






ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಠ ಪಂಗಡಗಳ ಕಾಲನಿ ಅಭಿವೃದ್ದಿಗೆ ಸರಕಾರ ಒಂದು ಕೋಟಿ ರೂ ಅನುದಾನ ಬಿಡುಗಡೆಮಾಡಿದೆ. ಕಾಲನಿ ಅಭಿವೃದ್ದಿಗೆ ಸರಕಾರ ವಿಶೇಷ ಅನುದಾನ ನೀಡಬೇಕೆಂದು ಕೋರಿ ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಈ ಮನವಿಗೆ ಸರಕಾರ ಸ್ಪಂದನೆ ನೀಡಿದೆ.


ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಪ.ಪಂಗಡ ಕಾಲನಿಗಳಿದ್ದು, ಬಹುತೇಕ ಕಾಲನಿಗಳು ಅಭಿವೃದ್ದಿ ಶೂನ್ಯವಾಗಿದೆ. ಕಾಲನಿಗೆ ತೆರಳುವ ರಸ್ತೆಯು ಸಮರ್ಪಕವಾಗಿಲ್ಲ ಮತ್ತು ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಚುನಾವಣಾ ಸಮಯದಲ್ಲಿ ಕಾಲನಿಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕರು ಕಾಲನಿ ನಿವಾಸಿಗಳಿಗೆ ಕಾಲನಿ ಅಭಿವೃದ್ದಿ ಮಾಡುವ ಭರವಸೆಯನ್ನು ನೀಡಿದ್ದರು. ಈ ಹಿಂದೆಯೂ ಕಾಲನಿಗಳ ಅಭಿವೃದ್ದಿಗೆ ಶಾಸಕರು ಅನುದಾನವನ್ನು ಒದಗಿಸಿದ್ದರು. ಆದರೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕೆಂದು ಪರಿಶಿಷ್ಠ ಪಂಗಡ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು.



ರಸ್ತೆಗಳ ಅಭಿವೃದ್ದಿ
ಒಂದು ಕೋಟಿ ಅನುದಾನದಿಂದ ಕಾಲನಿಗಳ ರಸ್ತೆಯನ್ನು ಅಭಿವೃದ್ದಿ ಮಾಡಲಾಗುತ್ತದೆ. ಹೆಚ್ಚಿನ ಕಾಲನಿಗಳು ಎತ್ತರ ಪ್ರದೇಶದಿಂದ ಕೂಡಿರುವ ಕಾರಣ ಮಳೆಗಾಲದಲ್ಲಿ ಸಂಚಾರಕ್ಕೆ ಕಷ್ಟಕರವಾಗುತ್ತಿತ್ತು. ಕಾಲನಿಗಳ ಸಮಸ್ಯೆಯ ಬಗ್ಗೆ ನಿಯೋಗವೊಂದು ಶಾಸಕರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಇದೀಗ ಒಂದು ಕೋಟಿ ಹೆಚ್ಚುವರಿ ಅನುದಾನದಿಂದ ಕಾಲನಿಗಳ ಬಹುತೇಕ ರಸ್ತೆಗಳು ಅಭಿವೃದ್ದಿ ಹೊಂದಲಿದೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಹಲವಾರು ಕಾಲನಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದೆ. ಈ ವೇಳೆ ಅಲ್ಲಿನ ನಿವಾಸಿಗಳು ತಮ್ಮ ಮೂಲಭೂತ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದರು. ಅದರಲ್ಲೂ ವಿಶೇಷವಾಗಿ ಕೆಲವೊಂದು ಕಾಲನಿಗಳಿಗೆ ರಸ್ತೆಯ ಸಂಪರ್ಕವೇ ಇಲ್ಲ ಇದನ್ನು ಮನಗಂಡು ನಾನು ಎರಡೂವರೆ ವರ್ಷದಲ್ಲಿ ಹಲವಾರು ಕಾಲನಿಗಳ ಅಭಿವೃದ್ದಿಗೆ ಅನುದಾನವನ್ನು ನೀಡಿದ್ದೆ ಮತ್ತೆ ಹೆಚ್ಚುವರಿಯಾಗಿ ಒಂದು ಕೋಟಿ ಅನುದಾನವನ್ನು ತಂದಿದ್ದೇನೆ. ಕ್ಷೇತ್ರದ ಅಭಿವೃದ್ದಿಯೇ ಪ್ರಮುಖ ಧ್ಯೇಯವಾಗಿದೆ. ಇದುವರೆಗೂ ಅಭಿವೃದ್ದಿ ಕಾಣದ ರಸ್ತೆಗಳು ಮುಂದೆ ಸಂಚಾರ ಯೋಗ್ಯವಾಗಲಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಮುಂದೆಯೂ ಅಭಿವೃದ್ದಿ ಕೆಲಸಗಳು ನಿರಂತರ ನಡೆಯಲಿದೆ.
ಅಶೋಕ್ ರೈ, ಶಾಸಕರು ಪುತ್ತೂರು










