






ಕಡಬ: ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಾಡುಪ್ರಾಣಿಯೊಂದನ್ನು ಬೇಟೆಯಾಡಿರುವ ಗಂಭೀರ ಪ್ರಕರಣವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.


ಐತ್ತೂರು ಗ್ರಾಮದ ಓಟೆಕೆಜೆ ಸಮೀಪದ ಅರ್ಬಿತೋಡು ಎಂಬಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಜ. 24ರ ರಾತ್ರಿ ಬೇಟೆಗಾರರ ತಂಡವೊಂದು ಕೋವಿ ಬಳಸಿ ಬೃಹತ್ ಗಾತ್ರದ ಕಾಡುಕೋಣವನ್ನು ಬೇಟೆಯಾಡಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಜ.25ರಂದು ಬೇಟೆಗಾರರು ಮಾಂಸ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದು, ಸುಮಾರು 8 ಕ್ವಿಂಟಾಲ್ ಮಾಂಸ ಇರಬಹುದೆಂದು ಅಂದಾಜಿಸಲಾಗಿದೆ.



ದಾಳಿಯ ವೇಳೆ ಬೇಟೆಗಾರರು ಬಳಸಿದ್ದ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ತಂಡದಲ್ಲಿ ಐವರು ಸ್ಥಳೀಯರು ಇರುವ ಶಂಕೆ ವ್ಯಕ್ತವಾಗಿದೆ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಜಾಲ ಬೀಸಿದೆ.
ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡೇಟಿನಿಂದ ಪ್ರಾಣಿ ಮೃತಪಟ್ಟಿರುವುದು ದೃಢಪಟ್ಟಿದೆ. ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.ಸುಬ್ರಹ್ಮಣ್ಯ ವಲಯ ಅರಣ್ಯಾಽಕಾರಿ ವಿಮಲ್ ಬಾಬು, ಪಶು ವೈದ್ಯಾಧಿಕಾರಿ ಡಾ. ಯಶಸ್ವಿ ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










