‘ಸಂಪುಟ ಪುನರ್ರಚಿಸಿ ನಮಗೂ ಅವಕಾಶ ನೀಡಿ’ -ಅಶೋಕ್ ಕುಮಾರ್ ರೈ ಸಹಿತ ಪ್ರಥಮ ಬಾರಿ ಆಯ್ಕೆಯಾದ 31 ಶಾಸಕರಿಂದ ಹೈಕಮಾಂಡ್‌ಗೆ ಪತ್ರ- ಈ ಕುರಿತು ʼಸುದ್ದಿʼ ಗೆ ಏನಂದ್ರು..?

0

ಪುತ್ತೂರು:ರಾಜ್ಯದಲ್ಲಿ ಕೂಡಲೇ ಸಚಿವ ಸಂಪುಟ ಪುನರ್ರಚನೆ ಮಾಡಿ ನಮ್ಮಲ್ಲಿಯೂ ಕೆಲವರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಪ್ರಥಮ ಬಾರಿಗೆ ಚುನಾಯಿತರಾದ ಆಡಳಿತಾರೂಢ ಕಾಂಗ್ರೆಸ್‌ನ 31 ಶಾಸಕರು ಸಹಿ ಮಾಡಿ ಪಕ್ಷದ ಹೈಕಮಾಂಡ್‌ಗೆ ಪತ್ರವೊಂದನ್ನು ಬರೆದಿದ್ದಾರೆ.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರೂ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೇ ಶಾಸಕರ ಈ ಪತ್ರ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರು ಪತ್ರ ಬರೆದಿದ್ದಾರೆ.ವಿಧಾನಸಭೆಯ ವಿಶೇಷ ಅಧಿವೇಶನ ಮುಕ್ತಾಯದ ಸಂದರ್ಭದಲ್ಲೇ ಈ ಪತ್ರ ಬರೆಯಲಾಗಿದ್ದು ಇದೀಗ ಅದು ಬಹಿರಂಗಗೊಂಡಿದೆ.ಆದರೆ ಹೈಕಮಾಂಡ್‌ನಿಂದ ಈ ಕುರಿತು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.


ಪತ್ರದಲ್ಲಿ ಏನಿದೆ?:
‘ಕಾಂಗ್ರೆಸ್‌ನಲ್ಲಿ 38 ಶಾಸಕರು ಹೊಸದಾಗಿ ಗೆದ್ದಿದ್ದೇವೆ.ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಮುಖ್ಯಮಂತ್ರಿ ಆಗಿದ್ದಾರೆ.ನಮ್ಮಲ್ಲಿ ಮೊದಲ ಬಾರಿ ಗೆದ್ದ ಶಾಸಕರ ಪೈಕಿ ಕನಿಷ್ಠ ಐದು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.ಮೊದಲ ಬಾರಿಗೆ ಶಾಸಕರಾದವರಿಗೆ ಸಂಪುಟದಲ್ಲಿ ಅವಕಾಶ ನೀಡುವುದರಿಂದ ಯುವ ಮುಖಗಳಿಗೆ ಅವಕಾಶ ಸಿಕ್ಕಂತಾಗುತ್ತದೆ.ನಾವು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ.2028ರಲ್ಲಿಯೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕಾಗಿದೆ.ಹೀಗಾಗಿ, ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ನೀಡಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.


ಅಶೋಕ್ ಕುಮಾರ್ ರೈ ಅವರಲ್ಲದೆ, ಶಿವಗಂಗಾ ಬಸವರಾಜ್, ಪ್ರದೀಪ್‌ಈಶ್ವರ್, ವಿಶ್ವಾಸ್ ವೈದ್ಯ, ಇಕ್ಬಾಲ್ ಹುಸೇನ್,ಎನ್.ಟಿ.ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ್, ರವಿ ಕುಮಾರ್ ಗಣಿಗ, ಬಿ.ಬಿ.ಚಿಮ್ಮನಕಟ್ಟಿ, ಎ.ಎಸ್.ಪೊನ್ನಣ್ಣ, ಬಾಬಾ ಸಾಹೇಬ್ ಪಾಟೀಲ್, ನಾರಾ ಭರತ್ ರೆಡ್ಡಿ, ಎ.ಸಿ.ಶ್ರೀನಿವಾಸ್, ಮಹೇಂದ್ರ ತಮ್ಮಣ್ಣನವರ್, ಮಂಥರ್ ಗೌಡ, ದೇವೇಂದ್ರಪ್ಪ, ಎನ್.ಶ್ರೀನಿವಾಸ್, ಆಸಿಫ್ ಸೇಠ್,ರಾಜಾ ವೇಣುಗೋಪಾಲ್ ನಾಯಕ್, ಉದಯ್ ಕುಮಾರ್ ಕಡಲೂರು, ಎಚ್.ವಿ.ವೆಂಕಟೇಶ್, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ್, ಕೆ.ಎಸ್.ಬಸವಂತಪ್ಪ, ಡಿ.ರವಿಶಂಕರ್, ಎಚ್.ಎಂ.ಗಣೇಶ್ ಪ್ರಸಾದ್, ಅಶೋಕ್ ಮನಗೂಳಿ, ನಯನಾ ಮೋಟಮ್ಮ, ಚನ್ನಾರೆಡ್ಡಿ ಪಾಟೀಲ್ ಸಹಿ ಹಾಕಿದ ಪ್ರಮುಖ ಶಾಸಕರು.‌


ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಿಚ್ಚು ಕಾವೇರಿದೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ತಂತ್ರ, ರಣತಂತ್ರ ಜೋರಾಗಿಯೇ ನಡೆಯುತ್ತಿವೆ.ಇದರ ಮಧ್ಯೆ ದಲಿತ ಸಿಎಂ ಕೂಗು ಕೂಡಾ ಕೇಳಿಬಂದಿದ್ದು,ಕೆಲದಿನಗಳ ಹಿಂದೆಯಷ್ಟೆ ದಲಿತ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ‘ಗೊಂದಲ ಪರಿಹರಿಸಿ ಮುಂದಿನ ನಾಯಕತ್ವ ನಿರ್ಧರಿಸಿ’ ಎಂದು ಮನವಿ ಮಾಡಿದ್ದರು.ಈ ಅಧಿಕಾರ ಹಸ್ತಾಂತರದ ರಾಜಕೀಯ ಚಟುವಟಿಕೆಗಳ ನಡುವೆಯೇ ಇದೀಗ, ಸಂಪುಟ ಪುನರ್ರಚನೆ ಮಾಡಿ ನಮಗೂ ಅವಕಾಶ ನೀಡಬೇಕು ಎಂದು, ಮೊದಲ ಬಾರಿಗೆ ಗೆದ್ದಿರುವ ಕಾಂಗ್ರೆಸ್‌ನ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದಾರೆ.ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಕರ್ನಾಟಕ ಪ್ರವಾಸದಲ್ಲಿರುವಾಗಲೇ ಈ ಪತ್ರ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕನಿಷ್ಟ ಐವರಿಗೆ ಸಚಿವ ಸ್ಥಾನ ನೀಡಬೇಕು
ಕಾಂಗ್ರೆಸ್‌ನಿಂದ ಮೊದಲ ಬಾರಿ 38 ಶಾಸಕರು ಆಯ್ಕೆಯಾಗಿದ್ದಾರೆ.ಈ ಮೂಲಕ ಯುವಕರ ಅವಶ್ಯಕತೆ ಇದೆ ಎಂದು ಜನ ಹೇಳಿದ್ದಾರೆ.ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಿ ಜನಾದೇಶಕ್ಕೆ ಮನ್ನಣೆ ನೀಡಿ.ಯುವಕರಿಗೆ ಅವಕಾಶ ನೀಡುವುದು ಪ್ರಸ್ತುತ ಬೇಡಿಕೆಯಾಗಿದೆ.ಮೊದಲ ಬಾರಿ ಗೆದ್ದಿರುವ ಕನಿಷ್ಟ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.ಬೇರೆ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರಾದವರು ಸಿಎಂ ಆಗಿದ್ದಾರೆ.ಹೊಸಬರಿಗೆ ಅವಕಾಶ ನೀಡಿದರೆ ಮುಂದಿನ ಚುನಾವಣೆ ಗೆಲ್ಲಲು ಸಹಕಾರಿಯಾಗಲಿದೆ.ಪಕ್ಷ ನಿಷ್ಠೆ, ಸೈದ್ದಾಂತಿಕವಾಗಿ ಗಟ್ಟಿಯಾಗಿರುವವರಿಗೆ ಅವಕಾಶ ನೀಡಿ ಎಂದು 31 ಶಾಸಕರು ಸಹಿ ಮಾಡಿ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.


ಮಂತ್ರಿ ಸ್ಥಾನದ ಅಪೇಕ್ಷೆಯಿಲ್ಲ
ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯನನಗೆ ಮಂತ್ರಿಸ್ಥಾನದ ಯಾವುದೇ ಅಪೇಕ್ಷೆ ಇಲ್ಲ.ನನ್ನ ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ. ಪ್ರಥಮ ಬಾರಿ ಶಾಸಕರಾದವರಿಗೂ ಸಚಿವ ಸ್ಥಾನ ನೀಡುವುದು,ಬೋರ್ಡ್‌ಗಳಲ್ಲಿ ಚೇರ್‌ಮ್ಯಾನ್‌ಶಿಪ್ ನೀಡುವುದು ಸೇರಿದಂತೆ ಕೆಲವು ಬೇಡಿಕೆಗಳ ಬಗ್ಗೆ ಪ್ರಥಮ ಬಾರಿ ಆಯ್ಕೆಯಾದ ಸುಮಾರು 40 ಮಂದಿ ಶಾಸಕರು ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಸ್ನೇಹಿತ ಶಾಸಕರು ಹೇಳಿದ್ದರಿಂದ ಆ ಪತ್ರಕ್ಕೆ ನಾನೂ ಸಹಿ ಹಾಕಿದ್ದೇನೆ ಹೊರತು ನನಗೆ ಸಚಿವ ಸ್ಥಾನ ನೀಡಬೇಕೆಂಬ ಯಾವುದೇ ಬೇಡಿಕೆ ಇಲ್ಲ.ಸಚಿವ ಸ್ಥಾನದ ಅಪೇಕ್ಷೆಯೂ ನನಗಿಲ್ಲ.ನನ್ನದೇನಿದ್ದರೂ ಕ್ಷೇತ್ರದ ಅಭಿವೃದ್ಧಿಯ ಅಪೇಕ್ಷೆ.ನನ್ನ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಅನುದಾನ ಬರಬೇಕು,ಮೆಡಿಕಲ್ ಕಾಲೇಜು ಬರಬೇಕು.ಕ್ಷೇತ್ರದ ಅಭಿವೃದ್ಧಿ ಕೆಲಸಗಳಾಗಬೇಕು ಎನ್ನುವುದೇ ನನ್ನ ಅಪೇಕ್ಷೆ ಎಂದು ಶಾಸಕ ಅಶೋಕ್ ಕುಮಾರ್ ರೈ ‘ಸುದ್ದಿ’ಗೆ ತಿಳಿಸಿದ್ದಾರೆ.

ಅಶೋಕ್ ಕುಮಾರ್ ರೈ ಅವರಿಗೆ ಒಲಿಯುವುದೇ ಅದೃಷ್ಟ?
ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವವರಲ್ಲಿ ಕನಿಷ್ಟ 5 ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂದು 31 ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರ ಬಹಿರಂಗವಾದ ಬೆನ್ನಲ್ಲೇ,ಐವರ ಪೈಕಿ ಒಬ್ಬರಾಗಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅದೃಷ್ಟ ಒಲಿಯುವುದೇ ಎಂದು ಅವರ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ. ಶಾಸಕರು ಅಭಿವೃದ್ಧಿ ಕೆಲಸಗಳ ಮೂಲಕ ಇಡೀ ರಾಜ್ಯದಲ್ಲಿಯೇ ಗುರುತಿಸಿಕೊಂಡಿದ್ದಾರೆ.ಅವರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರೇ ಕೊಂಡಾಡಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.ಕೆಲ ದಿನಗಳ ಹಿಂದೆ ಪುತ್ತೂರು ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಆಗಮಿಸಿದ್ದ ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳೂ ಆಗಿರುವ ಎಸ್.ಅಬ್ದುಲ್ ನಝೀರ್ ಅವರು ಕೂಡಾ ಶಾಸಕರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.ರಾಜಕೀಯವಾಗಿ ಸಿಎಂ,ಡಿಸಿಎಂ ಇಬ್ಬರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಅಶೋಕ್ ಕುಮಾರ್ ರೈಯವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ದೊರೆಯುವಂತಾಗಲಿ ಎಂದು ಅವರ ಅಭಿಮಾನಿ,ಹಿತೈಷಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here