“ವೀರ ರಾಣಿ ಅಬ್ಬಕ್ಕ” ಗೌರವ ಪುರಸ್ಕಾರಕ್ಕೆ ದ.ಕ ಜಿಲ್ಲೆಯಿಂದ ಹಿರಿಯ ಜಾನಪದ ಕಲಾವಿದೆ ಕಮಲಾ ಪೆರುವಾಯಿ ಆಯ್ಕೆ

0

ಪೆರುವಾಯಿ: ಹಿರಿಯ ಜಾನಪದ ಕಲಾವಿದೆ ಕಮಲಾ ಪೆರುವಾಯಿಯವರು ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ABRSM-KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿರುವ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಕೇರಳದ ಕುಂಬಳೆ ಆರಿಕ್ಕಾಡಿ ದಿ.ಗೋಪಾಲ ಮತ್ತು ಯಮುನಾ ದಂಪತಿಗಳ ಪುತ್ರಿಯಾಗಿರುವ ಕಮಲಾ. ಪೆರುವಾಯಿ ಗ್ರಾಮದ ಮುಂಚಿರಬೆಟ್ಟು ನಿವಾಸಿ ಪ್ರಸಿದ್ಧ ದೈವನರ್ತಕರಾಗಿದ್ದ ದಿ. ಕೊರಗು ರವರ ಪ್ರಥಮ ಪುತ್ರ ಮಾಂಕುರವರ ಪತ್ನಿ.

ಎಳೆ ವಯಸ್ಸಿನಲ್ಲಿ ಕೂಡು ಕುಟುಂಬದೊಂದಿಗೆ ಸಂಸಾರವನ್ನು ನಿಭಾಯಿಸುತ್ತಾ, ತನ್ನ ಮಾವ ಹಾಗೂ ಪತಿಯೊಂದಿಗೆ ದೈವಾರಾಧನೆ ಕ್ಷೇತ್ರದಲ್ಲಿ ತೆಂಬರೆ ಬಡಿಯುತ್ತಾ, ಪಾಡ್ದನ ಹೇಳುತ್ತಾ ದೈವರಾಧನೆ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ. ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ಜಾನಪದ ಕಲೆಗಳಾದ ಮಾದಿರ ಕುಣಿತ, ಕನ್ಯಾಪು ಕುಣಿತವನ್ನು ಪ್ರದರ್ಶಿಸಿ ಬಹುಮಾನದ ಜೊತೆಗೆ ಪ್ರಶಂಸೆಯನ್ನು ಗಳಿಸಿರುತ್ತಾರೆ.

ವೃತ್ತಿ ಬದುಕಿನ ಜೊತೆ ಚಾಪೆ ಹಣೆಯುವುದು, ಮುಟ್ಟಾಳೆ ತಯಾರಿಕೆಯಲ್ಲಿ ಪರಿಣಿತರಾಗಿದ್ದಾರೆ. ಪೆರುವಾಯಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿ ರಾಜಕೀಯ ಕ್ಷೇತ್ರದಲ್ಲೂ ಜನರ ಸೇವೆ ಮಾಡುತ್ತಾ ಬಂದಿರುವ ಇವರ ಜಾನಪದ ಕಲೆ ಹಾಗೂ ದೈವಾರಧನೆ ಕ್ಷೇತ್ರದ ಸೇವೆಯನ್ನು ಗುರುತಿಸಿ ಹಲವು ವೇದಿಕೆಗಳಲ್ಲಿ ಗೌರವಿಸಿ ಸನ್ಮಾನಿಸಲಾಗಿದೆ.

ಇವರ ಜಾನಪದ ಕ್ಷೇತ್ರದ ಕಲಾ ಸಾಧನೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವ ಇನ್ನಷ್ಟು ಉತ್ತುಂಗಕ್ಕೆರಲು ಅನುವು ಮಾಡಿಕೊಟ್ಟಂತಾಗಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಫೆ. 16 ರಂದು ಪುತ್ತೂರು ನೆಹರೂ ನಗರದ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here