ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಘಟಕ ಉದ್ಘಾಟನೆ

0

ಪುತ್ತೂರು: ಪೊಲೀಸರು ಸಮಾಜದ ರಕ್ಷಣೆಗೆ ಇರುವವರು. ಪೊಲೀಸರನ್ನು ಕಂಡರೆ ಮಕ್ಕಳು ಭಯ ಪಡುವ ಅವಶ್ಯಕತೆಯಿಲ್ಲ. ಪೊಲೀಸ್ ಠಾಣೆಯಲ್ಲಿ ಸ್ನೇಹಪರ ವಾತಾವರಣ ಸೃಷ್ಟಿ ಹಾಗೂ ಮಕ್ಕಳಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸಲು ಪುತ್ತೂರು ರೋಟರಿ ಯುವದ ಪ್ರಾಯೋಜಕತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಆರಂಭಿಸಿರುವ ಮಕ್ಕಳ ವಿಶೇಷ ಘಟಕವನ್ನು ಫೆ.18ರಂದು ಸಂಜೆ ಉದ್ಘಾಟಿಸಲಾಯಿತು.


ಠಾಣೆಗೆ ಆಗಮಿಸಿದ ಮಕ್ಕಳಿಗೆ ಪೊಲೀಸರು ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು. ಬಳಿಕ ಮಕ್ಕಳ ಕೈಯಿಂದಲೇ ದೀಪ ಪ್ರಜ್ವಲಿಸಿ ಮಕ್ಕಳ ವಿಶೇಷ ಘಟಕ ಮತ್ತು ವರ್ಣಚಿತ್ರದ ಕೊಠಡಿ ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪೊಲೀಸರಿಗೆ ಐಎಎಸ್, ಐಪಿಎಸ್ ಹಾಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ದರ್ಶನ್ ಗರ್ತಿಕೆರೆ ಅವರು ಮಾಹಿತಿ ನೀಡಿದರು.


ರೋಟರಿಯಿಂದ ಸಮಾಜಮುಖಿ ಕಾರ್ಯಕ್ರಮ:
ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಮಾತನಾಡಿ, ಇದೊಂದು ರೋಟರಿ ಯುವ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮ. ಇದು ಕೇವಲ ಪುತ್ತೂರಿಗೆ ಮಾತ್ರವಲ್ಲ ಜಿಲ್ಲೆಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.


ರೋಟರಿ ಸಂಸ್ಥೆಗೆ ಕೃತಜ್ಞತೆ:
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ.ಚಕ್ರಪಾಣಿ ಅವರು ಮಾತನಾಡಿ, ಇಲಾಖೆಯೊಂದಿಗೆ ಮಕ್ಕಳ ಆಕರ್ಷಣೆ ಇಂತಹ ಘಟಕದಿಂದ ಆಗಲಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ರೋಟರಿಗೆ ಕೃತಜ್ಞತೆ ಸಲ್ಲಿಸಿದರು.


ಪೊಲೀಸರ ಮೇಲೆ ಮಕ್ಕಳಿಗೆ ಗೌರವ ಹೆಚ್ಚಲಿದೆ:
ರೋಟರಿ ಯುವ ನಿಯೋಜಿತ ಅಧ್ಯಕ್ಷೆ ವಚನಾ ಜಯರಾಮ್ ಅವರು ಮಾತನಾಡಿ, ರೋಟರಿ ಯುವ ವಿಭಿನ್ನ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಮಕ್ಕಳಿಗೆ ಪೊಲೀಸರ ಮೇಲೆ ಗೌರವ, ಸ್ನೇಹ ಭಾವನೆ, ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.


ಜೀವನದಲ್ಲಿ ಉತ್ಸಾಹವಿರಲಿ:
ದರ್ಶನ್ ಗರ್ತಿಕೆರೆ ಅವರು ಮಾತನಾಡಿ, ಐಎಎಸ್, ಐಪಿಎಸ್ ಆಗಬೇಕಾದರೆ ಮಕ್ಕಳು ಎಳೆಯ ವಯಸ್ಸಿನಲ್ಲೇ ಶಾಲೆಯಲ್ಲಿ ಏನು ಕಲಿಸುತ್ತಾರೋ ಅದನ್ನೇ ಚೆನ್ನಾಗಿ ಓದಿ. ಇದರ ಜೊತೆಗೆ ಪತ್ರಿಕೆ ಓದಿ ದೇಶದ ಆಗುಹೋಗುಗಳ ವಿಚಾರ ಅರ್ಥ ಮಾಡಿಕೊಳ್ಳಿ. ಸೋಮಾರಿತನ ಬಿಟ್ಟು ಜೀವನದಲ್ಲಿ ಉತ್ಸಾಹದಿಂದ ಇರಬೇಕೆಂದು ಹೇಳಿದರು.


ಸನ್ಮಾನ:
ಮಕ್ಕಳ ವಿಶೇಷ ಕೊಠಡಿಯಲ್ಲಿ ಮಕ್ಕಳ ಆಕರ್ಷಣೆಯಾಗಿ ಗೋಡೆ ಬರಹದೊಂದಿಗೆ ಚಿತ್ರ ಬಿಡಿಸಿದ ಕಲಾವಿದ ದಿನೇಶ್, ಪುತ್ತೂರು ಸಂಚಾರ ಪೊಲೀಸ್ ಠಾಣೆ ಎಸ್.ಐ ಚಕ್ರಪಾಣಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ದರ್ಶನ್ ಗರ್ತಿಕೆರೆ ಅವರನ್ನು ರೋಟರಿ ಯುವದಿಂದ ಸನ್ಮಾನಿಸಲಾಯಿತು.


ರಸ್ತೆ ಸುರಕ್ಷಾ ಮಾಹಿತಿ ಕರಪತ್ರ ಬಿಡುಗಡೆ:
ರೋಟರಿ ಯುವದ ರೋಡ್ ಸೇಫ್ಟಿ ಚಯರ್‌ಮ್ಯಾನ್ ಡಾ.ಹೃರ್ಷಕುಮಾರ್ ರೈ ಅವರು ಪ್ರಾಯೋಜಿಸಿದ ರಸ್ತೆ ಸುರಕ್ಷಾ ಮಾಹಿತಿ ಕರಪತ್ರವನ್ನು ಅತಿಥಿಗಳು ಬಿಡುಡೆಗೊಳಿಸಿದರು. ಬಳಿಕ ಮಕ್ಕಳಿಗೆ ವಿತರಿಸಿದರು.

ಆಟದೊಂದಿಗೆ ಕಾನೂನು ಪಾಠ
ಮಕ್ಕಳು ಠಾಣೆಗೆ ಬಂದರೆ ಮತ್ತು ಕೆಲವು ಸಂದರ್ಭಗಳಲ್ಲಿ ಸೂಕ್ಷ್ಮ ಪ್ರಕರಣಗಳ ಭಾಗವಾಗಿರುವ ಮಕ್ಕಳಿಗೆ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಎನಿಸುವ ವ್ಯವಸ್ಥೆ ಕಲ್ಪಿಸಲು ನೂತನ ಕೊಠಡಿಗಳಲ್ಲಿ ಪ್ರಾಣಿಗಳ ಚಿತ್ರ, ಸಂಚಾರ ಸುರಕ್ಷತೆಯ ಕುರಿತು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಗಳು. ಮಕ್ಕಳನ್ನು ರಸ್ತೆಯಿಂದ ದಾಟಿಸುವ ಚಿತ್ರಗಳು ಮಕ್ಕಳಿಗೆ ಪೊಲೀಸರ ಮೇಲೆ ಆತ್ಮವಿಶ್ವಾಸ ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನೂ ಹಲವು ವಿಷಯಗಳ ಕುರಿತು ತಿಳಿಸಿ ಹೇಳುವ ಮೂಲಕ ಸುರಕ್ಷಿತ ಹಾಗೂ ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಇದೊಂದು ಉತ್ತಮ ಪ್ರಯತ್ನವಾಗಿದೆ. ಠಾಣೆಗೆ ಬಂದ ಮಕ್ಕಳು ಚಿತ್ರಗಳನ್ನು ಕಂಡು ಖುಷಿಪಟ್ಟರು.


ರೋಟರಿ ಯುವ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ರೋಟರಿ ಪುತ್ತೂರು ಯುವ ಜೋನಲ್ ಲೆಪ್ಟಿನೆಂಟ್ ಭರತ್ ಪೈ, ಧನ್ವಂತರಿ ಕ್ಲೀನಕಲ್ ಲ್ಯಾಬೋರೆಟರಿಯ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ಅತಿಥಿಗಳನ್ನು ಗೌರವಿಸಿದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್‌ರಾಜ್ ಸ್ವಾಗತಿಸಿ, ಕಾರ್ಯದರ್ಶಿ ಅಭಿಷ್ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಗೃಹ ಪ್ರಾರ್ಥಿಸಿದರು. ರೋಟರಿ ಕ್ಲಬ್ ಯುವ ಪೂರ್ವಾಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here