







ಕಾಣಿಯೂರು: 23 ದಿನದ ಹಿಂದೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ತೋಟದಿಂದ ಅಡಿಕೆ ಕಳವು ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವುದಾಗಿ ವರದಿಯಾಗಿದೆ.


ಶಾಂತಿಮೊಗರು ನಿವಾಸಿ ಸತೀಶ್ ಎಂಬವರ ತೋಟದಲ್ಲಿ ಫೆ.25ರಂದು ರಾತ್ರಿ ಈ ಕಳ್ಳತನ ನಡೆದಿತ್ತು. ಈ ದಿನ ರಾತ್ರಿ ಸತೀಶ್ ಅವರು ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಯಾರೋ ಮಾತನಾಡುವ ಶಬ್ದ ಕೇಳಿ ಟಾರ್ಚ್ ಲೈಟ್ ನಂದಿಸಿ ಹತ್ತಿರ ಹೋದಾಗ ಇಬ್ಬರು ವ್ಯಕ್ತಿಗಳು ತೋಟದಿಂದ ಅಡಿಕೆ ಕಳವು ಮಾಡಿ ತೋಟದ ಬೇಲಿಯ ಹೊರಗೆ ನಿಲ್ಲಿಸಿದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಸತೀಶ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕಡಬ ಪೊಲೀಸರು ಪ್ರಕರಣದ 1ನೇ ಆರೋಪಿ ಕಾಯಿಮಣ ನಿವಾಸಿ ಜಯಂತ ಎಂ.(28ವ.)ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ 2ನೇ ಆರೋಪಿ ಕಾಣಿಯೂರು ನಿವಾಸಿ ಲಿಂಗಪ್ಪ (36ವ.)ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಕಳವಾದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












