ಹಿರೇಬಂಡಾಡಿ ಗ್ರಾಮದಲ್ಲಿ ಶಾಸಕ ಅಶೋಕ್ ರೈ ಅವರಿಂದ ವಿವಿಧ ಕಾಮಗಾರಿ ಗುದ್ದಲಿಪೂಜೆ, ಉದ್ಘಾಟನೆ

0

ಹಿರೇಬಂಡಾಡಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ: ಶಾಸಕ ಅಶೋಕ್ ರೈ

ಪುತ್ತೂರು: ಹಿರೇಬಂಡಾಡಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಗ್ರಾಮ ಅಭಿವೃದ್ದಿಯಲ್ಲಿ ತುಂಬಾ ಹಿಂದೆ ಇದ್ದು ಈ ಗ್ರಾಮದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನ ಅಗತ್ಯತೆ ಇದ್ದು ಅದನ್ನು ನೀಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.

ಇದು ಮಾಜಿ ಶಾಸಕರೋರ್ವರ ಗ್ರಾಮವಾಗಿದ್ದರೂ ಅಭಿವೃದ್ದಿಯಲ್ಲಿ ಕುಂಠಿತವಾಗಿರುವುದು ಬೇಸರ ತಂದಿದೆ. ಇಲ್ಲಿನ ಗ್ರಾಮೀಣ ಒಳರಸ್ತೆಗಳು ಇನ್ನೂ ಕಾಂಕ್ರೀಟ್ ಆಗಿಲ್ಲ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಗ್ರಾ.ಪಂ.ನಿಂದ ಕನಿಷ್ಠ ಕುಡಿಯುವ ನೀರು ಮತ್ತು ದಾರಿ ದೀಪದ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗದೇ ಇರುವುದು ಖೇದಕರ ಸಂಗತಿಯಾಗಿದೆ ಎಂದು ಹೇಳಿದರು. ಬೇಡಿಕೆಗಳು ಹಲವು ಇದ್ದು ಎರಡನೇ ಹಂತದಲ್ಲಿ ಆಧ್ಯತೆಗೆ ಅನುಗುಣವಾಗಿ ಅನುದಾನವನ್ನು ಒದಗಿಸಿದ್ದೇನೆ. ಅವುಗಳಿಗೆ ಶಿಲಾನ್ಯಾಸವನ್ನೂ ಮಾಡಿದ್ದೇನೆ, ಮುಂದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಹೇಳಿದರು. ನಿಮ್ಮ ಗ್ರಾಮ ಅಭಿವೃದ್ದಿಯಾಗಿಲ್ಲ ಎಂಬ ಚಿಂತೆ ಬಿಡಿ ಎಂದು ಗ್ರಾಮಸ್ಥರಿಗೆ ಸೂಚನೆ ನೀಡಿದ ಶಾಶಕರು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವ ಮೂಲಕ ಗ್ರಾಮದ ಪೂರ್ಣ ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು.

ಉಳತ್ತೋಡಿ ಷಣ್ಮುಖ ದೇವಸ್ಥಾನದಲ್ಲಿ ಆರಂಭ ಮಾಡಲಾದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುದಾನ ಒದಗಿಸುವುದಾಗಿ ಶಾಸಕರು ತಿಳಿಸಿದರು. ಕೆಮ್ಮಾರ ಮಸೀದಿ ರಸ್ತೆ ಪಕ್ಕದಲ್ಲಿದ್ದು ಮಳೆ ನೀರು ಹರಿದು ಮಸೀದಿಯ ಜಾಗವನ್ನೇ ನುಂಗಿದೆ ಇದಕ್ಕೆ ತಡೆಗೋಡೆ ಮಾಡಲು ಅನುದಾನ ನೀಡಿರಲಿಲ್ಲ ಇದಕ್ಕೆ 90 ಲಕ್ಷ ರೂ. ಅನುದಾನವನ್ನು ಒದಗಿಸಿದ್ದೇನೆ. ಅದೇ ರೀತಿ ಗ್ರಾಮದ ಭಜನಾ ಮಂದಿರಕ್ಕೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದರು.

ಗ್ರಾ.ಪಂ ಆಡಳಿತದ ವಿರುದ್ದ ಗ್ರಾಮಸ್ಥರ ಆಕ್ರೋಶ
ಹಿರೇಬಂಡಾಡಿ ಗ್ರಾಪಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ದಾರಿ ದೀಪವಿಲ್ಲ, ಅನುದಾನ ಇಡುವಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದರು. ಹರಿನಗರ ಕಾಲನಿಯಲ್ಲಿ ನಳ್ಳಿಯಲ್ಲಿ ಮಣ್ಣು ತುಂಬಿದ ನೀರು ಬರುತ್ತಿದೆ ಈ ಬಗ್ಗೆ ಗ್ರಾಪಂಗೆ ದೂರು ನೀಡಿದರೆ ಅದಕ್ಕೆ ಸ್ಪಂದನೆ ಇಲ್ಲ. ಇಷ್ಟು ವರ್ಷದಲ್ಲಿ ನಮ್ಮ ಏರಿಯಾಗೆ ಯಾವ ಶಾಸಕರೂ ಬಂದಿಲ್ಲ, ನೀವು ನಮ್ಮ ಸಮಸ್ಯೆಯನ್ನು ಆಲಿಸಲು ಬಂದಿದ್ದರಿ. ಇಲ್ಲಿ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಗ್ರಾಪಂ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಶಾಸಕರಲ್ಲಿ ದೂರಿದರು.

ಗ್ರಾಪಂ ನಲ್ಲಿ ಶೌಕತ್ ಕಾರ್‌ಬಾರು…!

ಹಿರೆಬಂಡಾಡಿ ಗ್ರಾಪಂ ಕಚೇರಿಗೆ ನಾವು ಹೋಗುವ ಹಾಗೆ ಇಲ್ಲ ಅಲ್ಲಿ ಶೌಕತ್ ಎಂಬವರದ್ದೇ ಕಾರುಬಾರು. ಪಿಡಿಒ ಕೂಡಾ ಅವರು ಹೇಳಿದ ಹಾಗೆ ಕುಣಿಯುತ್ತಾರೆ . ಗ್ರಾಮದಲ್ಲಿ ಸರಿಯಾದ ಸಭೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಶೌಕತ್ ಹೇಳಿದ್ದೇ ಗ್ರಾಪಂ ನಲ್ಲಿ ನಡೆಯುತ್ತದೆ ಅವರನ್ನು ಗ್ರಾಪಂ ನಿಂದ ಹೊರ ಹಾಕಿ ಎಂದು ಹರಿನಗರ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಪಿಡಿಒ ಅವರು ರಾಜಕೀಯ ಬಿಟ್ಟು ಕೆಲಸ ಮಾಡಬೇಕು, ಯಾರೋ ಹೇಳಿದ ಹಾಗೆ ಕಳೆಯುವ ಅಧಿಕಾರಿಯಾಗಬಾರದು. ಈ ಭಾಗದಲ್ಲಿ ಕುಡಿಯುವ ನೀರಿಲ್ಲ ಎಂದು ದೂರು ನೀಡಿದಾಗ ಪಿಡಿಒ ಬಂದು ಪರಿಶೀಲನೆ ಮಾಡಬೇಕಿತ್ತು ಅದನ್ನು ಮಾಡುತ್ತಿಲ್ಲ ಎಂದು ದೂರಿದರು.

ಮಠಂದೂರು ಈ ಭಾಗಕ್ಕೆ ಬಂದೇ ಇಲ್ಲ
ನಮ್ಮೂರಿನ ಹೆಮ್ಮೆಯ ಶಾಸಕರಾಗಿದ್ದ ಸಂಜೀವ ಮಠಂದೂರು ಅವರು ಶಾಸಕರಾಗಿದ್ದಾಗ ನಾವೆಲ್ಲಾ ಸಂತೋಷಗೊಂಡಿದ್ದೆವು. ನಮ್ಮ ರಸ್ತೆಗಳು ಅಭಿವೃಧ್ದಿಯಾಗುತ್ತದೆ ಎಂದು ಕನಸು ಕಂಡಿದ್ದೆವು, ಆದರೆ ಅವರು ಶಾಸಕರಾದ ಮೇಲೆ ನಮ್ಮ ಏರಿಯಾಗೆ ಬಂದೇ ಇಲ್ಲ ಸಮಸ್ಯೆಯನ್ನು ಆಲಿಸಿಯೇ ಇಲ್ಲ. ನಾನು ಇಲ್ಲಿಗೆ ಮದುವೆಯಾಗಿ ಬಂದು 20 ವರ್ಷ ಕಳೆದಿದೆ ಒಬ್ಬನೇ ಒಬ್ಬ ಜನಪ್ರತಿನಿಧಿ ಬಂದು ನಮ್ಮ ಸಮಸ್ಯೆ ಆಲಿಸಿಲ್ಲ. ಅಶೋಕ್ ರೈ ಅವರು ಈ ಭಾಗಕ್ಕೆ ಎರಡನೇ ಭಾರೀ ಆಗಮಿಸಿದ್ದೀರಿ. ನಮ್ಮ ರಸ್ತೆ ಬೇಡಿಕೆಯನ್ನು ಈಡೇರಿಸಿದ್ದೀರಿ ಎಂದ ಗ್ರಾಮಸ್ಥರು ಮುಂದೆ ನೀವೇ ಮುಂದೆ ನಿಂತು ನಮ್ಮ ಗ್ರಾಮವನ್ನು ಅಭಿವೃದ್ದಿ ಮಾಡಿ. ರಾಜಕೀಯ ಬದಿಗಿಟ್ಟು ಜನರ ಸೇವೆಯನ್ನು ಮಾಡುವ ಮೂಲಕ ನೀವು ನಮ್ಮ ಗ್ರಾಮದಲ್ಲೂ ಹೀರೋ ಆಗಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

ದಾದಯ ನಿನ್ನ ಚೀಟಿ ಎಂದು ಕೇಳಿದ್ದರು..
ನಾವು ಮಠಂದೂರು ಶಾಸಕರಾಗಿದ್ದ ವೇಳೆ ಸಮಸ್ಯೆ ಬಗ್ಗೆ ಮನವಿ ಕೊಡಲು ಹೋದಾಗ ದಾದಯ ನಿನ್ನ ಚೀಟಿ ಎಂದು ನಮ್ಮನ್ನು ಗೇಲಿ ಮಾಡಿದ್ದರು. ನಾವು ಚೀಟಿ ಹಿಡಿದುಕೊಂಡು ಹೋಗಿದ್ದಲ್ಲ, ನಮ್ಮ ಭಾಗಕ್ಕೆ ಕುಡಿಯುವ ನೀರು ಕೊಡಿ ಎಂದು ಮನವಿ ಮಾಡಲು ಹೋಗಿದ್ದೆವು. ಇಂಥವರಿಂದ ಅಭಿವೃದ್ದಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮ ಮನವಿಯನ್ನು ಚೀಟಿ ಎಂದು ಪರಿಗಣಿಸಿ ಅವರು ಅದನ್ನು ತಿರಸ್ಕರಿಸಿದ್ದಾರೆ ಎಂದು ಹರಿನಗರ ಕಾಲನಿ ನಿವಾಸಿಗಳು ಆರೋಪಿಸಿದರು.

ಬಿಡುಗಡೆಯಾದ ಕಾಮಗಾರಿ, ಅನುದಾನ: ಲಕ್ಷ ರೂ.ಗಳಲ್ಲಿ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಕೆಮ್ಮಾರ ಮಹಿಯುದ್ದೀನ್ ಜುಮಾ ಮಸೀದಿ ಪಕ್ಕದಲ್ಲಿ ತೋಡಿಗೆ ತಡೆಗೋಡೆ 90ಲಕ್ಷ, ಪುಲಮುಗೇರು ರಸ್ತೆ ಅಭಿವೃದ್ಧಿ 5.50 ಲಕ್ಷ, ಹರಿನಗರ ರಸ್ತೆ ಅಭಿವೃದ್ಧಿ 05.05, ಗ್ರಾಮದ ಮುಖ್ಯ ರಸ್ತೆ ಯಿಂದ ಹಿರೇಬಂಡಾಡಿ ಪ್ರೌಢಶಾಲೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.05 ಲಕ್ಷ , ಹಿರೆಬಂಡಾಡಿಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆತ್ತಡಿ ಹೆನ್ನಾಳ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ , ಗ್ರಾಮದ ಪೀತೃಪಾಲುಕಲ್ಲ ಭಂಡಾರ ಮನೆವರೆಗೆ ರಸ್ತೆ ಅಭಿವೃದ್ಧಿ 10.00 ಲಕ್ಷ ರೂ. ಕೊಳ್ಳಜಾಲು-ನಾಗಣ ಕೋಡಿ ರಸ್ತೆ ಕಾಂಕ್ರೀಟಿಕರಣ 10.00 ಲಕ್ಷ, ಗ್ರಾಮದ ಕಮ್ಮಾರ ನೇಕಾರಪೇಟೆ ಸಂಬರ್ಪಿ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಗ್ರಾಮದ ಪೆರಾಬೆ ಎಂಬಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ರೂ 5 ಲಕ್ಷ , ಗ್ರಾಮದ ಅತ್ತಾಜೆ ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ , ಗ್ರಾಮದ ಒಂದನೇ ವಾರ್ಡ್ ನಂದಿನಿ ನಗರದಿಂದ ಕಂಪ-ಅತ್ತಾಜೆ- ಬದ್ಧಮಜಲು ಗ್ರಾಮ ದೈವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಗ್ರಾಮದ ಹರಿನಗರ (ಉಪ್ಪಿನಂಗಡಿ ನಟ್ಟಿಬೈಲಿನ ಒಳ ರಸ್ತೆ) ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.00, ಅಡ್ಕರೆಗುರಿ- ಅರಿಜಾಲು-ಕೆರೆಕೋಡಿ ಎಂಬಲ್ಲಿ ರಸ್ತೆ ಅಭಿವೃದ್ಧಿ 10.00, ಬೋಲ್ಕುಡ ಅಂಗನವಾಡಿ ಕೇಂದ್ರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.00, ಪಟಾರ್ತಿ – ಕಜೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.00, ದಾಸರಮೂಲೆ- ಅಂಗನವಾಡಿಯಿಂದ ಆಕಿರೆ ಕಾಲೋನಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 10.00, ಪಾಲೆತ್ತಡಿಯಿಂದ ಮುರ ಕ್ವಾಟ್ರಾಸ್ ರಸ್ತೆ ಅಭಿವೃದ್ಧಿ 10.00, ಗ್ರಾಮದ ಕರೆಂಕಿ ರಸ್ತೆ ಅಭಿವೃದ್ಧಿ 10.00, ಗ್ರಾಮದ ಶ್ರೀ ಉಳತ್ತೋಡಿ ಷಣ್ಮುಖ ದೇವಸ್ಥಾನದ ಅಭಿವೃದ್ಧಿ 09.00, ಶ್ರೀ ಉಳ್ಳಾಲ್ತಿ ಉಳ್ಲಾಯ ಸ-ಪರಿವಾರ ಟ್ರಸ್ಟ್ ಅಭಿವೃದ್ದಿ 05 , ಮಂಜುಶ್ರೀ ಭಜನಾಮಂದಿರ ಅಭಿವೃದ್ದಿ 5 ಲಕ್ಷ ರೂ. ಅನುದಾನವನ್ನು ನೀಡಲಾಗಿದ್ದು, ಎಲ್ಲದಕ್ಕೂ ಶಿಲಾನ್ಯಾಸ ನೆರವೇರಿಸಲಾಗಿದೆ ಮತ್ತು ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ.

ಗ್ರಾಪಂ ಆಡಳಿತದ ಬಗ್ಗೆ ಜನಾಕ್ರೋಶವಿದೆ
ಹಿರೆಬಂಡಾಡಿ ಗ್ರಾಪಂ ಆಡಳಿತ ಕಾರ್ಯವೈಖರಿಯ ಬಗ್ಗೆ ಜನಾಕ್ರೋಶವಿದೆ. ಗ್ರಾಮಸ್ಥರಿಗೆ ಮುಖ್ಯವಾಗಿ ನೀಡಬೆಕಾದ ಕುಡಿಯುವ ನೀರು ಮತ್ತು ದಾರಿದೀಪವನ್ನು ಕೊಡುವಲ್ಲಿ ಗ್ರಾಪಂ ಸಂಪೂರ್ಣ ವಿಫಲವಾಗಿದೆ. ಹರಿನಗರ ಭಾಗದ ಜನರು ನಮ್ಮ ಭಾಗವನ್ನ ಉಪ್ಪಿನಂಗಡಿ ಗ್ರಾಪಂ ಗೆ ಸೇರಿಸಿ ಎಂದು ಮನವಿ ಮಾಡುವ ಮಟ್ಟಕ್ಕೆ ಬಂದಿದ್ದಾರೆ ಅಂದ್ರೆ ಅಲ್ಲಿ ಅವರಿಗೆ ಎಷ್ಟು ನೋವಾಗಿರಬಹುದು. ಕನಿಷ್ಠ ಮೂಲಭೂತ ಸೌಕರ್ಯಕ್ಕೆ ಗ್ರಾಂ ಒತ್ತು ನೀಡಬೇಕಿತ್ತು. ಶಾಸಕ ಅಶೋಕ್ ರೈ ಅವರು ಗ್ರಾಮಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂ ಅಭಿವೃದ್ದಿ ಹೊಂದಲಿದೆ ಎಂದು ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್ ಹೇಳಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಅಲ್ಪಸಂಖ್ಯಾತ ಘಟಕ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಬಾಬು ಅಗರಿ, ಉಳತ್ತೋಡಿ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಡಿತ್ತಾಯ, ದೇವಪ್ಪ ಪಡ್ಪು, ಗಂಗಾಧರ ಎಲಿಯ, ಸದಾಶಿವ ಬಂಗೇರ, ವಿದ್ಯಾ ನಿಡ್ಯಂಕಿ, ಶಿವಚಂದ್ರ ನಿಡ್ಯಂಕಿ, ಗ್ರಾಪಂ ಸದಸ್ಯೆ ಗೀತಾದಾಸರ ಮೂಲೆ, ಭವಾನಿ ಮುರದ ಮೇಲು, ಸವಿತಾ ಹರೀಶ್, ಸತೀಶ್ ಶೆಟ್ಟಿ ಹೆನ್ನಾಳ, ಝಕರಿಯ್ಯಾ ನಾಗನಕೋಡಿ, ಸೇಸಪ್ಪ ನೆಕ್ಕಿಲು, ಭಾಸ್ಕರ ಹರಿನಗರ, ಗಂಗಾಧರ, ಶೌಕತ್ ಕೆಮ್ಮಾರ, ಲೋಕೇಶ್ ಪೆಲತ್ತಡಿ, ಕೆಮ್ಮಾರ ಜುಮಾ ಮಸೀದಿ ಅದ್ಯಕ್ಷ ಎನ್ ಇಬ್ರಾಹಿಂ, ಇಸ್ಮಾಯಿಲ್ ಕೆಮ್ಮಾರ, ಶರೀಪ್ ಕೆಮ್ಮಾರ, ರಹಿಮಾನ್ ಕೆಮ್ಮಾರ, ಬೂತ್ ಅಧ್ಯಕ್ಷ ಶೌಕತ್ ಕೆಮ್ಮಾರ, ಖಾಸಿಂ ಕೆಮ್ಮಾರ, ಖಾಲಿದ್, ಜಗನ್ನಾಥ ಜೇಡರಪೇಟೆ, ಸೀತಾ ಜೇಡರ ಪೇಟೆ, ಉಮ್ಮರ್, ಝುಬೈರ್, ಮಹಮ್ಮದ್, ಅರವಿಂದ, ಉಷಾಲತಾ, ಶಿವಾನಂದ, ವಿಶ್ವನಾಥ ಹರಿನಗರ, ಗಂಗಾಧರ, ನಸೀಮಾ, ಶರಣ್, ಪುಷ್ಪರಾಜ್, ಸತೀಶ್, ಗಣೇಶ್, ಮೋಹನ್ ಗೌಡ, ಕರೆಂಕಿ ಗ್ರಾಮಸ್ಥರಾದ ಮೋನಪ್ಪ, ತೇಜಸ್ವಿನಿ, ರವಿ , ಅಶೋಕ , ದೇರಣ್ಣ ಉಪಸ್ಥಿತರಿದ್ದರು. ವಲಯ ಕಾಂಗ್ರೆ ಅಧ್ಯಕ್ಷ ರವಿಪಟ್ಟಾರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದದರು.

LEAVE A REPLY

Please enter your comment!
Please enter your name here