







ಪುತ್ತೂರು: ನಿಷೇಧಿತ ಎಂಡಿಎಂಎ ಅನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿರುವ ಸಂಪ್ಯ ಠಾಣಾ ಎಸ್.ಐ ಗುಣಪಾಲ ಜೆ ನೇತೃತ್ವದ ಪೊಲೀಸರ ತಂಡ ಇಬ್ಬರನ್ನು ಬಂಧಿಸಿ, ಮಾದಕ ವಸ್ತುಗಳು ಹಾಗೂ ಸಾಗಾಟಕ್ಕೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಪಾಣಾಜೆ ಗ್ರಾಮದ ಮಹಮ್ಮದ್ ಹರ್ಷದ್ (31ವ.) ಮತ್ತು ಇರ್ದೆ ಗ್ರಾಮದ ಜನತಾ ಕಾಲೋನಿಯ ಮಹಮ್ಮದ್ ಆರೀಸ್ ಜೆ.(31ವ.) ಬಂಧಿತ ಆರೋಪಿಗಳು.



ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳುತ್ತಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್.ಐ ಗುಣಪಾಲ ಜೆ. ಅವರು ಜ.24 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಇರ್ದೆ ಗ್ರಾಮದ ಪೇರಲ್ತಡ್ಕ ಬೆಂದ್ರ್ತೀರ್ಥ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಕೆಎ32 ಒ6734 ಆಲ್ಟೋ ಕಾರನ್ನು ಪರಿಶೀಲಿಸಿದರು. ಈ ವೇಳೆ ಕಾರಿನಲ್ಲಿದ್ದ ಮಹಮ್ಮದ್ ಹರ್ಷದ್ ಹಾಗೂ ಮಹಮ್ಮದ್ ಆರೀಸ್ ಎಂಡಿಎಂಎ ಸೇವಿಸಿರುವುದಾಗಿ ಹಾಗೂ ಉಳಿದ ಎಂಡಿಎಂಎ ತಮ್ಮ ಬಳಿ ಇರುವುದಾಗಿ ಒಪ್ಪಿಕೊಂಡಿದ್ದರು. ನಂತರ ಪೊಲೀಸರು ಕಾರನ್ನು ಶೋಧನೆ ಮಾಡಿದಾಗ ಕಾರಿನಲ್ಲಿ 3.38 ಗ್ರಾಂ ಎಂಡಿಎಂಎ ಪತ್ತೆಯಾಗಿರುತ್ತದೆ. ಅಲ್ಲದೆ ಎಂಡಿಎಂಎ, ಗಾಂಜಾ, ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣಗಳು, ಮೊಬೈಲ್ಗಳು, ಮಚ್ಚು ಹಾಗೂ ಇತರೆ ವಸ್ತುಗಳು ಕಾರಿನಲ್ಲಿ ಕಂಡುಬಂದಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿದ ಎಂಡಿಎಂಎ ಅಂದಾಜು ಮೌಲ್ಯ ರೂ.28000 ಮತ್ತು ಗಾಂಜಾ 0.87 ಗ್ರಾಂ ಇದರ ಮೌಲ್ಯ ರೂ.1000 ಆಗಿರುತ್ತದೆ. ಆರೋಪಿಗಳು ಯಾವುದೇ ಪರವಾನಿಗೆಯಿಲ್ಲದೆ ನಿಷೇಧಿತ ವಸ್ತುಗಳನ್ನು ಸಾಗಾಟ ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ,ಕ್ರ : 3/2026 ಕಲಂ: 8(c)21(b) NDPS Act.25(1B)(B) Arms Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸಂಪ್ಯ ಠಾಣಾ ಎಸ್.ಐ ಗುಣಪಾಲ ಜೆ., ಸಿಬ್ಬಂದಿಗಳಾದ ಭವಿತ್ ರೈ, ಹರೀಶ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಪ್ರಶಾಂತ್, ಹರ್ಷಿತ್, ಚಾಲಕ ವಿನೋದ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಮಾಹಿತಿ ನೀಡುವಂತೆ ಪೊಲೀಸರ ಮನವಿ
ಇರ್ದೆ, ಬೆಟ್ಟಂಪಾಡಿ, ಪಾಣಾಜೆ ಭಾಗದಲ್ಲಿ ಬಹಳಷ್ಟು ಎಂಡಿಎಂಎ ಮಾರಾಟ ಹಾಗೂ ಸೇವನೆ ವ್ಯಾಪಕವಾಗಿ ಹರಡಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆತರೆ ತಕ್ಷಣ ಸಂಪ್ಯ ಠಾಣಾ ಉಪ ನಿರೀಕ್ಷಕರಿಗೆ ಮಾಹಿತಿ ನೀಡಿದರೆ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ನೀಡಲು ಸಾರ್ವಜನಿಕರು ಯಾವುದೇ, ಭಯ, ಅಂಜಿಕೆ ಪಡಬೇಕಾಗಿಲ್ಲ ಎಂದು ಸಂಪ್ಯ ಠಾಣಾ ಎಸ್.ಐ ಗುಣಪಾಲ ತಿಳಿಸಿದ್ದಾರೆ.









