರ ಕೊಡಿಸಿದ್ದಾರೆ, ಸಾಯೋವರೆಗೂ ನಾನು ಮತ್ತು ನನ್ನ ಕುಟುಂಬ ಅವರನ್ನು ಮರೆಯುವುದಿಲ್ಲ ಎಂದು ಹಿರೆಬಂಡಾಡಿ ಗ್ರಾಮದ ಸುಪ್ರಿಯಾ ಅವರು ತಿಳಿಸಿದರು. ಶಾಸಕರಾದರೆ ಜನರಿಗೆ ಅಭಯ ನೀಡುವವರಾಗಬೇಕು, ನೊಂದವರ ಕಣ್ಣೀರೊರೆಸುವವರಾಗಬೇಕು, ಅಶೋಕ್ ರೈ ಶಾಸಕರಾಗಿದ್ದು ಬಡವರ ಪುಣ್ಯ ಎಂದು ಹೇಳಿದರು.
ಇಷ್ಟು ಸ್ಪೀಡಿನ ಶಾಸಕರನ್ನು ನನ್ನ ಲೈಫಲ್ಲಿ ನೋಡಿಲ್ಲ: ತಹಶಿಲ್ದಾರ್
ನಾನು 30 ವರ್ಷದಿಂದ ಸರಕಾರಿ ಸೇವೆಯಲ್ಲಿದ್ದೇನೆ, ಎಷ್ಟೋ ಕಡೆ ಕೆಲಸ ಮಾಡಿದ್ದೇನೆ ಅಲ್ಲೆಲ್ಲಾ ಶಾಸಕರನ್ನು ನೋಡಿದ್ದೇನೆ ಆದರೆ ಇಷ್ಟೊಂದು ಸ್ಪೀಡಿನ ಶಾಸಕರನ್ನು ನೋಡಿಯೇ ಇಲ್ಲ ಎಂದು ತಹಶಿಲ್ದಾರ್ ಕೋಡ್ಲಿಗಿ ಹೇಳಿದರು. ಅಕ್ರಮ ಸಕ್ರಮ ವಾರಕ್ಕೊಂದು ಕಡೆ ಮಾಡುತ್ತಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬಂದಿಗಳು ಈ ವಿಚಾರದಲ್ಲಿ ಸ್ವಲ್ಪ ಆಸಕ್ತಿಯನ್ನು ತೆಗದುಕೊಂಡು ಶಾಸಕರ ಸೂಚನೆಯಂತೆ ಅಕ್ರಮ ಸಕ್ರಮ, 94 ಸಿ , 94 ಸಿಸಿ ಕಡತವನ್ನು ಪರಿಶೀಲನೆ ಮಾಡಿ ಅದರ ಸಿದ್ದತೆಯನ್ನು ಮಾಡುತ್ತಿದ್ದಾರೆ. ಬಡವರ ಕೆಲಸ ಮಾಡದೇ ಇದ್ದರೆ ಶಾಸಕರಿಗೆ ಸಿಟ್ಟಾಗುತ್ತದೆ ಅದು ಅವರಿಗೆ ಬಡವರ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಶಾಸಕರಿಂದ ಪುತ್ತೂರಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದ್ದು ಜನ ಎಲ್ಲವನ್ನೂ ಗಮನಿಸುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ , ಬನ್ನೂರು ಗ್ರಾಪಂ ಅಧ್ಯಕ್ಷೆ ಸ್ಮಿತಾ ಎನ್ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ಸ್ವಾಗತಿಸಿ ವಂದಿಸಿದರು. ಶಾಸಕರ ಕಚೇರಿ ಸಹಾಯಕರಾದ ಪ್ರವೀಣ್ ಬನ್ನೂರು ಸಹಕರಿಸಿದರು










