






ಮುಕ್ತ ಚರ್ಚೆಗೆ ಸಿದ್ದ; ಮಹಿಳಾ ಕಾಂಗ್ರೆಸ್ನಿಂದ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಸವಾಲು


ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಮಹಿಳೆಯರಿಗೆ ಕೊಡುವಷ್ಟು ಗೌರವ ಬೇರೆ ಯಾರಿಗೂ ಕೊಡುವುದಿಲ್ಲ. ಪ್ರತಿ ಸೋಮವಾರ ಅವರ ಕಚೇರಿಯಲ್ಲಿ ಎಷ್ಟೇ ಜನ ಇದ್ದರೂ ಮೊದಲು ಮಹಿಳೆಯರಿಗೆ ಅವಕಾಶ ನೀಡುತ್ತಾರೆ. ಸೂರಿಲ್ಲದ ಮಹಿಳೆಯರಿಗೆ ಸೂರು ಒದಗಿಸಿದ್ದಾರೆ. ನಮ್ಮ ಸಮಸ್ಯೆ ಪುತ್ತೂರು ಶಾಸಕರಿಂದಲೇ ಬಗೆ ಹರಿಯುತ್ತದೆ ಎಂದು ದ.ಕ.ಜಿಲ್ಲೆಯ ಆಶಾ ಕಾರ್ಯಕರ್ತೆಯರ ದಂಡೇ ಶಾಸಕರ ಕಚೇರಿಗೆ ಆಗಮಿಸಿದೆ. ಬಿಜೆಪಿಯವರು ಪ್ರತಿಭಟನೆ ಮಾಡುವ ಮೊದಲು ಇದನ್ನೆಲ್ಲ ಗಮನಿಸಬೇಕು. ಬೇಕಾದರೆ ನೀವು ವೇದಿಕೆ ನಿರ್ಮಿಸಿ, ನಾವು ಮುಕ್ತವಾಗಿ ಚರ್ಚೆಗೆ ಸಿದ್ದ ಎಂದು ಮಹಿಳಾ ಕಾಂಗ್ರೆಸ್ ಸವಾಲು ಹಾಕಿದೆ.



ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ವಲಯ ಉಸ್ತುವಾರಿ, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರು ಅಭಿವೃದ್ದಿಯ ಹರಿಕಾರ. ಕಳೆದ 1 ಸಾವಿರ ದಿನಗಳಲ್ಲಿ ಪುತ್ತೂರಿಗೆ 2,2೦೦ ಕೋಟಿ ರೂ. ಅನುದಾನ ತರುವ ಮೂಲಕ ಪುತ್ತೂರಿನ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರೆ. ಬಿಜೆಪಿ ಮಹಿಳಾ ಮೋರ್ಚಾದವರು ಹೊರಗಿನಿಂದ ಜನ ಕರೆಸಿ ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಪ್ರಾಂಶುಪಾಲರು ಜನಪ್ರತಿನಿಧಿಯ ಬಗ್ಗೆ ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅಂತಹ ಪ್ರಾಂಶಪಾಲರು ಮಕ್ಕಳಿಗೆ ಎಷ್ಟು ಸಂಸ್ಕಾರ ಕೊಡಬಲ್ಲರು ಎಂದು ಪ್ರಶ್ನಿಸಿದರು. ಮಕ್ಕಳು ಪ್ರತಿಭಟನೆ ಆರಂಭಿಸಿದ 15 ನಿಮಿಷದಲ್ಲೇ ಬಿಜೆಪಿಯವರು ಅಲ್ಲಿಗೆ ಬಂದಿರುವುದನ್ನು ನೋಡಿದಾಗ ಬಿಜೆಪಿಯ ಕುಮ್ಮಕ್ಕಿನಿಂದಲೇ ಪ್ರತಿಭಟನೆ ಮಾಡಿರುವುದು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. 12 ವರ್ಷದಿಂದ ಮಕ್ಕಳು ಜೈಲು ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿಯವರಿಗೆ ಅವರ ಪಕ್ಷ ಅಧಿಕಾರದಲ್ಲಿ ಇರುವಾಗಲೇ ಬೇರೆ ಕಡೆಗೆ ಕಾಲೇಜು ಸ್ಥಳಾಂತರಿಸಬಹುದಿತ್ತು. ಡಯಾಲಿಸಿಸ್ ಕೆಲಸದ ಹಿನ್ನೆಲೆಯಲ್ಲಿ ಧೂಳು ತುಂಬಿರಬಹುದು. ಈ ಸಮಸ್ಯೆಯನ್ನು ಪ್ರಾಂಶುಪಾಲರು ಶಾಸಕರ ಗಮನಕ್ಕೆ ತರಬೇಕಾಗಿತ್ತು. ಅದು ಬಿಟ್ಟು ಏಕಾಏಕಿ ಮಕ್ಕಳಿಗೆ ಪ್ರತಿಭಟನೆಗೆ ಅವಕಾಶ ನೀಡಿರುವುದು ತಪ್ಪು. ಅದಕ್ಕೆ ಅವರ ಅಮಾನತು ಆಗಿದೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಚಪ್ಪಾಳೆ ಹೊಡೆದಿರುವುದೇ ಜಾಸ್ತಿ;
ಬಿಜೆಪಿ ಮಹಿಳಾ ಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಧಿಕ್ಕಾರ ಕೂಗಿರುವುದಕ್ಕಿಂತ ಚಪ್ಪಾಳೆ ಹೊಡೆದಿರುವುದೇ ಜಾಸ್ತಿ. ಬೇರೆ ಕಡೆಯಿಂದ ಬಂದವರು ಧಿಕ್ಕಾರ ಕೂಗಿದ್ದಾರೆಯೇ ಹೊರತು ಇಲ್ಲಿನವರು ಧಿಕ್ಕಾರ ಕೂಗಿಲ್ಲ. ಸರಕಾರದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಸೌಲಭ್ಯ ಪಡೆದವರೇ ಅಲ್ಲಿ ಇದ್ದದ್ದು. ಅಷ್ಟು ಸ್ವಾಭಿಮಾನ ಇದ್ದವರು ಯಾಕೆ ಗ್ಯಾರಂಟಿ ಯೋಜನೆ ಪಡೆದುಕೊಂಡದ್ದು. ಗ್ಯಾರಂಟಿ ಯೋಜನೆ ಪಡೆದವರಲ್ಲಿ ಬಿಜೆಪಿಯವರೇ ಜಾಸ್ತಿ ಎಂದರು. ಇಲ್ಲಿಯವರೇ ಮುಖ್ಯಮಂತ್ರಿ ಆಗಿದ್ದರೂ ಪುತ್ತೂರಿಗೆ ಮೆಡಿಕಲ್ ಕಾಲೇಜು ತರಲು ಆಗಿರಲಿಲ್ಲ. ನಮ್ಮ ಶಾಸಕರು ಅದನ್ನು ಮಾಡಿದ್ದಾರೆ. ಕುಡಿಯುವ ನೀರಿನ ಯೋಜನೆ, ಕ್ರೀಡಾಂಗಣ, ರಸ್ತೆ, 80 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ, ದೇವಸ್ಥಾನದ ಜಾಗ ಮರುಸ್ವಾಧಿನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಂದಾಗಿ ಅವರು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದ್ದಾರೆ ಎಂದರು.
ನಾವೇನು ಕೈ ಕಟ್ಟಿ ಕೂತಿಲ್ಲ:
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ, ದೂರದ ಊರಿನಿಂದ ಬಂದು ಪುತ್ತೂರಿನ ಶಾಸಕರ ಬಗ್ಗೆ ಮಾತನಾಡುವಾಗ ಆಲೋಚನೆಯಿಂದ ಮಾತನಾಡಬೇಕು. ಎಲ್ಲಿಂದಲೋ ಬಂದು ಪ್ರತಿಭಟನೆ ಮಾಡುವವರು ಪುತ್ತೂರಿನ ಶಾಸಕರ ಕೆಲಸದ ಬಗ್ಗೆ ತಿಳಿದು ಮಾತನಾಡಬೇಕು. ದ.ಕ.ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಬಲವಾಗಿದೆ. ಸರಕಾರ ಬೇಕಾದಷ್ಟು ಯೋಜನೆಯನ್ನು ನೀಡಿದೆ. ನಾವೇನು ಕೈಕಟ್ಟಿಕೂತಿಲ್ಲ. ನಮಗೆ ಅಭಿವೃದ್ಧಿಯೇ ಮುಖ್ಯ. ಪುತ್ತೂರಿನ ಶಾಸಕರ ಅಭಿವೃದ್ಧಿ ಕೆಲಸದ ಬಗ್ಗೆ ವೇದಿಕೆಯಲ್ಲಿ ಚರ್ಚಿಸೋಣ. ಅದಕ್ಕಾಗಿ ವೇದಿಕೆ ಸಿದ್ಧಪಡಿಸಿ. ನಾವು ಅಂಕಿ ಅಂಶಗಳನ್ನು ಮುಂದಿಡುತ್ತೇವೆ. ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆದು ಮುಕ್ತವಾಗಿ ಚರ್ಚಿಸೋಣ ಎಂದರು.
ಮಠಂದೂರು ತೆಂಗಿನಕಾಯಿ ಮಾತ್ರ ಒಡೆದಿರುವುದು:
ಅಧಿಕಾರಿ ತಪ್ಪು ಮಾಡಿದಾಗ ತಿದ್ದುವುದು ಶಾಸಕರ ಕರ್ತವ್ಯ. ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ನಾವು ಸಹಿಸುವುದಿಲ್ಲ. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಎಲ್ಲಾ ಕಡೆ ತೆಂಗಿನಕಾಯಿ ಒಡೆದದ್ದು ಮಾತ್ರ. ನಮ್ಮ ಶಾಸಕರು ತೆಂಗಿನಕಾಯಿ ಒಡೆದಾಗ ಕೆಲಸವೂ ಆರಂಭಗೊಂಡಿದೆ. ಜಿಲ್ಲೆಯ ಆಶಾ ಕಾರ್ಯಕರ್ತೆಯರ ದಂಡೇ ಪುತ್ತೂರಿಗೆ ಬಂದಿದೆ. ಎಲ್ಲೂ ನ್ಯಾಯ ಸಿಗದಾಗ ಪುತ್ತೂರಿನ ಶಾಸಕರಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಅವರು ಬಂದಿದ್ದಾರೆ ಎಂದು ಉಷಾ ಅಂಚನ್ ಹೇಳಿದರು.
ಶಾಸಕರು ಅಮಾನತು ಮಾಡಿಲ್ಲ, ಇಲಾಖೆಯಿಂದ ಅಮಾನತು ಆಗಿರುವುದು;
ಪುತ್ತೂರು ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಅವರು ಮಾತನಾಡಿ, ಎರಡೂವರೇ ವರ್ಷದಿಂದ ಬಿಜೆಪಿಯವರು ಟಾರ್ಚ್ ಹಾಕಿ ಶಾಸಕರ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಪ್ರತಿಭಟನೆ ಯಾರ ವಿರುದ್ಧ ಎಂದು ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳು ಪ್ರತಿಭಟನೆಗೆ ಯಾವುದೇ ಅನುಮತಿ ಪಡೆಯಲಿಲ್ಲ. ಶಾಸಕರು ಅವರಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. ಪ್ರತಿಭಟನೆಗೆ ಅನುಮತಿ ಇಲ್ಲದಿರುವುದು, ರಸ್ತೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವುದು ಸೇರಿದಂತೆ ವಿವಿಧ ಇಲಾಖೆಯ ವರದಿಯ ಆಧಾರದಲ್ಲಿ ಮೇಲಾಽಕಾರಿಗಳು ಪ್ರಾಂಶುಪಾಲರನ್ನು ಅಮಾನತು ಮಾಡಿದ್ದಾರೆಯೇ ಹೊರತು ಶಾಸಕರು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಮಹಿಳೆಯರಿಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು, ಬಿಜೆಪಿ ಮುಖಂಡನ ಮಗ ಯುವತಿಯೊಂದಿಗೆ ಪ್ರೇಮದ ನಾಟಕವಾಡಿ ಮಗು ಕರುಣಿಸಿದಾಗ ಎಲ್ಲಿ ಹೋಗಿದ್ದರು. ಆಗ ಮಹಿಳೆಗೆ ಯಾಕೆ ? ನ್ಯಾಯ ಕೊಡಲಾಗಿಲ್ಲ. ಶಾಸಕರು ತಪ್ಪು ಮಾಡಿದವರನ್ನು ತಿದ್ದುವಾಗ ಅನ್ಯಾಯ ಹೇಗಾಗುತ್ತದೆ. ಶಾಸಕರು ಮಹಿಳೆಯರಿಗೆ ಕೊಡುವಷ್ಟು ಗೌರವ ಬೇರೆ ಯಾರಿಗೂ ಕೊಡುವುದಿಲ್ಲ. ಕಚೇರಿಯಲ್ಲೂ ಮಹಿಳೆಯರಿಗೆ ಪ್ರಥಮ ಆದ್ಯತೆ ಕೊಡುತ್ತಾರೆ ಎಂದರು.
ಅವರದ್ದು ಎಲ್ಲರಿಗೂ ಗೊತ್ತಿದೆ
ಸಂಜೀವ ಮಠಂದೂರು ಅವರನ್ನು ನೋಡಿ ಕಲಿಯ ಬೇಕಾಗಿರುವುದು ಏನೂ ಇಲ್ಲ. ಅವರಲ್ಲಿ ನೋಡಿ ಕಲಿಯುವುದು ಬೇಡ. ಯಾಕೆಂದರೆ ಅವರದ್ದು ಎಲ್ಲರಿಗೂ ಗೊತ್ತಿದೆ. ಅವರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗಿಂತ ಜಾಸ್ತಿ ಅವರಿಗೆ ತಿಳುವಳಿಕೆ ಇದೆ. ಅಭಿವೃದ್ಧಿಯ ಸರದಾರ ಆಗಿರುವ ನಮ್ಮ ಶಾಸಕರು ನಮಗೆ ಲಕ್. ಹಾಗಾಗಿ ಪುತ್ತೂರಿನ ಚಿತ್ರಣ ಬದಲಾಗಿದೆ. ಅದೇ ರೀತಿ ಮಠಂದೂರು ಶಾಸಕರಾಗಿದ್ದ ಸಂದರ್ಭ ಬಂಟ್ವಾಳದ ಸಬ್ರಿಜಿಸ್ಟರ್ ಮಹಿಳೆಗೆ ಬೈದಿರುವುದು ಮತ್ತು ಅವರನ್ನು ವರ್ಗಾವಣೆ ಮಾಡಿರುವುದು, ಪಾಪೆಮಜಲಿನಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರು ಕ್ರಿಶ್ಚಿಯನ್ ಕಮ್ಯೂನಿಟಿ ಮಹಿಳೆ ಎಂದು ತಿಳಿದು ಪ್ರಶಸ್ತಿ ಕೊಡದೆ ಅವಮಾನಿಸಿರುವುದು ಮಹಿಳೆಯರಿಗೆ ಮಾಡಿದ ಅನ್ಯಾಯ ಅಲ್ಲವೇ. ಅದನ್ನು ಯಾಕೆ ಖಂಡಿಸುವುದಿಲ್ಲ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಶಾಸಕರು ಎಲ್ಲರನ್ನು ಒಂದೇ ರೀತಿ ನೋಡುತ್ತಾರೆ:
ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಮಿನೇಜಸ್ ಅವರು ಮಾತನಾಡಿ, ಶಾಸಕರು ಕಚೇರಿಗೆ ಯಾವ ಪಕ್ಷದವರೇ ಬರಲಿ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುತ್ತಾರೆ. ನಮ್ಮಲ್ಲೂ ಎಲ್ಲಾ ಪಕ್ಷದವನ್ನು ಒಂದೇ ರೀತಿಯಲ್ಲಿ ನೋಡಬೇಕು. ವಿವಿಧ ಸವಲತ್ತು, ಬೇಡಿಕೆಗೆ ಬಂದಾಗ ಅವರಿಗೆ ಸ್ಪಂದಿಸುವಂತೆ ಹೇಳುತ್ತಾರೆ. ಪಕ್ಷ ಬೇಧವಿಲ್ಲದೆ ಕೆಲಸ ಮಾಡುವ ಶಾಸಕರ ಕುರಿತು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಜಯಂತಿ ಬಟ್ಯಮೂಲೆ ಉಪಸ್ಥಿತರಿದ್ದರು.










