ಉಚಿತ ಐಎಎಸ್, ಐಪಿಎಸ್ ಕಾರ್ಯಾಗಾರಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ದರ್ಶನ್ ಗರ್ತಿಕೆರೆ – ಪುತ್ತೂರಿಗೆ ವಿದಾಯ, ಬೆಂಗಳೂರಿಗೆ ಪ್ರಯಾಣ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಆಳವಾದ ವಿಷಯಪರ ಜ್ಞಾನ ಹೊಂದಿರುವ ತರಬೇತುದಾರರಾದ ದರ್ಶನ್ ಗರ್ತಿಕೆರೆ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸಿ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಉಚಿತ ಐಎಎಸ್, ಐಪಿಎಸ್ ಹಾಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ತುಂಬಿದವರು. ಇದೀಗ ಅವರು ತಮ್ಮ ಮುಂದಿನ ವೃತ್ತಿಜೀವನದ ಹಾದಿಯಲ್ಲಿ ಬೆಂಗಳೂರಿಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಪರಿಷತ್ತಿನ ವತಿಯಿಂದ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಗೌರವ ಸಲ್ಲಿಸಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ತಿಳಿಸಿದ್ದಾರೆ.


ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಸಿಲಬಸ್‌ನ್ನು ಬೋಧಿಸುವ ಸಾಮರ್ಥ್ಯ ಹೊಂದಿರುವ ಅವರು ದೆಹಲಿ, ಹೈದರಾಬಾದ್ ಹಾಗೂ ಮುಂಬೈಯಂತಹ ಪ್ರಮುಖ ಶಿಕ್ಷಣ ಕೇಂದ್ರಗಳಲ್ಲಿ ಉನ್ನತ ಮಟ್ಟದ ತರಬೇತಿಯನ್ನು ಪಡೆದಿದ್ದಾರೆ. ಇಂಡಿಯನ್ ಪೊಲಿಟಿ, ಎಕಾನಮಿ, ಇತಿಹಾಸ, ಭೂಗೋಳಶಾಸ್ತ್ರ, ಎಥಿಕ್ಸ್, ಪರಿಸರ ಅಧ್ಯಯನ, ಗವರ್ನನ್ಸ್, ಇಂಟರ್ನ್ಯಾಷನಲ್ ರಿಲೇಶನ್ಸ್, ಪ್ರಬಂಧ ಹಾಗೂ CSAT ಸೇರಿದಂತೆ ವಿವಿಧ ವಿಷಯಗಳಲ್ಲಿ ಅವರು ಸಮಗ್ರ ಹಾಗೂ ವ್ಯವಸ್ಥಿತ ಬೋಧನೆ ನೀಡುತ್ತಿರುವುದು ವಿಶೇಷ.
ಸ್ವತಃ 6 ಬಾರಿ ಯುಪಿಎಸ್‌ಸಿ ಹಾಗೂ 2 ಬಾರಿ ಕೆಎಎಸ್ ಪರೀಕ್ಷೆಗಳನ್ನು ಬರೆದಿರುವ ಅನುಭವದಿಂದ ಪರೀಕ್ಷೆಯ ಸ್ವರೂಪ, ಪ್ರಶ್ನೆಗಳ ಧಾಟಿ ಹಾಗೂ ವಿದ್ಯಾರ್ಥಿಗಳ ಮನೋಭಾವವನ್ನು ಆಳವಾಗಿ ಅರಿತು ಪರಿಣಾಮಕಾರಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ “ವಿವೇಕಾನಂದ ಅಧ್ಯಯನ ಕೇಂದ್ರ ’ ಯಶಸ್’ ನಲ್ಲಿ ಮೂರುವರೆ ವರ್ಷಗಳ ಕಾಲ ಸಂಪೂರ್ಣ ಸಿಲಬಸ್‌ನ್ನು ಬೋಧಿಸಿರುವುದು ಅವರ ಕಾರ್ಯನಿಷ್ಠೆ ಮತ್ತು ಶಿಸ್ತುಬದ್ಧತೆಯ ಸ್ಪಷ್ಟ ಸಾಕ್ಷಿಯಾಗಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ “ಕನ್ನಡದಲ್ಲೂ ಐಎಎಸ್ ಬರೆಯಿರಿ” ಅಭಿಯಾನದ ಅಂಗವಾಗಿ ನೂರಕ್ಕೂ ಅಧಿಕ ಉಚಿತ ಕಾರ್ಯಾಗಾರಗಳನ್ನು ಸಂಪೂರ್ಣ ಉಚಿತವಾಗಿ ನಡೆಸಿಕೊಟ್ಟು 5೦,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಸದುಪಯೋಗ ಪಡೆಯುವಂತೆ ಮಾಡಿದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ಸಲ್ಲಿಸಿದ ಈ ಮಹತ್ವದ ಸೇವೆ ಪರಿಷತ್ತಿಗೂ ಪುತ್ತೂರಿನ ವಿದ್ಯಾರ್ಥಿ ಸಮುದಾಯಕ್ಕೂ ಮರೆಯಲಾಗದ ಕೊಡುಗೆಯಾಗಿದೆ. ಈ ಎಲ್ಲಾ ಶೈಕ್ಷಣಿಕ ಸೇವೆಗಳನ್ನು ಪರಿಗಣಿಸಿ 26ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here