ಇಡಿಯ ಕರಾವಳಿ ಜನರಿಗಾಗಿ ಅಶೋಕ್ ರೈ ಒಬ್ಬರೇ ಹೋರಾಡಬೇಕಾ?

0

ವಿಧಾನಸಭಾ ಅಧಿವೇಶನದಲ್ಲಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಕುಮ್ಕಿ ಹಕ್ಕನ್ನು ರೈತರಿಗೆ ಒದಗಿಸಿಕೊಡುವ ಬಗೆಗೆ ಧ್ವನಿಯೆತ್ತಿದ್ದಾರೆ. ’ಅದು ಸಾಧ್ಯವಿಲ್ಲ’ ಎನ್ನುವ ಉತ್ತರ ಸರ್ಕಾರದ ಪ್ರತಿನಿಧಿಯಿಂದ ದೊರಕಿದಾಗ ’ಯಾಕೆ ಸಾಧ್ಯವಿಲ್ಲ’ ಎಂದು ಅಶೋಕ್ ರೈ ಮರುಪ್ರಶ್ನೆ ಹಾಕಿದ್ದಾರೆ. ಸರ್ಕಾರಕ್ಕೆ ಜಾಗದ ಕೊರತೆ ಇದ್ದರೆ ಗೇರುಕೃಷಿಗಾಗಿ ಲೀಸ್‌ಗೆ ನೀಡಲಾದ ಸಾವಿರಾರು ಎಕರೆಯನ್ನು ಸರ್ಕಾರಕ್ಕೆ ಮರಳಿ ಪಡೆಯಿರಿ, ರೈತರ ಕುಮ್ಕಿ ಹಕ್ಕನ್ನು ಅವರಿಗೇ ನೀಡಿ ಎಂದು ಗಟ್ಟಿ ಧ್ವನಿಯಲ್ಲಿ ಸ್ಪಷ್ಟ ವಾದ ಮಂಡಿಸಿದ್ದಾರೆ. ಕಾನೂನಿನಲ್ಲಿ ಕುಮ್ಕಿ ಹಕ್ಕನ್ನು ಒದಗಿಸಿಕೊಡುವುದಕ್ಕೆ ಅವಕಾಶ ಇಲ್ಲದಿದ್ದರೆ ಹೊಸತಾದ ಕಾನೂನು ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ.


ಅಶೋಕ್ ರೈ ಹೀಗೆ ಜನಪರ ಮಾತುಗಳನ್ನಾಡುತ್ತಿರುವುದು ಇದೇನೋ ಮೊದಲಲ್ಲ. ಕೃಷಿಕರಿಗೆ ವಿಮೆ ಬಾರದೇ ಇದ್ದಾಗಲೂ ಅಶೋಕ್ ರೈ ಮಾತನಾಡಿದ್ದಾರೆ. ತುಳು ಭಾಷೆಗೆ ಮಾನ್ಯತೆ ಕೊಡುವ ದೃಷ್ಟಿಯಿಂದಲೂ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಪ್ರತಿಬಾರಿಯೂ ಸದನದಲ್ಲಿ ’ತುಳು ಮಾತು’ ಮತ್ತು ’ತುಳುವಿನ ಬಗೆಗಿನ ಮಾತು’ ಎರಡೂ ಕೇಳಿ ಬರುತ್ತಿದೆ. ಈ ಬಾರಿಯಂತೂ ರೈ ಅವರ ಬೇಡಿಕೆಗೆ ಸಂಬಂಧಪಟ್ಟ ಇಲಾಖೆಯ ಸಚಿವ ಶಿವರಾಜ ತಂಗಡಗಿ ತಾತ್ವಿಕವಾಗಿ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಈ ನಡುವೆ ತುಳುನಾಡಿನ ಕಂಬಳವನ್ನು ರಾಜ್ಯ ರಾಜಧಾನಿಗೆ ಒಯ್ಯುವ ಕೆಲಸದಲ್ಲೂ ಶಾಸಕ ರೈ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಬಡವರ ನಿವಾಸ ನಿರ್ಮಾಣಕ್ಕೆ ಆಯಾ ಗ್ರಾಮದಲ್ಲಿ ಜಾಗವಿರದಿದ್ದರೆ ಮತ್ತೊಂದು ಗ್ರಾಮದಲ್ಲಿ ಒದಗಿಸಿಕೊಡಬಹುದೆಂಬ ಹೊಸ ನಿಯಮವನ್ನು ಕಂದಾಯ ಇಲಾಖೆ ಹೊರಡಿಸುವಂತೆ ಅಶೋಕ್ ರೈ ನೋಡಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಮೇಲಿನ ಸಂಗತಿಗಳೆಲ್ಲಾ ಅಶೋಕ್ ರೈಯವರ ಕ್ಷೇತ್ರಕ್ಕಷ್ಟೇ ಸಂಬಂಧಿಸಿದ್ದಲ್ಲ. ಕೆಲವೆಲ್ಲ ಇಡಿಯ ರಾಜ್ಯಕ್ಕೆ ಉಪಕಾರವಾಗುವ ವಿಚಾರವಾದರೆ ಇನ್ನು ಕೆಲವು ದಕ್ಷಿಣ ಕನ್ನಡ ಜಿಲ್ಲೆಗೆ ಒಳಿತಾಗುವ ವಿಚಾರಗಳು!


ಈಗ ಪ್ರಶ್ನೆ ಮೂಡುತ್ತಿರುವುದು ಇತರ ಶಾಸಕರ ಬಗೆಗೆ. ಜನರ ಸಮಸ್ಯೆಯನ್ನರಿತು ಸದನದಲ್ಲಿ ನಿಜವಾಗಿ ಆಗಬೇಕಾದ ಚರ್ಚೆ, ವಿಚಾರ ವಿನಿಮಯಗಳನ್ನು ಒಬ್ಬ ಅಶೋಕ್ ಕುಮಾರ್ ರೈ ಮಾಡುವುದಕ್ಕೆ ಸಾಧ್ಯವಿದ್ದರೆ ಉಳಿದ ಅನೇಕ ಶಾಸಕರಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಕುಮ್ಕಿ ವಿಚಾರ ಅಶೋಕ್ ರೈಯವರಿಗೆ ಮಾತ್ರ ನೆನಪಾಗುವುದು ಯಾಕೆ? ದಕ್ಷಿಣ ಕನ್ನಡ – ಉಡುಪಿ ಭಾಗದ ಇನ್ನಿತರ ಶಾಸಕರಿಗೆ ಯಾಕೆ ಈ ಕಾಳಜಿ ಮೂಡುವುದಿಲ್ಲ? ಪ್ರತಿನಿತ್ಯ ತುಳುನಾಡಿನ ಕೋಲ, ದೈವಸ್ಥಾನಗಳಿಗೆ ಭೇಟಿ ಕೊಡುತ್ತಲೇ ಇರುವ ಇತರ ಶಾಸಕರಿಗೆ ತುಳುವಿಗೆ ಮಾನ್ಯತೆ ಕೊಡಿಸಬೇಕೆಂಬ ಹಠ – ಭಾವ ಯಾಕೆ ಹೊಮ್ಮುತ್ತಿಲ್ಲ? ಕಂಬಳದಂತಹ ಕ್ರೀಡೆಯನ್ನು ರಾಜಧಾನಿಯಲ್ಲೂ ಮಾಡಬಹುದೆಂಬ ಕಲ್ಪನೆ ಇತರರಿಗೇಕೆ ಮೂಡುತ್ತಿಲ್ಲ? ಹಾಗಾದರೆ ನಾವು ಆಯ್ಕೆ ಮಾಡಿದ ಹಲವಾರು ಶಾಸಕರು ನಮಗೆ ಮಾಡಿಕೊಡಬಹುದಾದ ಕೆಲಸಗಳನ್ನು ಮಾಡದೆ ತಮ್ಮ ಅಧಿಕಾರವನ್ನು ಅನುಭವಿಸುವುದಕ್ಕಷ್ಟೇ ಮೀಸಲಾಗಿದ್ದಾರೆ ಎಂಬುದು ಅಶೋಕ್ ರೈ ಅವರು ಮಾಡುತ್ತಿರುವ ಕೆಲಸಗಳನ್ನು ನೋಡುವಾಗ ಜನರಿಗೆ ಅನಿಸದೇ ಇರುತ್ತದೆಯೇ?


ಇತ್ತೀಚೆಗಷ್ಟೆ ಅಶೋಕ್ ರೈ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕರಾವಳಿಯ ಎಲ್ಲ ಶಾಸಕರು ಒಂದಾದರೆ ಕುಮ್ಕಿ ಹಕ್ಕನ್ನು ಒದಗಿಸಿಕೊಡುವುದು ದೊಡ್ಡ ವಿಷಯವೇ ಅಲ್ಲ ಎಂದಿದ್ದರು. ಇದೀಗ ಅಧಿವೇಶನದಲ್ಲಿ ಉಳಿದವರ ಆಸಕ್ತಿ ಹೇಗಾದರೂ ಇರಲಿ, ತಾನು ಮುಂದುವರಿಯುತ್ತೇನೆ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಶಾಸಕ ಜನಪರವಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಅಶೋಕ್ ರೈ ಸಾಧಿಸಿತೋರಿಸುತ್ತಿದ್ದಾರೆ.


ಬಹುತೇಕ ಜನ ’ಇದಾಗುವಂಥದ್ದಲ್ಲ’ ಎಂದು ಕೈಚೆಲ್ಲಿರುವ ಹತ್ತು ಹಲವು ವಿಚಾರಗಳನ್ನು ಅಶೋಕ್ ಕುಮಾರ್ ರೈ ಸಾಧ್ಯವಾಗಿಸುತ್ತಿದ್ದಾರೆ. ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ರಸ್ತೆ ಸಮಸ್ಯೆಗಳು, ವಿವಿಧ ಜಾತಿ – ಪಂಗಡದವರ ಸಂಘಕ್ಕೆ ಸರ್ಕಾರದಿಂದ ನಿವೇಶನ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನದಂತಹ ವಿಚಾರಗಳು ಇವೆಲ್ಲವೂ ಅಶೋಕ್ ರೈ ಅವರಿಂದ ಒಂದು ತಾರ್ಕಿಕ ಮತ್ತು ಸುಖಾಂತ್ಯವನ್ನು ಕಾಣುತ್ತಿವೆ. ಹಾಗಾಗಿಯೇ ಅಶೋಕ್ ಕುಮಾರ್ ರೈ ನಿಜವಾದ ಜನನಾಯಕನಾಗಿ ಹೊಮ್ಮುತ್ತಿರುವುದು!


ನಿಜ, ಸರ್ಕಾರ ಕಾಂಗ್ರೆಸ್‌ನದ್ದೇ ಇದೆ. ಹಾಗಾಗಿ ಅಶೋಕ್ ರೈಯವರಿಗೆ ಕೆಲಸ ಮಾಡಿಸಿಕೊಳ್ಳುವ ಅವಕಾಶ ಇತರ ಪಕ್ಷದ ಶಾಸಕರಿಗಿಂತ ಸಾಕಷ್ಟು ಹೆಚ್ಚೇ ಇದೆ. ಆ ವಾದ ಒಪ್ಪುವಂತಹದ್ದೆ. ಆದರೆ ಈ ಹಿಂದೆಲ್ಲಾ ಆಯಾ ಶಾಸಕರ ಪಕ್ಷದ್ದೇ ಸರ್ಕಾರವಿದ್ದಾಗಲೂ ಕರಾವಳಿಯ ಶಾಸಕರು ಯಾಕೆ ಇಂತಹ ವಿಚಾರಗಳನ್ನು ಸದನದ ಮುಂದೆ ತಂದಿಲ್ಲ? ಇದು ಕೇವಲ ಭಾಜಪ ಶಾಸಕರು ಅಂತಲ್ಲ, ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾಗಲೂ, ಅವರದೇ ಸರ್ಕಾರ ಈ ಹಿಂದೆ ಇರುವಾಗಲೂ ಅಶೋಕ್ ಕುಮಾರ್ ರೈಯವರಂತೆ ತಮ್ಮ ಕ್ಷೇತ್ರಕ್ಕಷ್ಟೇ ಅಲ್ಲದೆ ಜಿಲ್ಲೆ, ರಾಜ್ಯಕ್ಕೆ ಬೇಕಾದ ವಿಚಾರಗಳನ್ನು ಹಠ ಹಿಡಿದು ಸಾಧಿಸಿದ್ದು ಬಹು ಕಡಿಮೆ. ಭಾಜಪ ಶಾಸಕರಿದ್ದು, ಅವರದೇ ಸರ್ಕಾರವಿದ್ದಾಗಲೂ ಕುಮ್ಕಿ ವಿಚಾರದಲ್ಲಿ ಇಂತಹ ಗಟ್ಟಿ ಧ್ವನಿ ಕೇಳಿಬಂದಿಲ್ಲ. ಒಂದೆರಡು ಬಾರಿ ಪ್ರಸ್ತಾಪಗೊಂಡಿವೆಯಾದರೂ ಅದನ್ನು ಮುಂದುವರೆಸುವ, ’ಯಾಕೆ ಆಗುವುದಿಲ್ಲ’ ಎಂದು ಮರುಪ್ರಶ್ನೆ ಹಾಕುವ ಛಾತಿಯನ್ನು ತೋರಿಲ್ಲ.
ಅಶೋಕ್ ಕುಮಾರ್ ರೈ ಅವರ ಪಕ್ಷದ ಚಿಂತನೆಗಳ ಬಗೆಗೆ ಪುತ್ತೂರಿನಲ್ಲೋ, ಕರಾವಳಿಯಲ್ಲೋ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಭಾಜಪವನ್ನು ಕಂಡರೆ ಉರಿದು ಬೀಳುವ ಕಾಂಗ್ರೆಸಿಗರು, ಕಾಂಗ್ರೆಸ್ ಅಂದೊಡನೆ ಕಣ್ಣು ಕೆಂಪಾಗಿಸುವ ಭಾಜಪದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂದು ಅಶೋಕ್ ಕುಮಾರ್ ರೈಯವರನ್ನು ಟೀಕಿಸುವ ಹಲವಾರು ಮಂದಿ ರೈ ಅವರು ಕಾಂಗ್ರೆಸ್ ಶಾಸಕ ಎಂಬ ಕಾರಣಕ್ಕೆ ಟೀಕಿಸುತ್ತಿದ್ದಾರೆಯೇ ವಿನಃ ತಮ್ಮದೇ ಪಕ್ಷದಲ್ಲಿರುತ್ತಿದ್ದರೆ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವ ಸಾಧ್ಯತೆ ಇತ್ತು. ’ನಮ್ಮ ಪಕ್ಷದಿಂದ ಮಾತ್ರ ಇಂತಹ ನಾಯಕ ಬರಲು ಸಾಧ್ಯ’ ಎಂದು ಅಲ್ಲಲ್ಲಿ ಹೋರ್ಡಿಂಗ್ಸ್ ಹಾಕುತ್ತಿದ್ದರೇನೋ!


ಅಶೋಕ್ ರೈ ಇಂದು ಕೇವಲ ಪುತ್ತೂರಿನ ಶಾಸಕನಾಗಿ ಮಾತ್ರವಲ್ಲ ಇಡಿಯ ಕರಾವಳಿಯ ಪ್ರತಿನಿಧಿಯಾಗಿ ಮಾತನಾಡುತ್ತಿದ್ದಾರೆ. ಹಾಗಾಗಿಯೇ ಹೊಸ ಕಾಲದ ರಾಜಕಾರಣದ ಮಾದರಿಯಾಗಿ ಅಶೋಕ್ ರೈ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅವರ ಪಕ್ಷದ ಪಕ್ಕಾ ವಿರೋಧಿಗಳೂ ಅಶೋಕ್ ರೈ ಹೆಸರು ಬಂದಾಗ ಧ್ವನಿ ಇಳಿಸುತ್ತಿದ್ದಾರೆ. ಗುಟ್ಟಿನಲ್ಲಿ ಮಾತನಾಡುವಾಗ ’ಇಂಥ ಶಾಸಕ ಬೇರಿಲ್ಲ’ ಅನ್ನುತ್ತಿದ್ದಾರೆ. ಪಕ್ಷಾತೀತವಾಗಿ ಅಭಿವೃದ್ಧಿಯೊಂದೇ ನಮ್ಮ ಕನಸು ಎಂದು ಯೋಚಿಸುತ್ತಿರುವ ಬಹುದೊಡ್ಡ ಸಂಖ್ಯೆಯ ವರ್ಗಕ್ಕೆ ಅಶೋಕ್ ರೈ ಹೀರೋ ಆಗಲಾರಂಭಿಸಿದ್ದಾರೆ.


ಅಶೋಕ್ ಕುಮಾರ್ ರೈ ಒಬ್ಬ ಜನಪ್ರತಿನಿಧಿ ನಿಜವಾಗಿ ಮಾಡಬೇಕಾದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅಭಿವೃದ್ಧಿ ಹೊರತುಪಡಿಸಿ ಹಾಳುಹರಟೆಗಳಲ್ಲಿ ಭಾಗಿಯಾಗದೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಾಲಾ ಶಿಕ್ಷಕಿಯೊಬ್ಬರನ್ನು ’ಆನ್ ಕ್ಯಾಮರಾ ವಿಚಾರಣೆ ನಡೆಸಿದ ಪ್ರಕರಣ, ನಗರಸಭಾ ಆಯುಕ್ತೆಗೂ ’ಆನ್ ಕ್ಯಾಮರಾ ಗದರಿದ’ ಸಂಗತಿ.. ಇಂತಹ ಕೆಲವು ಬೆರಳೆಣಿಕೆಯ ಪ್ರಸಂಗಗಳನ್ನು ಹೊರತುಪಡಿಸಿದರೆ ಅಶೋಕ್ ಕುಮಾರ್ ರೈಯಂಥ ಗೌರವಯುತ ನಾಯಕ ಹೀಗೆ ಮಾಡಬಾರದಿತ್ತು ಎಂದೆನಿಸಿದ ಸಂಗತಿಗಳಿಲ್ಲ. ಬಹುಶಃ ಆ ಸಂಗತಿಗಳಿಗೆ ಸಜ್ಜನ ಸಮಾಜ ನೀಡಿದ ಪ್ರತಿಕ್ರಿಯೆಯನ್ನು ಅಶೋಕ್ ಕುಮಾರ್ ರೈಯವರೂ ಒಳಿತಿನ ಭಾವದಿಂದಲೇ ಸ್ವೀಕರಿಸಿದ್ದಾರೆ. ಅಂತಹ ವಿಚಾರಗಳನ್ನು ಮುಂದುವರೆಸಲು ಹೋಗದೆ ನಾಗರಿಕ ಸಮಾಜದ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.


ಒಟ್ಟಿನಲ್ಲಿ ಅಶೋಕ್ ಕುಮಾರ್ ರೈ ತನಗೆ ಸಿಕ್ಕ ಅವಕಾಶವನ್ನು ಎಷ್ಟು ಚೆನ್ನಾಗಿ ಬಳಸಬಹುದೋ ಅಷ್ಟೂ ಬಳಸಿಕೊಳ್ಳುತ್ತಿದ್ದಾರೆ. ಒಬ್ಬ ಮಾದರಿ ನಾಯಕ ಇರಬೇಕಾದ ರೀತಿಯನ್ನು ಆವಾಹಿಸಿಕೊಳ್ಳುತ್ತಿದ್ದಾರೆ. ಒಬ್ಬ ಶಾಸಕ ಹೇಗೆಲ್ಲಾ ಕೆಲಸ ಮಾಡಬಹುದು ಎಂಬುದನ್ನೂ ತೋರಿಕೊಡುತ್ತಿದ್ದಾರೆ.
ಕುಮ್ಕಿ ಬಗೆಗೆ ಹೇಳುವುದಾದರೆ, ಕರಾವಳಿ ಭಾಗದಲ್ಲಿ ಕುಮ್ಕಿ ಜಾಗದಲ್ಲಿ ಕೃಷಿ ಮಾಡಿರುವ, ಮನೆ ಕಟ್ಟಿಕೊಂಡಿರುವ ಸಾಕಷ್ಟು ಜನರಿದ್ದಾರೆ. ಇಲ್ಲಿ ಕೃಷಿ ಬದುಕನ್ನು ಸಾಗಿಸುತ್ತಿರುವ ಪ್ರತಿಯೊಬ್ಬನ ಸುಪರ್ದಿಯಲ್ಲೂ ಒಂದಷ್ಟು ಭಾಗ ಕುಮ್ಕಿ ಜಾಗವಿದೆ. ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಸರ್ಕಾರ ಕುಮ್ಕಿ ಜಾಗದಿಂದ ಒಕ್ಕಲೆಬ್ಬಿಸದಿದ್ದರೂ (ಕೆಲವು ಕಡೆ ಹೊರತುಪಡಿಸಿ) ಜಾಗವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕುಮ್ಕಿ ಜಾಗಕ್ಕೆ ಯಾವ ಮೌಲ್ಯವೂ ದೊರಕುವುದಿಲ್ಲ. ಅಲ್ಲಿ ಮನೆ ಕಟ್ಟಿಕೊಂಡಿದ್ದರೂ, ಕೃಷಿ ನಡೆಸುತ್ತಿದ್ದರೂ ಖರೀದಿಸುವವರು ಅದನ್ನು ಪರಿಗಣಿಸುವುದಿಲ್ಲ. ಹಾಗಾಗಿ ಕುಮ್ಕಿ ಜಾಗವನ್ನು ಅಧಿಕೃತವಾಗಿ ಪಹಣಿ ಮಾಡಿಸದ ಹೊರತು ತಮ್ಮ ಜಾಗವನ್ನು ನಿಜವಾದ ಮೌಲ್ಯದೊಂದಿಗೆ ಮತ್ತೊಬ್ಬರಿಗೆ ಮಾರಾಟ ಮಾಡುವುದು ಕಷ್ಟವೆನಿಸುತ್ತಿದೆ. ಜತೆಗೆ ತಾವು ಜೀವಮಾನದ ಸಂಪಾದನೆ ಸುರಿದು ನಿರ್ಮಿಸಿಕೊಂಡ ಮನೆ, ತಮ್ಮ ಜೀವನಕ್ಕಾಗಿ ಮಾಡಿಕೊಂಡಿರುವ ಕೃಷಿ ಯಾವಾಗ ಕೈತಪ್ಪಿ ಹೋಗುತ್ತದೋ ಎಂಬ ಮಾನಸಿಕ ವ್ಯಾಕುಲತೆ ಇಲ್ಲಿನವರನ್ನು ಕಾಡುತ್ತಲೇ ಇದೆ. ಹಾಗಾಗಿಯೇ ಆ ಹಕ್ಕನ್ನು ತಮಗೆ ನೀಡಬೇಕೆಂದು ಈ ಭಾಗದ ಕೃಷಿಕರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಇದುವರೆಗೂ ಯಾವ ಜನಪ್ರತಿನಿಧಿಯೂ ಮನಸ್ಸಿಗೆ ಇಳಿಸಿಕೊಳ್ಳದ, ಸದನದಲ್ಲಿ ಪಟ್ಟು ಹಿಡಿದು ಹೋರಾಟ ನಡೆಸದ ಕುಮ್ಕಿ ವಿಚಾರವನ್ನು ಅಶೋಕ್ ರೈ ಇತ್ಯರ್ಥಪಡಿಸಿದ್ದೇ ಹೌದಾದಲ್ಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಈ ವಿಚಾರ ಬಹುದೊಡ್ಡ ’ವರದಾನ’ವೆನಿಸಲಿದೆ.


ಈಗಾಗಲೇ ತಮ್ಮ ತಮ್ಮ ಸಮುದಾಯ ಸಂಘಗಳ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಒದಗಿಸಿಕೊಟ್ಟದ್ದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರನ್ನು ಬೆಂಬಲಿಸುತ್ತೇವೆ ಎಂದು ಹಲವು ಜಾತಿಯ ಸಂಘಟನೆಗಳು ಘೋಷಿಸಿಕೊಂಡಿವೆ. ಹಲವಾರು ಕಡೆಗಳಲ್ಲಿ ರಸ್ತೆ ವಿವಾದ ವರ್ಷಾನುಗಟ್ಟಲೆ ಇತ್ಯರ್ಥವಾಗದೆ ಬದುಕು ದುಸ್ತರವಾಗಿದ್ದಲ್ಲಿ ಅವುಗಳನ್ನೆಲ್ಲ ಪರಿಹರಿಸಿಕೊಟ್ಟದ್ದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಅಶೋಕ್ ರೈಯವರಿಗಾಗಿ ಕೆಲಸ ಮಾಡುತ್ತೇವೆಂದು ಆ ಭಾಗದ ಜನ ಭಾಷೆ ಇತ್ತಿದ್ದಾರೆ. ಇನ್ನು ಮೆಡಿಕಲ್ ಕಾಲೇಜು, ಶ್ರೀ ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿಯೇ ಮೊದಲಾದ ಅಭಿವೃದ್ಧಿಯ ಕಾರಣಕ್ಕಾಗಿ ’ಅಭಿವೃದ್ಧಿಗೇ ಮತ’ ಎಂಬ ಭಾವನೆಯುಳ್ಳವರು ಅಶೋಕ್ ರೈಯೆಡೆಗೆ ವಾಲುತ್ತಿದ್ದಾರೆ. ಹೀಗಿರುವಾಗ ’ಇಲ್ಲಿ ಪೂರ ನಮ್ಮದೇ’ ಎಂದು ಯಾರಾದರೂ ಇನ್ನೂ ಭ್ರಮೆಯಲ್ಲಿದ್ದಾರಾದರೆ ಅಂತಹವರನ್ನು ಕರುಣೆಯಿಂದ ಕಾಣುವುದು ಒಳ್ಳೆಯದು!


ಹಾಗೆಂದು, ಅಶೋಕ್ ಕುಮಾರ್ ರೈ ವೇಗ – ಸಾಧನೆಯನ್ನು ಕಂಡು ವಿಪಕ್ಷೀಯರು ಕೈಚೆಲ್ಲಿ ಕುಳಿತುಕೊಳ್ಳಬೇಕಾದದ್ದೇನೂ ಇಲ್ಲ. ವಿರೋಧ ಪಕ್ಷದಲ್ಲಿದ್ದರೂ ತಮ್ಮ ಕಾರ್ಯಕರ್ತರ ಸಹಕಾರದೊಂದಿಗೆ ಜನಸೇವೆ ಮಾಡುವುದಕ್ಕೆ, ಜನರಿಗಾಗಿ ಹೋರಾಟ ನಡೆಸುವುದಕ್ಕೆ ಎಲ್ಲ ನಾಯಕರಿಗೂ ಅವಕಾಶಗಳಿವೆ. ಅಂತಹ ಕಾರ್ಯಗಳನ್ನು ಜನರೂ ಗುರುತಿಸುತ್ತಾರೆ. ಅತ್ಯುತ್ತಮ ಕೆಲಸ ಮಾಡುವ ವ್ಯಕ್ತಿ ಎಲ್ಲಿದ್ದರೂ ಜನ ಭರವಸೆ ಇಡುತ್ತಾರೆ. ಅಶೋಕ್ ರೈಯಂತಹ ಸಮರ್ಥ ನಾಯಕನೊಬ್ಬ ತನ್ನೆದುರು ಇರುತ್ತಾ ಅರುಣ್ ಪುತ್ತಿಲ ಎಂಬ ಮತ್ತೋರ್ವ ನಾಯಕ ಈಗಲೂ ಪುತ್ತೂರಿನಲ್ಲಿ ಹಲವರ ’ನೆಚ್ಚಿನ ಅಭ್ಯರ್ಥಿ’ ಎನಿಸಿಕೊಂಡಿರುವುದಕ್ಕೆ ಸಾಧ್ಯವಾಗಿದೆಯಾದರೆ, ಅದಕ್ಕೆ ಕಾರಣ ಅಂಧಾಭಿಮಾನವಲ್ಲ. ಅರುಣ್ ಪುತ್ತಿಲ ಮಾಡುತ್ತಿರುವ ಜನಸೇವೆ, ಸಮಾಜಸೇವೆ ಹಾಗೂ ಮೂಡಿಸಿರುವ ಭರವಸೆ!


ಏನೇ ಇದ್ದರೂ ಅಶೋಕ್ ರೈ ಅವರು ಸದ್ಯ ಕೇವಲ ಪುತ್ತೂರಿಗರ ಧ್ವನಿಯಾಗಿ ಅಷ್ಟೇ ಅಲ್ಲದೆ ಕರಾವಳಿಗರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ’ಇಂತಹ ನಾಯಕ ನಮಗೂ ಬೇಕಿತ್ತು’ ಅಂತ ಜನ ಮಾತಾಡಿಕೊಳ್ಳುವ ಮಟ್ಟಕ್ಕೆ ಅಶೋಕ್ ರೈ ಬೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ರೈ ಅವರ ಅಭಿವೃದ್ಧಿಪರ – ಜನಪರ ಕಾರ್ಯಗಳಿಗೆ ಶಹಬ್ಬಾಸ್ ದೊರಕುತ್ತಿದೆ. ಗಳಿಸಿದಂತಹ ಖ್ಯಾತಿಗಳು ಮತ್ತಷ್ಟು ಬೆಳೆಸುವಂತಹ ಕಾರ್ಯಕ್ಕೆ ವಿನಿಯೋಗವಾದರೆ ಪುತ್ತೂರಿನ ರಾಜಕೀಯ ಇತಿಹಾಸದಲ್ಲಿ ಅಶೋಕ್ ಕುಮಾರ್ ರೈ ಅವರ ಹೆಸರು ದೊಡ್ಡ ದಾಖಲೆಯಾಗಿ ಮೂಡಿಬರಬಹುದು!

                         

LEAVE A REPLY

Please enter your comment!
Please enter your name here