ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆಗೆ ನಳಿನ್ ಕುಮಾರ್ ಕಟೀಲ್ ?

0

  • ನನಗೆ ಯಾವ ಹುದ್ದೆಯ ಅಪೇಕ್ಷೆ ಇಲ್ಲ – ನಳಿನ್

ಪುತ್ತೂರು: ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ದ.ಕ.ಕ್ಷೇತ್ರದ ಮಾಜಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಂದ್ರ ಸರ್ಕಾರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನೇಮಕಗೊಳಿಸುವ ಕುರಿತು ಬಿಜೆಪಿ ವರಿಷ್ಟರ ವಲಯದಲ್ಲಿ ಚರ್ಚೆ ನಡೆಯುತ್ತಿರುವುದಾಗಿ ವರದಿಯಾಗಿದೆ.


ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ವರಿಷ್ಠ ನಾಯಕರು ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಯಾಬಿನೆಟ್ ರ್‍ಯಾಂಕ್‌ನ ಈ ಹುದ್ದೆಯನ್ನು ಕೊಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ, ಕೇರಳದ ಉಸ್ತುವಾರಿಯಾಗಿ ಸೇರಿದಂತೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಉತ್ತಮ ರೀತಿ ನಿಭಾಯಿಸುವ ಮೂಲಕ ಪಕ್ಷದ ನಾಯಕರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಇದೀಗ ಕೇಂದ್ರ ಸರ್ಕಾರ ಅವರಿಗೆ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ನಿರ್ಧರಿಸಿದೆ ಎನ್ನುವ ವಿಚಾರದ ಕುರಿತು ನಳಿನ್ ಕುಮಾರ್ ಕಟೀಲ್ ಅವರ ಆಪ್ತ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.


ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಟೆಕ್ಸ್‌ಟೈಲ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುವ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಕ್ಯಾಬಿನೆಟ್ ರ್‍ಯಾಂಕ್‌ನದ್ದಾಗಿದೆ. ಭಾರತದ ರೇಷ್ಮೆ ಉದ್ಯಮದ ಸಂಪೂರ್ಣ ಮೌಲ್ಯ ಸರಪಳಿಯನ್ನು ವೈಜ್ಞಾನಿಕ ಮತ್ತು ಸುಸ್ಥಿತ ವಿಧಾನಗಳ ಮೂಲಕ ಬೆಂಬಲಿಸುವ ಮತ್ತು ಅಭಿವೃದ್ಧಿ ಪಡಿಸುವ, ರೇಷ್ಮೆ ಉದ್ಯಮದ ಸಂಶೋಧನೆ, ಅಭಿವೃದ್ಧಿ ಗುಣಮಟ್ಟ, ನಿಯಂತ್ರಣ ಪ್ರಚಾರದ ಜವಾಬ್ದಾರಿಯನ್ನು ಹೊಂದಿದೆ.

ನನಗೆ ಯಾವ ಹುದ್ದೆಯ ಅಪೇಕ್ಷೆ ಇಲ್ಲ – ನಳಿನ್
ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನಗೆ ಯಾವ ಹುದ್ದೆಯ ಅಪೇಕ್ಷೆಯೂ ಇಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here