ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಸಹಾಯಕ ಆಯುಕ್ತರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿ

0

ಪುತ್ತೂರು: ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಸಹಾಯಕ ಆಯುಕ್ತರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರಧ್ವಜವು ರಾಷ್ಟ್ರದ ಆತ್ಮವಾಗಿದೆ. ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರಧ್ವಜಗಳನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಧ್ವಜಗಳು ರಸ್ತೆ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗದ ಕಾರಣ, ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನವನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರಿನ ಸಹಾಯಕ ಆಯುಕ್ತರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಸಹಾಯಕ ಆಯುಕ್ತರ ಕಚೇರಿಯ ಶಿರಸ್ತೇದಾರರಾದ ನಾಗೇಂದ್ರ ನಾಯಕ್ ಅವರ ಮೂಲಕ ಮನವಿಯನ್ನು ಹಸ್ತಾಂತರಿಸಲಾಯಿತು. ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಮುಂಬೈ ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ಆದೇಶ ನೀಡಿದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಗೃಹ ಹಾಗೂ ಶಿಕ್ಷಣ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿವೆ. ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ 1950 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ 1971 ರ ಅಡಿಯಲ್ಲಿ ಕಾನೂನುಬದ್ಧ ಅಪರಾಧವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಕರಪತ್ರ ವಿತರಣೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರಧ್ವಜದ ಗೌರವ ಕಾಪಾಡುವ ಕುರಿತು ನಿರಂತರ ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿಯನ್ನು ಕೂಡಲೇ ಸ್ಥಾಪಿಸಬೇಕು. ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಉದ್ಯಮಿ ರಾಧಾಕೃಷ್ಣ ರೈ ಬೂಡಿಯಾರು, ಜಿಲ್ಲಾ ದಸ್ತಾವೇಜು ಬರಹಗಾರ ಬಾಲಚಂದ್ರ ಸೊರಕೆ, ಆನಂದ ಪಿ., ಪುನೀತ್ ರೈ, ಶ್ರೀಧರ ಪುತ್ತೂರು, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರರಾದ ವಿಜಯಕುಮಾರ್, ಚಂದ್ರಶೇಖರ, ದಾಮೋದರ ಗೌಡ, ಹರಿಪ್ರಸಾದ್ ಶೆಟ್ಟಿ ಹಾಗೂ ತಾರನಾಥಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here