ಬೆಟ್ಟಂಪಾಡಿ ಮಂಡಲ ಬೃಹತ್ ಹಿಂದೂ ಸಂಗಮ‌

0

ಹಿಂದು ಸಮಾಜದಲ್ಲಿ ವಿಘಟನೆ ತಪ್ಪಬೇಕು – ಮಾಣಿಲ ಶ್ರೀ
ಹಿಂದು ಧರ್ಮವೆಂಬುದು ಸಮಗ್ರ ಬದುಕಿನ ಸಮೃದ್ಧ ಸಂವಿಧಾನ – ರವಿ ಮಂಡ್ಯ

ಬೆಟ್ಟಂಪಾಡಿ: ಹಿಂದೂ ಸಂಗಮ ಆಯೋಜನಾ ಸಮಿತಿ ಬೆಟ್ಟಂಪಾಡಿ ಮಂಡಲ ವತಿಯಿಂದ ಬೃಹತ್‌ ಹಿಂದೂ ಸಂಗಮ ಕಾರ್ಯಕ್ರಮ ಜ. 26 ರಂದು ಸಂಜೆ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರದಲ್ಲಿ ಜರಗಿತು.


ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ʻವಿಶ್ವಶಾಂತಿಯನ್ನು ಬಯಸಿದ ದೇಶದಲ್ಲಿ ಹಿಂದೂಗಳು ಸುಭದ್ರವಾಗಿರಬೇಕು. ಹಿಂದುಗಳಲ್ಲಿ ವಿಘಟನೆಯಾಗುತ್ತಿದೆ. ನಮ್ಮನ್ನು ವಿಂಗಡಿಸಿ ದುರ್ಬಲರನ್ನಾಗಿಸುವ ಹುನ್ನಾರ ನಡೆಯುತ್ತಿದೆ. ವಿಘಟನೆಯಾಗದ ರೀತಿಯಲ್ಲಿ ನಮ್ಮ ಸಮಾಜ ಒಂದು ಶಕ್ತಿಯಾಗಿರಲು ಈ ಹಿಂದೂ ಸಂಗಮ. ನಾವೆಲ್ಲಾ ಒಂದಾಗಿರಲು ನಮ್ಮ ಹಿರಿಯರು ಹುಟ್ಟುಹಾಕಿದ ನಮ್ಮ ಸಂಘಟನೆ, ದೇವಸ್ಥಾನ, ಮಂದಿರ ಎಲ್ಲಾ ಕಡೆಯೂ ವಿಂಗಡಣೆಯಾಗುತ್ತಿದೆ. ನಮ್ಮ ಪೂರ್ವಿಕರ ಸಾಧನೆ, ಮಹಾತ್ಮರ ಜೀವನವನ್ನು ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವಂತೆ ಮಾಡಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಈ ಸಂದರ್ಭದಲ್ಲಿ ನಾವೆಲ್ಲಾ ಸಮಾಜದಲ್ಲಿ ಮತ್ತೆ ಒಂದಾಗುವ ಭಾವನೆ ಬೆಳೆಸಿಕೊಳ್ಳಬೇಕಾಗಿದೆʼ ಎಂದರು.


ದಿಕ್ಸೂಚಿ ಭಾಷಣ ಮಾಡಿದ ಉಪನ್ಯಾಸಕ ರವಿ ಮಂಡ್ಯರವರು ʻಭಾರತದ ಅಸ್ಮಿತೆಯೇ ಹಿಂದುತ್ವ. ಮಾನವನನ್ನು ಮಾಧವನನ್ನಾಗಿಸುವ ಧರ್ಮವೇ ಹಿಂದು ಧರ್ಮ. ಧರ್ಮ ಅಂದರೆ ಒಂದು ಮತವಲ್ಲ. ಒಂದು ಪೂಜಾ ಪದ್ದತಿ ಅಲ್ಲ, ಬದಲಾಗಿ ವ್ಯಕ್ತಿಯ ಸಮಗ್ರ ಬದುಕಿನ ಸಮೃದ್ಧ ಸಂವಿಧಾನವಾಗಿದೆ. ಭಾರತವನ್ನು ಇಡೀ ಜಗತ್ತು ಕರೆಯುವುದು ಹಿಂದೂಸ್ತಾನಿ ಎಂದು. ಹಾಗಾಗಿ ಭಾರತ ಮತ್ತು ಹಿಂದುತ್ವ ಬೇರೆಯಲ್ಲ. ಬೇರೆ ಬೇರೆ ಮತಗಳಿರಬಹುದು, ಬೇರೆ ಬೇರೆ ದೇವರ ಆರಾಧನೆ ಇರಬಹುದು ಆದರೆ ಇಲ್ಲಿರುವ ಪ್ರತಿಯೊಬ್ಬರೂ ಹಿಂದುಗಳೇ ಆಗಿದ್ದಾರೆ. ಹಿಂದು ಧರ್ಮವನ್ನು ಆರ್‌ಎಸ್‌ಎಸ್‌ ಅಥವಾ ವಿಶ್ವಹಿಂದು ಪರಿಷದ್‌ ಹುಟ್ಟುಹಾಕಿಲ್ಲ. ಬದಲಾಗಿ ಶತ ಶತಮಾನಗಳಿಂದ ಸರ್ವರೂ ಬಯಸುವ ಸರ್ವರ ಕರ್ತವ್ಯ ಅಥವಾ ಜೀವನ ಪದ್ದತಿಯೇ ಹಿಂದೂ ಧರ್ಮ. ಅದರ ಅನುಷ್ಟಾನವನ್ನೇ ನಾವು ಹಿಂದು ಸಂಸ್ಕೃತಿ ಎಂದು ಕರೆದೆವು. ಈ ಸಂಸ್ಕೃತಿಯಲ್ಲಿ ಬೆಳೆದ ನಾವುಗಳು ನಮ್ಮ ಮಕ್ಕಳಿಗೂ ಅದೇ ಸಂಸ್ಕೃತಿಯನ್ನು ಮುಂದುವರಿಸಬೇಕು. ಕೌಟುಂಬಿಕ ವ್ಯವಹಾರಗಳೇ ನಮ್ಮ ಸಂಸ್ಕೃತಿ. ಭಜನೆ, ಭೋಜನ, ಭಾಷೆ, ಭೂಷಣಗಳಲ್ಲಿ ನಾವು ನಮ್ಮತನವನ್ನು ಉಳಿಸಿಕೊಂಡು ಸಮಾಜದಲ್ಲಿ ಪಂಚ ಪರಿವರ್ತನೆಯಾಗಬೇಕೆಂಬ ಆರ್‌ಎಸ್‌ಎಸ್‌ ಸಂದೇಶವನ್ನು ನಾವೆಲ್ಲಾ ಅನುಷ್ಟಾನಗೊಳಿಸೋಣʼ ಎಂದರು.


ಹಿರಿಯ ಕಾರ್ಯಕರ್ತ ಸುಬ್ರಹ್ಮಣ್ಯ ಭಟ್‌ ದರ್ಭೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಅವಿನಾಶ್‌ ಕೊಡೆಂಕಿರಿಯವರು ಮಾತನಾಡಿ ಹಿಂದೂ ಸಂಗಮದ ಆಶಯ ಮತ್ತು ಉದ್ದೇಶವನ್ನು ಸಭೆಯ ಮುಂದಿಟ್ಟರು.  ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್‌ ರೈ ಗುತ್ತು, ಸಾಮಾಜಿಕ ಕಾರ್ಯಕರ್ತೆ ಉಮಾವತಿ ಸುಬ್ಬಪ್ಪ ಮಣಿಯಾಣಿರವರು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಠಲ ರೈ ಬೈಲಾಡಿ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸಂಚಾಲಕ ಕೃಷ್ಣಪ್ಪ ಗೌಡ ಗುರುಸ್ವಾಮಿ, ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಸ್ವಾಗತಿಸಿ, ಸನತ್‌ ರೈ ಕುಂಜಾಡಿ ವಂದಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ಭವ್ಯ ಹಾಗೂ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಅದೇ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಧಾಕೃಷ್ಣ ಬೋರ್ಕರ್‌ ದಂಪತಿ ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮಕ್ಕೆ ಮುನ್ನ ರಂಜಿತಾ ಗುಮ್ಮಟೆಗದ್ದೆಯವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು. ಶ್ರೀ ಮಣಿಕಂಠ ಸಿಂಗಾರಿ ಮೇಳದವರಿಂದ ಸಿಂಗಾರಿ ಮೇಳ ಪ್ರದರ್ಶನಗೊಂಡಿತು. ಹಿಂದು ಸಂಗಮ ಆಯೋಜನಾ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ವಿವಿಧ ರೀತಿಯಲ್ಲಿ ಸಹಕರಿಸಿದರು.

ಚಿತ್ರ: ಶ್ರೀಹರಿ ಸ್ಟುಡಿಯೊ ರೆಂಜ


ಮೂರು ದಿಕ್ಕುಗಳಿಂದ ಬಂದ ಶೋಭಾಯಾತ್ರೆ
ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ ಹಾಗೂ ಪಾಣಾಜೆ ಗ್ರಾಮಗಳನ್ನೊಳಗೊಂಡ ಬೆಟ್ಟಂಪಾಡಿ ಮಂಡಲದ ಈ ಹಿಂದೂ ಸಂಗಮಕ್ಕೆ ಮುಂಚಿತವಾಗಿ ಪಾಣಾಜೆ ಹಾಗೂ ಬೆಟ್ಟಂಪಾಡಿ ಗ್ರಾಮದ ಹಿಂದುಗಳು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ನಡೆಸಿದರು. ನಿಡ್ಪಳ್ಳಿ ಭಾಗದಿಂದ ಬಂದ ಶೋಭಾಯಾತ್ರೆಯು ರೆಂಜ ಸರ್ಕಲ್‌ ಬಳಿಕ ಸೇರಿಕೊಂಡು ಜಂಟಿಯಾಗಿ ಶ್ರೀರಾಮನಗರದವರೆಗೆ ಶೋಭಾಯಾತ್ರೆ ಜರಗಿತು. ಇರ್ದೆ ಗ್ರಾಮದ ಹಿಂದೂ ಬಂಧುಗಳು ಇರ್ದೆ ಜಂಕ್ಷನ್‌ನಿಂದ ಶ್ರೀರಾಮನಗರದವರೆಗೆ ಶೋಭಾಯಾತ್ರೆ ನಡೆಸಿದರು. ಭಾರತ ಮಾತೆಯ ಬೃಹತ್‌ ಕಟೌಟ್‌ಗಳೊಂದಿಗೆ ಹಾಗೂ ಕೇಸರಿ ಧ್ವಜಗಳೊಂದಿಗೆ ಕಾರ್ಯಕರ್ತರು ಸಾಗಿದರೆ, ಭಜಕರು ಹಾಗೂ ಶ್ರೀ ಮಣಿಕಂಠ ಸಿಂಗಾರಿ ಮೇಳ ಮತ್ತು ಶ್ರೀ ವಿಷ್ಣು ಸಿಂಗಾರಿ ಮೇಳದವರು ಶೋಭಾಯಾತ್ರೆಗೆ ಮೆರುಗು ನೀಡಿದರು. ಸಭೆಗೂ ಮುನ್ನ ಅತಿಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. 

ಬೇಧ ಭಾವ ಬಿಟ್ಟು ಒಗ್ಗಟ್ಟಾಗಬೇಕು – ಅವಿನಾಶ್‌ ಕೊಡೆಂಕಿರಿ
ತಾಯಿ ಭಾರತಿ ಜಗದ್ವಂದ್ಯಳಾಗಬೇಕಾದರೆ ಎಲ್ಲಾ ಹಿಂದುಗಳು ಒಂದೇ ಛತ್ರದಲ್ಲಿ ನಿಂತು ರಾಷ್ಟ್ರದ ಉನ್ನತಿಗಾಗಿ ಶ್ರಮಿಸಬೇಕು. ನಮ್ಮ ಬದುಕು ಮತ್ತು ಧರ್ಮಕ್ಕೆ ಒಂದು ತಾತ್ವಿಕ ನೆಲೆಗಟ್ಟು ರೂಪಿಸಿಕೊಟ್ಟ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ವೇಳೆಗೆ ಬೇರೆ ಬೇರೆ ಸಂಘಟನೆಗಳಿದ್ದರೂ, ನಮ್ಮಲ್ಲಿರುವ ಎಲ್ಲಾ ಬೇಧ ಭಾವ ಬಿಟ್ಟು ಎಲ್ಲರೂ ಏಕ ಮನಸ್ಸಿನಿಂದ ಹಿಂದು ಶಕ್ತಿಯನ್ನು ಸಮಾಜದಲ್ಲಿ ಶಾಶ್ವತವಾಗಿ ಸ್ಥಾಪಿಸಲು ಪ್ರಯತ್ನಿಸಬೇಕೆಂಬ ಉದ್ದೇಶದಿಂದ ಈ ಹಿಂದೂ ಸಂಗಮ ಆಯೋಜಿಸಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಅವಿನಾಶ್‌ ಕೊಡೆಂಕಿರಿ ಹೇಳಿದರು.

LEAVE A REPLY

Please enter your comment!
Please enter your name here