






ಬೆಂಗಳೂರು:ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.


ಜ.28ರಂದು ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಶಾಸಕ ಅಶೋಕ್ ಕುಮಾರ್ ರೈ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಳು ಭಾಷೆಯ ಸ್ವರೂಪ, ಇತಿಹಾಸ, ಸಾಹಿತ್ಯ, ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಸಂಸ್ಕೃತಿ, ಶಾಸನಗಳ ರಚನೆ ಕುರಿತು ಅಧ್ಯಯನ ನಡೆಸಿ ಡಾ.ಮೋಹನ್ ಆಳ್ವ ಸಮಿತಿ 2023ರ ಫೆ.14ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ.ಆ ವರದಿಯನ್ನು ಆಧರಿಸಿ ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದು,ಹೆಚ್ಚುವರಿ ಅಧಿಕೃತ ಭಾಷೆಗಳ ಘೋಷಣೆಗೆ ರಾಜ್ಯ ಸರಕಾರಗಳಿಗೆ ಅವಕಾಶ ಇದೆ.ಇದನ್ನು ಆಧರಿಸಿ ಆಂಧ್ರಪ್ರದೇಶದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ನಿಯೋಗವನ್ನು ಕಳುಹಿಸಲಾಗಿತ್ತು.ಸದರಿ ನಿಯೋಗ ವರದಿ ನೀಡಿದ ಬಳಿಕ ಅದರ ಆಧಾರದ ಮೇಲೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಶಾಸಕರ ಜೊತೆ ಸಭೆ ನಡೆಸಲಾಗುವುದು ಎಂದು ಸಚಿವ ತಂಗಡಗಿ ಭರಸೆ ನೀಡಿದರು.



3 ಸಾವಿರ ವರ್ಷಗಳ ಇತಿಹಾಸವಿದೆ:
ತುಳು ಭಾಷೆಗೆ 3 ಸಾವಿರ ವರ್ಷಗಳ ಇತಿಹಾಸವಿದೆ.ಲಿಪಿಯೂ ಇದೆ.ಗೂಗಲ್ನಲ್ಲಿ ತುಳುವಿನ ಭಾಷಾಂತರಕ್ಕೆ ಅವಕಾಶವಿದೆ.ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ತುಳು ಭಾಷೆಯ ಅಧ್ಯಯನವಾಗುತ್ತಿದೆ.ವಿಶ್ವ ವಿದ್ಯಾನಿಲಯಗಳಲ್ಲಿ ತುಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಎರಡು ಭಾಷೆಗಳನ್ನು ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ.ಅದೇ ರೀತಿ ರಾಜ್ಯದಲ್ಲೂ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕೆಂದು ಅಶೋಕ್ ಕುಮಾರ್ ರೈ ಮನವಿ ಮಾಡಿದರು.
ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಬೇಕು ಎಂದು ನಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ಸರಕಾರದ ಮುಂದೆ ಮನವಿ ಮಾಡಿದ್ದೆ,ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆದಿದೆ.ಹೊರ ರಾಜ್ಯಗಳಿಗೆ ಅಧ್ಯಯನ ಸಮಿತಿಯನ್ನು ಕಳುಹಿಸಲಾಗಿದೆ.ಘೋಷಣೆ ಮಾಡುವುದರಿಂದ ಸರಕಾರಕ್ಕೇನೂ ಆರ್ಥಿಕ ಹೊರೆಯಿಲ್ಲ.ಆದರೂ ಯಾಕೆ ಘೋಷಣೆಗೆ ಇಷ್ಟೊಂದು ತಡವಾಗುತ್ತಿದೆ? ಯಾವಾಗ ಘೋಷಣೆ ಮಾಡುವುದು ಎಂದು ಅಶೋಕ್ ಕುಮಾರ್ ರೈ ಪ್ರಶ್ನಿಸಿದರು.
ನಾನು ಶಾಸಕನಾಗಿ ಸದನಕ್ಕೆ ಬಂದಾಗ ಮೊದಲ ಪ್ರಶ್ನೆಯೇ ತುಳುವಿನ ಬಗ್ಗೆಯಾಗಿತ್ತು.ಆ ಬಳಿಕ ಎಲ್ಲಾ ಅಽವೇಶನದಲ್ಲಿ ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೇನೆ.ಸಚಿವ ಶಿವರಾಜ್ ತಂಗಡಗಿಯವರು ಈ ವಿಚಾರದಲ್ಲಿ ಸ್ವಲ್ಪ ಮುತುವರ್ಜಿ ವಹಿಸಿದ್ದಾರೆ.ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಯಾವ ರೀತಿ ಅಲ್ಲಿನ ಸ್ಥಳೀಯ ಭಾಷೆಯನ್ನು ಹೆಚ್ಚುವರಿಯಾಗಿ ಘೋಷಣೆ ಮಾಡಿದ್ದಾರೆ ಎಂಬುದನ್ನೂ ಸಚಿವರು ಅಧ್ಯಯನ ತಂಡ ಕಳಿಸಿ ಅಧ್ಯಯನ ನಡೆಸಿದ್ದಾರೆ.ಇಷ್ಟೆಲ್ಲಾ ಆದರೂ ಯಾಕೆ ಅದನ್ನು ಘೋಷಣೆ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಅಶೋಕ್ ಕುಮಾರ್ ರೈ ಸದನದ ಗಮನ ಸೆಳೆದರು.
ಅಶೋಕ್ ರೈ,ಯು.ಟಿ.ಖಾದರ್ರವರಿಗೆ ವಿಶೇಷ ಕಾಳಜಿ ಇದೆ-ತಂಗಡಗಿ:
ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿಸಬೇಕು ಎಂಬ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್ರವರು ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಅಧ್ಯಯನ ತಂಡವನ್ನು ಕಳುಹಿಸುವಲ್ಲಿ ಅಶೋಕ್ ರೈ ಪ್ರಮುಖ ಪಾತ್ರ ವಹಿಸಿದ್ದಾರೆ.ಆಂಧ್ರದಲ್ಲಿ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ.ಇದನ್ನು ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿದೆ.ತಂಡದ ವರದಿ ಸಿದ್ದಗೊಂಡ ಮೇಲೆ ಮುಖ್ಯಮಂತ್ರಿಗಳು, ವಿಧಾನಸಭಾ ಅಧ್ಯಕ್ಷರನ್ನೊಳಗೊಂಡ ಸಮಿತಿಯಲ್ಲಿ ಚರ್ಚೆ ಮಾಡಿ ಆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ತಂಗಡಗಿ ಹೇಳಿದರು.
ಮೋಹನ ಆಳ್ವರ ವರದಿಯಲ್ಲಿ ಎಲ್ಲವೂ ಇದೆ-ವೇದವ್ಯಾಸ ಕಾಮತ್:
ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ತುಳು ಭಾಷೆಯನ್ನು ಎರಡನೇ ಅಽಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಪುತ್ತೂರು ಶಾಸಕರು ವಿವರವಾಗಿ ಸಭೆಗೆ ತಿಳಿಸಿದ್ದಾರೆ.ಈಗಾಗಲೇ ಅಧ್ಯಯನಕ್ಕಾಗಿ ಬೇರೆ ರಾಜ್ಯಗಳಿಗೆ ತಂಡವನ್ನು ಕಳುಹಿಸಲಾಗಿದೆ.ತಂಡ ವರದಿ ಮಾಡಲಿ ಆದರೆ ತುಳುವಿನ ಬಗ್ಗೆ ಡಾ.ಮೋಹನ್ ಆಳ್ವರವರು ಈಗಾಗಲೇ ಎಲ್ಲಾ ವಿಚಾರವನ್ನೊಳಗೊಂಡ ಅಧ್ಯಯನ ವರದಿಯನ್ನು ಸರಕಾರದ ಮುಂದೆ ಇಟ್ಟಿದ್ದಾರೆ.ಅದನ್ನು ಕ್ಯಾಬಿನೆಟ್ನಲ್ಲಿ ಇಟ್ಟು ಮಂಜೂರು ಮಾಡಿದರೆ ಆಯಿತು ಅದನ್ನು ಸರಕಾರ ಮಾಡಬೇಕು ಎಂದು ತಿಳಿಸಿದರು.ಅಸ್ಸಾಂ ಮತ್ತು ಪ್ರಶ್ಚಿಮ ಬಂಗಾಳದಲ್ಲಿ ತಲಾ 8 ಭಾಷೆಗಳನ್ನು ಹೆಚ್ಚುವರಿ ಅಧಿಕೃತ ಭಾಷೆಗಳೆಂದು ಪರಿಗಣಿಸಲಾಗಿದೆ. ಆಂಧ್ರದಲ್ಲಿ ಉರ್ದು ಭಾಷೆಯನ್ನು ಅಧಿಕೃತ ಎಂದು ಪರಿಗಣಿಸಲಾಗಿದೆ.ಅದರಂತೆ, ರಾಜ್ಯದಲ್ಲೂ ತುಳು ಭಾಷೆಗೆ ಮಾನ್ಯತೆ ನೀಡಬೇಕೆಂದು ವೇದವ್ಯಾಸ ಕಾಮತ್ ಒತ್ತಾಯಿಸಿದರು.
ತುಳು ನಾಡಿನವರೇ ಸಚಿವರಾಗಿದ್ದಾಗ ಯಾಕೆ ಮಾಡಿಲ್ಲ-ಸಚಿವ ತಂಗಡಗಿ ವೇದವ್ಯಾಸ ಕಾಮತ್ರವರು ಈ ಹಿಂದೆ ಶಾಸಕರಾಗಿದ್ದಾಗ ತುಳು ನಾಡಿನವರೇ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು.ಆವಾಗ ಅವರು ಮಾತನಾಡಲೇ ಇಲ್ಲ.ಆದರೂ ನಾನು ಈ ವಿಚಾರದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಕ್ರಮಕೈಗೊಳ್ಳುವೆ ಎಂದು ಸಚಿವ ತಂಗಡಗಿ ಹೇಳಿದರು.
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ವಿಚಾರದ ಚರ್ಚೆಯ ಸಂದರ್ಭದಲ್ಲಿ ಶಾಸಕರು ತುಳು ಭಾಷೆಯಲ್ಲಿ ಮಾತನಾಡಿದ್ದು ಅರ್ಥವಾಗದ ಕಾರಣ ಸಚಿವ ತಂಗಡಗಿಯವರು,ನಮ್ಮ ನೆರವಿಗೆ ಬರಬೇಕು ಎಂದು ಸಭಾಧ್ಯಕ್ಷರಿಗೆ ಕೋರಿದರು.ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ತುಳು ನಾಡಿನವರು ಟೀಕೆಯನ್ನಾಗಲಿ, ಹೊಗಳಿಕೆಯನ್ನಾಗಲಿ ಪ್ರೀತಿಯಿಂದ ಮಾಡುತ್ತಾರೆ ಎಂದು ಹೇಳಿ ಸಮಾಧಾನಪಡಿಸಿದರು. ತುಳು ಅಪ್ಪೆ ಭಾಷೆ ಸಭಾಧ್ಯಕ್ಷರೆ ತುಳು ನಮ್ಮ ನಾಡಿನ ಅಪ್ಪೆ ಭಾಷೆಯಾಗಿದೆ.ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಲೇಬೇಕು ಎಂಬ ಹೋರಾಟ ನಿಲ್ಲುವುದಿಲ್ಲ.ಜಿಲ್ಲೆಯ 13 ಶಾಸಕರು ಒಟ್ಟಾಗಿ ಹೋರಾಟ ಮಾಡಿದರೆ ಇದೇನು ಕಷ್ಟದ ವಿಚಾರವಲ್ಲ.ಮುಂದಿನ ದಿನ ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು ಅಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮತ್ತೆ ಮನವಿ ಮಾಡಿದರು.










