ವಿಕಸಿತ ಭಾರತ ಉದ್ಯೋಗ, ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್‌ನ ದಿವಾಳಿತನಕ್ಕೆ ಸಾಕ್ಷಿ – ಸಂಜೀವ ಮಠಂದೂರು ಆರೋಪ

0

ಪುತ್ತೂರು: ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡುವುದು ಕಾಂಗ್ರೆಸ್‌ನ ಜನ್ಮ ಸಿದ್ದ ಹಕ್ಕು ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಭ್ರಷ್ಟಾಚಾರದ, ವೋಟ್ ಚೋರಿಯ , ಎಸ್.ಐ.ಆರ್ ಕುರಿತು ಅಪಪ್ರಚಾರ ಮಾಡಿ ಮುಖಕ್ಕೆ ಮಸಿ ಬಳಿದುಕೊಂಡಿರುವ ಕಾಂಗ್ರೆಸ್ ಇದೀಗ ವಿಕಸಿತ ಭಾರತ ಉದ್ಯೋಗ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್‌ನ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರಕಾರ 1977ರ ದಶಕದಲ್ಲಿ ಜನತಾ ಪಾರ್ಟಿಯ ಪ್ರಧಾನಿಯಾಗಿದ್ದ ಮೋರಾರ್ಜಿ ದೇಸಾಯಿ ಅವರು ಕೂಲಿಗಾಗಿ ಕಾಳು ಯೋಜನೆ ಜಾರಿಗೆ ತಂದರು. ಆ ಬಳಿಕ ಆ ಹೆಸರನ್ನು ಕಾಂಗ್ರೆಸ್ ಸರಕಾರ ಜವಾಹರ ರೋಜಗಾರಿ ಯೋಜನೆ ಎಂದು ಪುನರ್ ನಾಮಕರಣ ಮಾಡಿದರು. ಬಳಿಕ ಮತ್ತೆ ಅದನ್ನೇ ಉದ್ಯೋಗ ಖಾತರಿ ಯೋಜನೆ ಎಂದು ಹೆಸರಿಡಲಾಯಿತು. ಆ ಮೇಲೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಎಂಬ ಹೆಸರಿನಲ್ಲಿ ಕರೆಯಲಾಯಿತು. ಹೀಗೆ ಅನೇಕ ಭಾರಿ ಹೆಸರು ಬದಲಾಯಿಸಿದ್ದು ಕಾಂಗ್ರೆಸ್ ನೇತೃತ್ವದ ಸರಕಾರ. ಆದರೆ ಇದೀಗ ಕೇಂದ್ರ ಸರಕಾರ ಸ್ವಾತಂತ್ರ್ಯ ಬಂದು ಈ ದೇಶಕ್ಕೆ 100 ವರ್ಷ ಆಗುವ ವೇಳೆ ಪ್ರತಿಯೊಂದು ಪಂಚಾಯತ್ ವಿಕಸಿತ ಪಂಚಾಯತ್ ಆಗಬೇಕೆಂಬ ನೆಲೆಯಲ್ಲಿ ಯೋಜನೆಯಲ್ಲಿ ಒಂದಷ್ಟು ಪರಿಷ್ಕರಣೆ ಮಾಡಿ ಹೆಚ್ಚು ಪರಿಣಾಮಕಾರಿಯಾಗಿ ಪಂಚಾಯತ್ ಮಟ್ಟದಲ್ಲಿ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ವಿಕಸಿತ ಭಾರತ ಉದ್ಯೋಗ, ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ (ವಿಬಿಜಿಆರ್‌ಎಎಮ್‌ಜಿ) ಜಾರಿಗೆ ತಂದಿದೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಒಂದಷ್ಟು ಭ್ರಷ್ಟಾಚಾರ ಆಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿರಲಿಲ್ಲ. ಇದನ್ನು ಮನಗಂಡು ಯೋಜನೆಯಲ್ಲಿ ಬದಲಾವಣೆ ತಂದಿದೆ. ಹಿಂದೆ ಉದ್ಯೋಗ ಸೃಷ್ಟಿ ಗುರಿಯಾಗಿತ್ತು. ಇವತ್ತು ಬದಲಾದ ಯೋಜನೆಯಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ ಮಾಡಲಾಗಿದೆ. 100 ದಿನಗಳ ಉದ್ಯೋಗ ಖಾತ್ರಿಯೂ 125 ದಿನಕ್ಕೆ ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಯೋಜನೆ, ಕೇಂದ್ರ ರಾಜ್ಯ ಹಂಚಿಕೆಯಲ್ಲಿ 60:40 ಮಾಡಲಾಗಿದೆ. ಯೋಜನೆಯಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ಅಳವಡಿಕೆ ಸಹಿತ ತಂತ್ರಜ್ಞಾನದ ಬಳಕೆ ಜಾಸ್ತಿ ಮಾಡಲಾಗಿದೆ. ಹೀಗೆ ಹಲವಾರು ಉತ್ತಮ ಪಾರದರ್ಶಕ ಯೋಜನೆ ತರಲಾಗಿದೆ ಎಂದು ವಿವರಿಸಿದ ಅವರು ರಾಜ್ಯ ಸರಕಾರದ ಭಾಗವಹಿಸುವಿಕೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಆದರೆ ಕರ್ನಾಟಕ ರಾಜ್ಯ ಇವತ್ತು ದಿವಾಳಿಯಾಗಿದೆ. ಅವರಿಗೆ ಯೋಜನೆಗೆ ಶೇ.40 ಬರಿಸುವಂತಹ ಚೈತನ್ಯ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್‌ಗೆ ಭ್ರಷ್ಟಾಚಾರ ಮಾಡಲು ಅವಕಾಶವಿಲ್ಲ ಎಂದು ಯೋಜನೆಯ ವ್ಯವಸ್ಥೆಯ ವಿರುದ್ಧ ಬೀದಿಗಿಳಿದು ರಸ್ತೆ ರಂಪಾಟ ಮಾಡುತ್ತಿದೆ ಎಂದು ಆರೋಪಿಸಿದರು.


ಕುರ್ಚಿಯ ಗುದ್ದಾಟ ಮರೆಮಾಚಲು ರಸ್ತೆಯಲ್ಲಿ ಓಡಾಟ:
ಆರಂಭದಲ್ಲಿ ಕೂಲಿಗಾಗಿ ಕಾಳು ಯೋಜನೆ ಜನತಾ ಸರಕಾರ ತಂದದ್ದು, ಅದನ್ನು ಮುಂದುವರಿಸಿದ್ದು ಕಾಂಗ್ರೆಸ್ ಸರಕಾರ. ನಾಲ್ಕೈದು ಬಾರಿ ಹೆಸರು ಬದಲಾವಣೆ ಮಾಡಿದ್ದು ಕಾಂಗ್ರೆಸ್ ಸರಕಾರ. ಇವತ್ತು ಈ ದೇಶದ ಪ್ರಧಾನಿ ವಿಕಸಿತ ಭಾರತ ಭಾರತ ಎಂದು ಹೆಸರಿಟ್ಟಿದ್ದಾರೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 1೦೦ ವರ್ಷ ಆಗುವ ಸಂದರ್ಭ ಪ್ರತಿ ಪಂಚಾಯತ್ ವಿಕಸಿತ ಪಂಚಾಯತ್ ಆಗಬೇಕೆನ್ನುವ ದೃಷ್ಟಿಯಿಂದ ಅದಕ್ಕೆ ವಿಕಸಿತ ಭಾರತ ಎಂದು ಹೆಸರಿಡಲಾಗಿದೆ. ಯೋಜನೆಯಲ್ಲಿ ಹಲವಾರು ಬದಲಾವಣೆ ಆಗಿದೆ. ಹಾಗಾಗಿ ಇದರಲ್ಲಿ ಯಾವುದೇ ನೇತಾರರ ಹೆಸರನ್ನು ಇಡಲಿಲ್ಲ. ಭಾರತೀಯ ನಾಯಕರ ಹೆಸರನ್ನು ಇಡಲಿಲ್ಲ. ಆದರೆ ಕಾಂಗ್ರೆಸ್ ಹೆಸರಿಗೆ ಬೇಕಾಗಿ ರಂಪಾಟ ಮಾಡುತ್ತಿದೆ. ಕೇಂದ್ರ ಸರಕಾರದ ಅನುದಾದಲ್ಲಿ ಪಂಚಾಯತ್ ನಡೆಯುತ್ತಿದೆ. ರಾಜ್ಯ ಸರಕಾರಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಭರವಸೆ ಇಲ್ಲ. ತಾ.ಪಂ, ಗ್ರಾ.ಪಂ ಜಿ.ಪಂ, ಎಪಿಎಂಸಿ ಚುನಾವಣೆ ಮಾಡುತ್ತಿಲ್ಲ. ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇದೆಯಾ ? ಪಂಚಾಯತ್ ರಾಜ್ ಕಾಯ್ದೆ ಮಾಡಿದ ಕಾಂಗ್ರೆಸ್‌ಗೆ ಪಂಚಾಯತ್‌ ಮೇಲೆ ವಿಶ್ವಾಸವಿಲ್ಲ. ಗ್ರಾಮೀಣ ಭಾಗದ ಪಂಚಾಯತ್‌ಗಳನ್ನು ಮತ್ತೆ ಸಬಲೀಕರಣ ಮಾಡುವ ಉದ್ದೇಶವಿಲ್ಲ. ಇದೆಲ್ಲವನ್ನು ಬಿಟ್ಟು ಜನರ ಹಿತ ಕಾಯಬೇಕಾದ ರಾಜ್ಯ ಸರಕಾರ ಕುರ್ಚಿಯ ಗುದ್ದಾಟವನ್ನು ಮರೆಮಾಚುವ ದೃಷ್ಟಿಯಿಂದ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದಾರೆ ಎಂದು ಸಂಜೀವ ಮಠಂದೂರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ನಾಗೇಶ್ ಟಿ.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here