






ದಕ್ಷಿಣ ಕನ್ನಡದ ನ್ಯಾಯಾಂಗ ಇತಿಹಾಸದಲ್ಲಿ,ಪುತ್ತೂರು ನ್ಯಾಯಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಈ ನ್ಯಾಯಾಲಯದಲ್ಲಿ,ವಕೀಲಿ ವೃತ್ತಿಯನ್ನು ನಡೆಸಿದ, ಅದೆಷ್ಟೋ ಮಹಾನುಭಾವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಾಗಿರುತ್ತಾರೆ.ಉತ್ತಮ ವಾಕ್ಚಾತುರ್ಯ ಹಾಗೂ ಅಪ್ರತಿಮ ಬುದ್ಧಿಶಕ್ತಿಯ ವಕೀಲರುಗಳಾಗಿ, ನ್ಯಾಯಾಧೀಶರುಗಳಾಗಿ, ಕೆಲವರು ರಾಜಕೀಯಕ್ಕೆ ಸೇರಿ ಶಾಸಕರಾಗಿ, ಮಂತ್ರಿಗಳಾಗಿ ,ಮುಖ್ಯಮಂತ್ರಿಯಾಗಿ ನಮ್ಮ ಪುತ್ತೂರಿಗೆ ಹೆಮ್ಮೆಯನ್ನು ತಂದವರಾಗಿರುತ್ತಾರೆ. ಇಲ್ಲಿನ ನ್ಯಾಯಾಲಯಗಳಿಗೆ ನ್ಯಾಯಾಧೀಶರಾಗಿ ಬಂದವರು, ಪುತ್ತೂರಿನ ಮಣ್ಣಿಗೆ ನ್ಯಾಯವನ್ನು ಕೊಟ್ಟಿರುತ್ತಾರೆ. ಮಾತ್ರವಲ್ಲ ಪುತ್ತೂರನ್ನು ಬಿಟ್ಟು ಹೋದರೂ,ಪುತ್ತೂರಿನ ಸ್ನೇಹವನ್ನು ಸದಾ ನೆನಪಿನಲ್ಲಿ ಇರಿಸುತ್ತಾರೆ.ಇಂತಹ ಸುಂದರ ಇತಿಹಾಸವಿರುವ,ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ,150 ವರ್ಷಗಳ ಹಿನ್ನೆಲೆ ಇರುವ,ಪುತ್ತೂರಿನ ನ್ಯಾಯಾಲಯ, ಪುನಃ ತನ್ನ ಪಯಣವನ್ನು ಮುಂದುವರಿಸಿದೆ.


ಪುತ್ತೂರು ನೆಲ್ಲಿಕಟ್ಟೆ ಅಂದರೆ, ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣದ ಸಮೀಪ, ಪ್ರಸ್ತುತ ಅರಣ್ಯ ಇಲಾಖೆ ಇರುವ ಪ್ರದೇಶದಲ್ಲಿ, 1860 ರಲ್ಲಿ, ಮುನ್ಸಿಪ್ ಕೋರ್ಟ್ ಇದ್ದ ಬಗ್ಗೆ ಗಡಿ ಗುರುತು ದಾಖಲೆಗಳಲ್ಲಿ ಉಲ್ಲೇಖವಿದೆ.ನಂತರ ಈಗ ನ್ಯಾಯಾಲಯ ಇರುವ ಪ್ರದೇಶದಲ್ಲಿ 1880 ರಲ್ಲಿ ಗೋಪುರ ಇರುವ ಕೋರ್ಟ್ ರಚನೆಯಾಯಿತು. ಈ ಕೋರ್ಟ್ ಕಟ್ಟಡವು, ಬರೋಬ್ಬರಿ 111 ವರ್ಷಗಳ ನೆಲೆ ನಿಂತು,ಅದರ ಒಂದು ಭಾಗ 1989 ಅಗಸ್ಟ್ 26ಕ್ಕೆ ಕುಸಿದು ಬಿದ್ದರೂ, ಪುನ ಎರಡು ವರ್ಷ ಕಟ್ಟಡದ ಉಳಿದ ಭಾಗದಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿತ್ತು. ತದನಂತರ 1991ರಲ್ಲಿ, ಈಗಿನ ಪುತ್ತೂರು ಮಹಿಳಾ ಪೊಲೀಸ್ ಸ್ಟೇಷನ್ ಪಕ್ಕದಲ್ಲಿದ್ದ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಕಟ್ಟಡದಲ್ಲಿ, 5 ವರ್ಷ ಕಾರ್ಯಚರಿಸಿ,1996ರಲ್ಲಿ ಈಗಿನ ನ್ಯಾಯಾಲಯ ಇರುವ ಸ್ಥಳದಲ್ಲಿ ನೂತನವಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಿಂತಿರುಗಿ, ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಸ್ತುತ ಪುತ್ತೂರು ನಗರದಿಂದ ಆನೆ ಮಜಲಿಗೆ, ಇಂದು ಪಯಣ ಮುಂದುವರಿಸಲಿದೆ



ಪುತ್ತೂರು ನಗರದಿಂದ ಸುಮಾರು 3 ಕಿ.ಮಿ. ದೂರದಲ್ಲಿರುವ, ಬನ್ನೂರು ಗ್ರಾಮದ ಆನೆಮಜಲಿನ, ವಿಶಾಲವಾದ ಸ್ಥಳದಲ್ಲಿ, ಸುಮಾರು 51 ಕೋಟಿ ರೂ ವೆಚ್ಚದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ಮಾದರಿಯಲ್ಲಿ, ಸುಸಜ್ಜಿತವಾಗಿ ನಿರ್ಮಾಣಗೊಂಡ ನಾಲ್ಕು ಮಹಡಿಗಳ ಕಟ್ಟಡವು, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿರುವ ನ್ಯಾಯಾಂಗಣ, ವ್ಯವಸ್ಥಿತವಾದ ನ್ಯಾಯಾಲಯದ ಕಚೇರಿಗಳು, ಸುಸಜ್ಜಿತವಾದ ನಾಲ್ಕು ಮಹಡಿಗಳ ಆಕರ್ಷಕವಾದ ವಕೀಲರುಗಳ ಭವನ, ಮುಂತಾದವುಗಳು ಗಮನ ಸೆಳೆಯುತ್ತಿದೆ. ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಈ ಹೊಸ ನ್ಯಾಯಾಲಯ ಸಂಕೀರ್ಣವು ಹೊಸ ಮೆರುಗನ್ನು ನೀಡಿದೆ. ನ್ಯಾಯವನ್ನು ಅರಸಿ ನ್ಯಾಯಾಲಯಕ್ಕೆ ಬರುತ್ತಿರುವ ಕಕ್ಷಿಗಾರಿಗೆ ಶೀಘ್ರ ನ್ಯಾಯದಾನ ನೀಡುವ ದೃಷ್ಟಿಯಿಂದ,ಹಲವು ಹೊಸ ನ್ಯಾಯಾಲಯಗಳು ಇದೇ ಕಟ್ಟಡದಲ್ಲಿ ಮುಂದೆ ಕಲಾಪಗಳನ್ನು ಆರಂಭಿಸಲಿದೆ.
ಈ ಹೊಸ ನ್ಯಾಯಾಲಯ ಸಂಕೀರ್ಣವು ಇಂದು(ಜನವರಿ 31ರಂದು) ಅಧಿಕೃತವಾಗಿ ಉದ್ಘಾಟನೆಗೊಂಡು, ಮಧ್ಯಾಹ್ನ 2:45 ಕ್ಕೆ ತನ್ನ ಪ್ರಪಥಮ ಕಲಾಪವನ್ನು ನಡೆಸುವುದರೊಂದಿಗೆ ಪುತ್ತೂರಿನ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ನಿರ್ಮಿಸಲಿದೆ.
✍️ ನೂರುದ್ದೀನ್ ಸಾಲ್ಮರ
ನ್ಯಾಯವಾದಿ ಮತ್ತು ನೋಟರಿ,ಪುತ್ತೂರು. ದ.ಕ.










