ರಸ್ತೆ ಹಂಪ್ಸ್,ಸೂಚನಾ ಫಲಕ ಕಿತ್ತೆಸೆದು ಹಾನಿ : ಆಕ್ಷೇಪಿಸಿದ್ದಕ್ಕೆ ಬೆದರಿಕೆ ಆರೋಪ-ದೂರು ದಾಖಲು

0

ಪುತ್ತೂರು: ಸಂಪರ್ಕ ರಸ್ತೆ ವಿಚಾರದಲ್ಲಿ, ರಸ್ತೆಯಲ್ಲಿ ಹಾಕಿದ್ದ ಹಂಪ್ಸ್‌ಗಳನ್ನು ತೆರವುಗೊಳಿಸಿ ಸೂಚನಾ ಫಲಕ ಕಿತ್ತೆಸೆದು ಹಾನಿ ಮಾಡಿದ್ದನ್ನು ವಿಚಾರಿಸಿದ ವೇಳೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಉರ್ಲಾಂಡಿ ನಿವಾಸಿ ಪುಷ್ಪಾವತಿ ಎಂಬವರು ಪೊಲೀಸರಿಗೆ ದೂರು ನೀಡಿದವರು. ‘ಪುತ್ತೂರು ಕಸಬಾ ಗ್ರಾಮದ ಸ.ನಂ.40/26ರಲ್ಲಿ ತಾನು 48.25 ಸೆಂಟ್ಸ್ ಜಮೀನು ಹೊಂದಿದ್ದು ಈ ಜಮೀನಿಗೆ ಉರ್ಲಾಂಡಿ-ಮಯೂರ ರಸ್ತೆಯಿಂದ 24 ಅಡಿ ಅಗಲದ ಸಂಪರ್ಕ ರಸ್ತೆ ಇರುತ್ತದೆ.ಈ ಜಾಗದ ಪಕ್ಕದಲ್ಲಿ ಬಲರಾಮ ಆಚಾರ್ಯ ಎಂಬವರಿಗೆ ಸೇರಿದ 57 ಸೆಂಟ್ಸ್ ಜಮೀನು ಇದ್ದು, ಈ ಜಮೀನಿಗೆ ತೆರಳಲು 24 ಅಡಿ ಅಗಲದ ಸಂಪರ್ಕ ರಸ್ತೆಯನ್ನು ಉಪಯೋಗಿಸಲು ಅವರಿಗೆ ಹಕ್ಕಿದೆ.ತಮ್ಮ ಜಾಗಕ್ಕೆ ತೆರಳುವ ರಸ್ತೆಗೆ ತಾನು ಎರಡೂ ಕಡೆಯಲ್ಲಿ ಹಂಪ್ಸ್ ಹಾಕಿಸಿದ್ದು ಇದನ್ನು ಆರೋಪಿಗಳು ತೆಗೆದು ಹಾಕಿದ್ದಾರೆ.ಜ.6ರಂದು ಮಧ್ಯಾಹ್ನ ಆರೋಪಿಗಳು ಇತರ 10 ಜನರೊಂದಿಗೆ ಪಿಕಪ್ ವಾಹನದಲ್ಲಿ ಬಂದು ನಮಗೆ ಸೇರಿದ ರಸ್ತೆಯಲ್ಲಿರುವ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ಮುಚ್ಚಿದ್ದಾರೆ.ಸದ್ರಿ ಜಾಗದಲ್ಲಿ ಸಿವಿಲ್ ವ್ಯಾಜ್ಯ ಮತ್ತು ನ್ಯಾಯಾಲಯದ ಇಂಜಕ್ಷನ್ ಆದೇಶ ಇರುವ ಮಾಹಿತಿಯನ್ನು ಹಾಕಿದ್ದ ಸೂಚನಾ ಫಲಕಗಳನ್ನು ಕಿತ್ತೆಸೆದಿದ್ದಾರೆ.ಸುಮಾರು 25 ಸಾವಿರ ರೂ.ನಷ್ಟ ಉಂಟು ಮಾಡಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿದ್ದಾರೆ’ ಎಂದು ಪುಷ್ಪಾವತಿಯವರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.ಬಲರಾಮ ಆಚಾರ್ಯ ಉರ್ಲಾಂಡಿ,ಕೀರ್ತನಾದ ಪ್ರತಾಪ್ ಸಿಂಹ ಮತ್ತು ಇತರ 10 ಮಂದಿ ವಿರುದ್ಧ ದೂರು ನೀಡಲಾಗಿದ್ದು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


‘ಹಣಕ್ಕಾಗಿ ಮಾಡುತ್ತಿರುವ ಬ್ಲ್ಯಾಕ್‌ಮೇಲ್ ಇದು’- ಬಲರಾಮ ಆಚಾರ್ಯ ಪ್ರತಿಕ್ರಿಯೆ:
ಹಣಕ್ಕಾಗಿ ಮಾಡುತ್ತಿರುವ ಬ್ಲ್ಯಾಕ್‌ಮೇಲ್ ಇದು.ವಿನಾಕಾರಣ ನಮಗೆ ತೊಂದರೆ ಕೊಡಲೆಂದೇ ಈ ರೀತಿ ಮಾಡುತ್ತಿರುವುದು.ರೋಡ್ ಮುಟ್ಟಬಾರದು ಎಂದು ಅವರಿಗೆ ಕೋರ್ಟ್ ಆರ್ಡರ್ ಇದೆ.ಆದರೂ ಕ್ಯಾರೇ ಮಾಡುತ್ತಿಲ್ಲ.ಈ ನಿಟ್ಟಿನಲ್ಲಿ ಕಂಟೆಂಪ್ಟ್ ಆಫ್ ಕೋರ್ಟ್ ಹಾಕಿದ್ದೇವೆ.ನಮಗೂ ರೋಡ್‌ನಲ್ಲಿ ರೈಟ್ ಉಂಟು.ಆದರೆ, ನಿಮಗೆ ರೋಡ್‌ನಲ್ಲಿ ರೈಟ್ ಮಾತ್ರ ಇರೋದು.ನಾವು ಖುಷಿ ಬಂದ ಹಾಗೆ ಮಾಡ್ತೇವೆ ಎಂದು ಹೇಳಿ ಅವರು ಅಲ್ಲಲ್ಲಿ ಅಗೆದು ಹಾಕುವುದು ಮಾಡ್ತಾ ಇದ್ದಾರೆ.ನಾವೀಗಾಗಲೇ ಫ್ಲ್ಯಾಟ್ ಸೇಲ್ ಮಾಡಿದ್ದರಿಂದ ಅವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ.ಒಟ್ಟಿನಲ್ಲಿ ನಮಗೆ ತೊಂದರೆ ಆಗಬೇಕೆಂದು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಬಲರಾಮ ಆಚಾರ್ಯ ಅವರು ಸ್ಪಷ್ಟನೆ ನೀಡಿದ್ದಾರೆ.‌


ಮಾಹಿತಿ ಇಲ್ಲ:
ದೂರು ಕೊಟ್ಟಿದ್ದಾರೆಂದಷ್ಟೆ ನನಗೆ ಗೊತ್ತು.ಆದರೆ ಎಫ್ಐಆರ್ ಆಗಿರುವ ವಿಚಾರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ಯಾವುದೇ ನೋಟಿಸ್ ನಮಗೆ ಬಂದಿಲ್ಲ ಎಂದು ಕೀರ್ತನಾದ ಪ್ರತಾಪಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here