






ಪುತ್ತೂರು:ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು, ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರವು ಫೆ.15 ರಂದು ಕೋರ್ಟ್ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.


ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯವರು ಕಳೆದ ಹದಿನೈದು ವರ್ಷಗಳಿಂದ ಜನರ ಆರೋಗ್ಯದ ಬಗ್ಗೆ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿಯೋರ್ವರಿಗೂ ಒಳ್ಳೆಯ ಆರೋಗ್ಯ ಸಿಗಲಿ ಎಂಬುದೇ ನಮ್ಮ ಹಾರೈಕೆಯಾಗಿದ್ದು ಈ ಶಿಬಿರದ ಪ್ರಯೋಜನ ಫಲಾನುಭವಿಗಳಿಗೆ ಸಿಗುವಂತಾಗಲಿ ಎಂದರು.



ಪುತ್ತಿಲ ಪರಿವಾರ ಟ್ರಸ್ಟ್ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಎಳವೆ ಹರೆಯದಲ್ಲಿಯೇ ಜೀವನವನ್ನು ಅಂತ್ಯಗೊಳಿಸುವುದಕ್ಕೆ ಕಾರಣ ಜೀವನಶೈಲಿ ಆಗಿದೆ. ಹೆಚ್ಚು ವರ್ಷ ಬದುಕಬೇಕಾದರೆ ನಾವು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಬದುಕು ಸಂತೋಷಮಯ ಆಗಲು ನಾವು ಆರೋಗ್ಯದ ಕಡೆಗೆ ಗಮನ ಹರಿಸಬೇಕಾಗಿದೆ. ವ್ಯಕ್ತಿಯ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಇಂತಹ ಶಿಬಿರಗಳು ಅತ್ಯವಶ್ಯಕವಾಗಿದೆ. ತ್ರಿಶೂಲ್ ಫ್ರೆಂಡ್ಸ್ ಯುವ ಸಂಘಟನೆ ಇಂತಹ ಕಾರ್ಯಕ್ರಮದಲ್ಲಿ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಪ್ರಶಾಂತ್ ಬಿ.ಎನ್ ಮಾತನಾಡಿ, ಪುತ್ತೂರಿಗೆ ಪ್ರಥಮ ಬಾರಿಗೆ ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯ ಆಗಮನವಾಗಿದ್ದು ಜಿಲ್ಲೆಯ ಎರಡನೇ ಅತೀ ದೊಡ್ಡ ಆಸ್ಪತ್ರೆಯಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಂಸ್ಥೆಯ ಅವಶ್ಯಕತೆ ಬೇಕಾಗಿದೆ. ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಿಬ್ಬಂದಿಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯ ಮಂಗಳೂರು ಘಟಕದ ಸಿ.ಎಂ.ಒ ಎಸ್.ಗಿರೀಶ್ ಮಾತನಾಡಿ, ದೇಹದ ಪ್ರಮುಖ ಅಂಗಗಳಲ್ಲಿ ಕಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣಿದ್ದರೆ ಸುಂದರ ಸಮಾಜ ಅನುಭವಿಸಲು ಆಗುತ್ತದೆ. ನಮ್ಮ ಸಂಸ್ಥೆಯು ಕಳೆದ ಹದಿನೈದು ವರ್ಷಗಳಲ್ಲಿ 20 ಸಾವಿರದಷ್ಟು ಕಣ್ಣಿನ ಶಿಬಿರಗಳು, ಹತ್ತು ಸಾವಿರದಷ್ಟು ಉಚಿತ ಕನ್ನಡಕಗಳನ್ನು ವಿತರಿಸಿದ್ದೇವೆ ಎಂದರು.
ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯ ಎಚ್.ಆರ್ ಮತ್ತು ಮುಖ್ಯಸ್ಥ ಚೇತನ್ ಮೆಂಡೋನ್ಸಾ, ಡಾ.ವಿಜಯ ಪೈ, ಡಾ.ಯೋಗೀಶ್, ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಸಂಯೋಜಕ ರಝಾಕ್ ಬಿ.ಎಚ್, ತ್ರಿಶೂಲ್ ಫ್ರೆಂಡ್ಸ್ ನ ಧರೇಶ್ ಹೊಳ್ಳ, ರೋಶನ್ ಕುಮಾರ್ ಬನ್ನೂರು ಸಹಿತ ಹಲವರು ಉಪಸ್ಥಿತರಿದ್ದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ನೇತ್ರ ತಜ್ಞರಿಂದ ಕಣ್ಣಿನ ಪರೀಕ್ಷೆ ಮತ್ತು ಸಲಹೆಗಳು, ಶಿಬಿರದಲ್ಲಿ ತಪಾಸಣೆಗೆ ಒಳಗಾಗಿ ಆವಶ್ಯಕತೆ ಕಂಡು ಬಂದವರಿಗೆ ಉಚಿತ ಶಸ್ತ್ರಚಿಕಿತ್ಸೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರಿಂದ, ಸಕ್ಕರೆ ಕಾಯಿಲೆಗೆ ರಕ್ತ ಪರೀಕ್ಷೆ, ರಕ್ತದ ಒತ್ತಡದ(ಬಿ.ಪಿ.) ಪರೀಕ್ಷೆ, ಉಚಿತ ಕನ್ನಡಕ ವಿತರಣೆ, ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಫಲಾನುಭವಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ನಿಯೋ ಎಲೆಕ್ಟ್ರಿಕ್ ಸೈಕಲ್ ಹಸ್ತಾಂತರ..
ಗಾಲಿ ಕುರ್ಚಿಯಲ್ಲಿ ಜೀವನ ಸಾಗಿಸುತ್ತಿದ್ದ ರಾಮಣ್ಣ ಪೂಜಾರಿ ಬೆಳ್ತಂಗಡಿ ಇವರಿಗೆ ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ನಿಯೋ ಎಲೆಕ್ಟ್ರಿಕ್ ಸೈಕಲ್ ಅನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.










