







ಪುತ್ತೂರು: ಪ್ರತಿ ವರ್ಷ ಬೇಸಿಗೆಯಲ್ಲಿ ಬತ್ತಿ ಪ್ರವಾಸಿಗರು ಮತ್ತು ಭಕ್ತರನ್ನು ನಿರಾಸೆಗೊಳಿಸುವ ಪುತ್ತೂರು ತಾಲೂಕಿನ ಬಿಸಿನೀರ ಬುಗ್ಗೆ ‘ಬೆಂದ್ರ್ ತೀರ್ಥ’ದಲ್ಲಿ ಊರಿನ ಯುವಕರು ಈ ಬಾರಿ ನೀರು ಉಕ್ಕಿಸಿದ್ದಾರೆ. ಬೆಂದ್ರ್ ತೀರ್ಥ ಅಭಿವೃದ್ಧಿಗೆಂದೇ ಆರಂಭಗೊಂಡ ಸ್ಥಳೀಯ ಶಿವಾಜಿ ಯುವಸೇನೆ ಮೂರು ದಿನಗಳಿಂದ ಹಾಕಿದ ಶ್ರಮಕ್ಕೆ ಸೋಮವಾರ ಫಲ ಸಿಕ್ಕಿದೆ.






ಈ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿದೆ. ಇಲ್ಲಿ ಬಿಸಿನೀರಿನ ತೀರ್ಥ ಸಿಗುವ ಹೊಂಡವನ್ನು ಮತ್ತು ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಗೊಳಿಸುವುದಕ್ಕೆಂದೇ ಶಿವಾಜಿ ಯುವಸೇನೆ ಸ್ಥಾಪನೆಯಾಗಿತ್ತು. ಇಲ್ಲಿನ ಮಹತ್ವ ತಿಳಿದು ಬರುವ ಪ್ರವಾಸಿಗರು ಬೇಸಿಗೆಯಲ್ಲಿ ಬತ್ತಿದ ಹೊಂಡವನ್ನು ನೋಡಿ ವಾಪಸಾಗಬೇಕಾದ ಸ್ಥಿತಿ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹೊಂಡದ ಆಳವನ್ನು ಹೆಚ್ಚಿಸಲು ಯುವಕರು ನಿರ್ಧರಿಸಿದರು. ಬೆಂದ್ರ್‌ತೀರ್ಥದ ಜೊತೆ ಸಂಬಂಧವಿರುವ, ಸಮೀಪದ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರ ಜೊತೆ ಮಾತನಾಡಿ ಅಭಿವೃದ್ಧಿ ಕಾರ್ಯಕ್ಕೆ ಇಳಿದರು. ಸುಮಾರು 15 ಯುವಕರು ವಿವಿಧ ಯಂತ್ರೋಪಕರಗಳ ಜೊತೆ ಮೂರು ದಿನಗಳ ಹಿಂದೆ ಆರಂಭಿಸಿದರು. ಜೆಸಿಬಿ ಮೂಲಕ ಕಲ್ಲನ್ನು ಒಡೆದು ಅದನ್ನು ಹೊರತೆಗೆಯುವ ಕಾರ್ಯ ನಡೆಸಿದ್ದು, ಸುಮಾರು 7 ಅಡಿ ಆಳ ಅಗೆಯಲಾಗಿದ್ದು, ನೀರು ಧಾರಾಳವಾಗಿ ಕಂಡುಬಂದಿದೆ ಎಂದು ತಿಳಿದು ಬಂದಿದೆ.










