ಉಪ್ಪಿನಂಗಡಿ: ಕ್ರೀಡಾಂಗಣ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಎಂ.ಕೆ. ಮಠ

0

ಉಪ್ಪಿನಂಗಡಿ: ಸ್ವಚ್ಚ ಭಾರತ್ ಶ್ರೇಷ್ಠ ಭಾರತ್ ಎಂಬ ಪ್ರಧಾನ ಮಂತ್ರಿಯ ಘೋಷಣೆಯನ್ನು ದೇಶವಾಸಿಗರೆಲ್ಲರೂ ಇನ್ನೂ ಸ್ಪಷ್ಟವಾಗಿ ಮನನ ಮಾಡಿಕೊಂಡಿಲ್ಲ ಎಂಬಂತಿರುವ ಈ ಕಾಲಘಟ್ಟದಲ್ಲಿ ಕಾಲೇಜು ಕ್ರೀಡಾಂಗಣದಲ್ಲಿ ಎಲ್ಲೆಂದರಲ್ಲಿ ಎಸೆಯಲ್ಪಟ್ಟಿದ್ದ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಚಲನಚಿತ್ರ ನಟ ನಿರ್ದೇಶಕ ಎಂ.ಕೆ. ಮಠ ತೆರವುಗೊಳಿಸುವ ಮೂಲಕ ಸ್ವಚ್ಚತೆ ಪ್ರತಿಯೋರ್ವ ಪ್ರಜೆಯ ಕರ್ತವ್ಯ ಎಂಬ ಸಂದೇಶವನ್ನು ಸಾರಿದ್ದಾರೆ.


ಪ್ರತಿನಿತ್ಯ ನಸುಕಿನ ವೇಳೆ ವಾಕಿಂಗ್ ಮಾಡುವ ಹವ್ಯಾಸವನ್ನು ಹೊಂದಿರುವ ಎಂ.ಕೆ. ಮಠರವರು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿಯೂ ದೈಹಿಕ ಕಸರತ್ತಿನ ವ್ಯಾಯಾಮವನ್ನು ಮಾಡುತ್ತಿರುತ್ತಾರೆ. ಮಂಗಳವಾರದಂದು ಮುಂಜಾನೆ ದೊಡ್ಡದಾದ ಚೀಲವನ್ನು ತಂದಿರುವ ಅವರು ವಾಕಿಂಗ್, ವ್ಯಾಯಾಮ ಮುಗಿಸಿದ ಬಳಿಕ ಕ್ರೀಡಾಂಗಣದ ಸುತ್ತಲೂ ಎಸೆಯಲ್ಪಟ್ಟಿದ್ದ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿರುವ ದೃಶ್ಯವನ್ನು ಕ್ರೀಡಾಂಗಣದಲ್ಲಿ ವಾಕಿಂಗ್ ನಿರತ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ ವಿದ್ಯಾರ್ಥಿ ಅಭಿಜಿತ್ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಪತ್ರಿಕೆಗೆ ಒದಗಿಸಿದ್ದಾರೆ.


ಬ್ಯಾನರ್ ಗಳಿಲ್ಲ. ಪ್ರಚಾರದ ಹಂಬಲವಿಲ್ಲ. ಕ್ರೀಡಾಂಗಣದ ಸ್ವಚ್ಚತೆ ಎನ್ನುವುದು ತನ್ನ ಪಾಲಿನ ಕರ್ತವ್ಯ ಎಂಬ ಭಾವನೆಯಿಂದ ಸ್ವಯಂಪ್ರೇರಿತರಾಗಿ ಸದ್ದಿಲ್ಲದೆ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗುವ ಮೂಲಕ ಇವರು ಸಮಾಜಕ್ಕೊಂದು ಸಂದೇಶವನ್ನು ಸಾರಿದ್ದಾರೆ.

LEAVE A REPLY

Please enter your comment!
Please enter your name here