ಹಿರೇಬಂಡಾಡಿ: ಸಾಮಾನ್ಯ ಸಭೆಗೆ ಪಿಡಿಒ ಗೈರು : ಅಧ್ಯಕ್ಷರಿಂದ ಗ್ರಾ.ಪಂ. ಸಾಮಾನ್ಯ ಸಭೆ

0

ಉಪ್ಪಿನಂಗಡಿ: ಪೂರ್ವ ನಿಗದಿಯಾಗಿದ್ದ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಗ್ರಾ.ಪಂ. ಪಿಡಿಒ ಇಂದು ರದ್ದುಗೊಳಿಸಿದರೂ ಪಿಡಿಒ ಗೈರು ಹಾಜರಿಯಲ್ಲಿ ಅಧ್ಯಕ್ಷರೇ ಸಭೆ ನಡೆಸಿದ ಘಟನೆ ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಜ.29ರಂದು ನಡೆದಿದೆ.


ಅಧ್ಯಕ್ಷರ ಅನುಮತಿಯಂತೆ ಜ.29ರಂದು ದಿನಾಂಕ ನಿಗದಿ ಮಾಡಿ ಗ್ರಾ.ಪಂ. ಸಾಮಾನ್ಯ ಸಭೆ ನಡೆಸುವ ಕುರಿತು ಹತ್ತು ದಿನಗಳ ಹಿಂದೆಯೇ ಸದಸ್ಯರಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಅವರು ತಿಳುವಳಿಕೆ ಪತ್ರ ನೀಡಿದ್ದರು. ಆದರಂತೆ ಗ್ರಾ.ಪಂ.ಗೆ ಬಂದ ಅಧ್ಯಕ್ಷರು, ಉಪಾಧ್ಯಕ್ಷರ ಸಹಿತ 11 ಮಂದಿ ಸದಸ್ಯರು, ಜ.29ರಂದು ಬೆಳಗ್ಗೆ ಪಿಡಿಒ ಅವರು ಅಧ್ಯಕ್ಷರಿಗೆ ಸಭೆ ಮುಂದೂಡುವಂತೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಈ ಬಗ್ಗೆ ಅಧ್ಯಕ್ಷರ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದರು. ಆಗ ಪಿಡಿಒ ಅವರನ್ನು ಕಳುಹಿಸುವ ಭರವಸೆ ಸಿಕ್ಕಿದ್ದು, ಆದರೆ ಗಂಟೆಗಳ ಕಾದರೂ ಪಿಡಿಒ ಅವರು ಮಾತ್ರ ಬರಲಿಲ್ಲ. ಇದನ್ನೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತರಲಾಯಿತು. ಬಳಿಕ ಅಧ್ಯಕ್ಷರೇ ಸಭೆ ನಡೆಸಲು ತೀರ್ಮಾನಿಸಿ, ಪಂಚಾಯತ್ ಸಿಬ್ಬಂದಿ ಸೋಮನಾಥ ಅವರನ್ನು ಕರೆದು ಸಭೆ ನಡೆಸಲಾಯಿತು. ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯ ನಿತೀನ್ ತಾರಿತ್ತಡಿ, ಗ್ರಾ.ಪಂ. ಪಿಡಿಒ ಅವರು ಸರಿಯಾಗಿ ಗ್ರಾ.ಪಂ.ಗೆ ಹಾಜರಾಗದೇ ಕರ್ತವ್ಯ ಲೋಪವೆಸಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಿ, ಅವರನ್ನು ಅಮಾನತು ಮಾಡಬೇಕು ಎಂದರಲ್ಲದೆ, ಪಿಡಿಒ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯ ಸಭೆಯಲ್ಲಿ ಅಂಗೀಕಾರಗೊಂಡಿತು.


ಸದಸ್ಯ ಶೌಕತ್ ಅಲಿ ಮಾತನಾಡಿ, ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರ ಹಾಗೂ ಸರಕಾರಿ ಶಾಲೆ, ಸಂಘ- ಸಂಸ್ಥೆಗಳಿಗೆ ಕುಡಿಯುವ ನೀರು ಒದಗಿಸುವಂತೆ ಕೋರಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಾಂಭವಿ, ಸದಸ್ಯರಾದ ಹೇಮಾವತಿ, ಚಂದ್ರಾವತಿ, ವಾರಿಜಾಕ್ಷಿ, ಉಷಾ.ಎಚ್.ಎನ್., ಹೇಮಂತ್, ನಾರಾಯಣ, ಲಕ್ಷ್ಮೀಶ.ಎನ್ ಉಪಸ್ಥಿತರಿದ್ದರು.

ಅನಾರೋಗ್ಯದ ರಜೆಯಲ್ಲಿದ್ದೆ: ಪಿಡಿಒ
ನಾನು ಜ.28ರಿಂದ ಕೆಲವು ದಿನಗಳ ಕಾಲ ಅನಾರೋಗ್ಯದ ರಜೆ ಹಾಕಿದ್ದೆ. ಆದ್ದರಿಂದ ಇಂದು ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಅಧ್ಯಕ್ಷರಿಂದ ಪಡೆದು ತಿಳಿಸಲಾಗುವುದು ಎಂದು ಸದಸ್ಯರಿಗೆ ವಾಟ್ಸಫ್ ಸಂದೇಶ ಕಳುಹಿಸಿದ್ದೆ. ಅನಾರೋಗ್ಯದ ಕಾರಣದಿಂದ ನನಗೆ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ಸತೀಶ್ ಬಂಗೇರ
ಪ್ರಭಾರ ಪಿಡಿಒ ಹಿರೇಬಂಡಾಡಿ ಗ್ರಾ.ಪಂ.

ಏಕಪಕ್ಷೀಯ ನಿರ್ಧಾರ: ಸತೀಶ್ ಶೆಟ್ಟಿ ಹೆನ್ನಾಳ
ಇಂದು ನಡೆಯಬೇಕಿದ್ದ ಗ್ರಾ.ಪಂ. ಸಾಮಾನ್ಯ ಸಭೆ ರದ್ದುಗೊಂಡಿರುವ ಬಗ್ಗೆ ಪಿಡಿಒ ಅವರು ವಾಟ್ಸಫ್ ಸಂದೇಶ ಹಾಕಿದ್ದರು. ಆದ್ದರಿಂದ ಸಭೆ ರದ್ದುಗೊಂಡಿದೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ನಾವು ಬಂದಿರಲಿಲ್ಲ. ಆದರೆ ಬಿಜೆಪಿ ಬೆಂಬಲಿತ ಸದಸ್ಯರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸಭೆ ನಡೆಸಿದ್ದಾರೆ. ಅಧ್ಯಕ್ಷರು ಸಭೆ ನಡೆಸುವ ಬಗ್ಗೆ ನಮಗೆ ಯಾವುದೇ ಮಾಹಿತಿನೂ ನೀಡಲಿಲ್ಲ. ಆದ್ದರಿಂದ ಈ ಸಭೆಯ ಬಗ್ಗೆ ನಮ್ಮ ಆಕ್ಷೇಪವಿದೆ. ಇದನ್ನು ನಾನು ಖಂಡಿಸುತ್ತೇನೆ.
ಸತೀಶ್ ಶೆಟ್ಟಿ ಹೆನ್ನಾಳ
ಸದಸ್ಯರು, (ಕಾಂಗ್ರೆಸ್ ಬೆಂಬಲಿತ) ಹಿರೇಬಂಡಾಡಿ ಗ್ರಾ.ಪಂ.

ನಿಯಮಾನುಸಾರ ಸಭೆ: ಶೌಕತ್ ಅಲಿ
ಸಭೆ ನಿಗದಿ ಮಾಡಿದ್ದ ಪಿಡಿಒ ಸತೀಶ್ ಬಂಗೇರ ಅವರು ಸಭೆಗೆ ಗೈರು ಹಾಜರಾಗಿರುವ ಕುರಿತು ಜಿ.ಪಂ. ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರವಾಣಿ ಮೂಲಕ ತಿಳಿಸಿದ್ದೇವೆ. ಈ ಸಂದರ್ಭ ಪಿಡಿಒ ಅವರನ್ನು ಕಳುಹಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಗಂಟೆಗಳ ತನಕ ಕಾದರೂ ಪಿಡಿಒ ಬರಲಿಲ್ಲ. ಬಳಿಕ ಕಾರ್ಯನಿರ್ವಹಣಾಧಿಕಾರಿಯವರು ಅಧ್ಯಕ್ಷರು ಸಭೆ ನಡೆಸಲು ದೂರವಾಣಿ ಮೂಲಕ ಆದೇಶ ನೀಡಿದ್ದು, ಪಿಡಿಒ ಅವರ ವಿರುದ್ಧ ಕ್ರಮದ ಭರವಸೆಯನ್ನು ನೀಡಿದ್ದಾರೆ. ಆದ್ದರಿಂದ ಅಧ್ಯಕ್ಷರೇ ನಿಯಮಾನುಸಾರ ಸಭೆ ನಡೆಸಿದ್ದಾರೆ. ನಾವು ಸಭೆಯಲ್ಲಿ ನಿರ್ಣಯ ಮಾಡಿ ಅರ್ಜಿಗಳಿಗೆ ನಿರ್ಣಯ ನಂಬರ್ ಕೊಟ್ಟಿದ್ದೇವೆ. ಇನ್ನು ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದು. ಪಿಡಿಒ ಅವರು ಸಭೆಗೆ ಗೈರು ಹಾಜರಿಯಾಗಿದ್ದರಿಂದ ತಂಬು ಕೊಡಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಹಿಂದೆ ಹೇಗೆ ಸಭೆ ನಡೆಯುತ್ತಿತ್ತೋ ಅದೇ ರೀತಿ ಸಭೆ ನಡೆಸಿ, ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಇಲ್ಲಿನ ಪಿಡಿಒ ಅವರು ಕಳೆದ ೨೩ ದಿನಗಳಿಂದ ಸರಿಯಾಗಿ ಗ್ರಾ.ಪಂ.ಗೆ ಬರುತ್ತಿಲ್ಲ. ಇವರ ಕರ್ತವ್ಯ ಲೋಪದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು.
ಹಮ್ಮಬ್ಬ ಶೌಕತ್ ಅಲಿ
ಸದಸ್ಯರು, ಹಿರೇಬಂಡಾಡಿ ಗ್ರಾ.ಪಂ.

4 ಸದಸ್ಯರು ಗೈರು
ಹಿರೇಬಂಡಾಡಿ ಗ್ರಾ.ಪಂ.ನಲ್ಲಿ 15 ಸದಸ್ಯ ಬಲವಿದ್ದು, ಅದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 11 ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಾಲ್ಕು ಮಂದಿಯಿದ್ದಾರೆ. ಇಂದಿನ ಸಭೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೈರು ಹಾಜರಿಯಾಗಿದ್ದು, ಬಿಜೆಪಿ ಬೆಂಬಲಿತ 11 ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here