ತಿಂಗಳಾಡಿ ಶ್ರೀಕ್ಷೇತ್ರ ದೇವಗಿರಿಯಲ್ಲಿ ನೂತನ ಭಜನಾ ಮಂದಿರಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಸಮಾರಂಭ

0


ಭಕ್ತರು ಬಂದು ಕೈಜೋಡಿಸಿದಾಗ ಮಾತ್ರ ಭಗವಂತನ ಸಾನಿಧ್ಯ ಅಭಿವೃದ್ದಿ : ಕ್ಯಾ.ಬ್ರಿಜೇಶ್ ಚೌಟ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಒಂದು ವಿಶೇಷವಾದ ಜಿಲ್ಲೆಯಾಗಿದ್ದು ಇಲ್ಲಿರುವಷ್ಟು ಧಾರ್ಮಿಕ ಆಲಯಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ, ತುಳುವರು ಸಂಸ್ಕಾರವಂತರಾಗಿದ್ದು ತುಳುವರು ಯಾವ ರಾಜ್ಯಕ್ಕೂ ಹೋದರು ಅವರ ಆಚಾರ, ವಿಚಾರ ಗುಣನಡೆತೆ, ಸಂಸ್ಕಾರಗಳಿಂದ ಅವರನ್ನು ಗುರುತಿಸಲು ಸಾಧ್ಯವಾಗುತ್ತದೆ. ಒಂದು ಧಾರ್ಮಿಕ ಕೇಂದ್ರ ಅಭಿವೃದ್ದಿಯಾಗಬೇಕಾದರೆ ಭಕ್ತರ ಸಹಕಾರ ಅತೀ ಅಗತ್ಯ. ಭಕ್ತರು ಬಂದು ಕೈಜೋಡಿಸಿದಾಗ ಮಾತ್ರ ಭಗವಂತನ ಸಾನಿಧ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಿಂಗಳಾಡಿ ದೇವಗಿರಿಯ ಶ್ರೀ ದೇವತಾ ಭಜನಾ ಮಂದಿರದ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗೋಣ ಎಂದು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಹೇಳಿದರು.


ಅವರು ಮಾ.6 ರಂದು ಕೆದಂಬಾಡಿ ಗ್ರಾಮದ ತಿಂಗಳಾಡಿ ಶ್ರೀ ಕ್ಷೇತ್ರ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ನೂತನ ಭಜನಾ ಮಂದಿರಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಸಮಾರಂಭ ಮಾ.06 ರಂದು ತಿಂಗಳಾಡಿ ಶ್ರೀ ಕ್ಷೇತ್ರ ದೇವಗಿರಿಯಲ್ಲಿ ನಡೆದ ನೂತನ ಭಜನಾ ಮಂದಿರದ ಭೂಮಿಪೂಜೆ, ಶಿಲಾನ್ಯಾಸ ಸಮಾರಂಭದಲ್ಲಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಮಂಗಳೂರು ತಾಲೂಕಿನಲ್ಲಿ ಸುಮಾರು 1300 ಕ್ಕೂ ಅಧಿಕ ಧಾರ್ಮಿಕ ಆಲಯಗಳಿದ್ದು ಇದೇ ರೀತಿಯಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಕ್ಕೂ ಮಿಕ್ಕಿ ಧಾರ್ಮಿಕ ಆಲಯಗಳಿವೆ ಎಂದು ತಿಳಿಸಿದ ಕ್ಯಾ.ಬ್ರಿಜೇಶ್ ಚೌಟರವರು ಯಾವುದೇ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಬೇಕಾದರೆ ಭಕ್ತರ ಸಹಕಾರ ಅತೀ ಅಗತ್ಯ, ತಿಂಗಳಾಡಿಯ ಶ್ರೀ ದೇವತಾ ಭಜನಾ ಮಂದಿರವು ಒಂದು ವರ್ಷದೊಳಗೆ ಎದ್ದುನಿಂತು ಬ್ರಹ್ಮಕಲಶೋತ್ಸವ ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ನೂತನ ಭಜನಾ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜಾರಾಮ್ ಮುಡಂಬಡಿತ್ತಾಯ ಸೊರಕೆಯವರು ಮಾತನಾಡಿ, ಒಂದು ಭಜನಾ ಮಂದಿರಕ್ಕೆ ಅತ್ಯಂತ ಒಳ್ಳೆಯ ಜಾಗ ಇದಾಗಿದ್ದು ಇಂತಹ ಜಾಗದಲ್ಲಿ ಮಂದಿರ ನಿರ್ಮಾಣವಾದರೆ ಇಡೀ ಊರಿಗೆ ಸುಭೀಕ್ಷೆಯಾಗಲಿದೆ ಈ ಪುಣ್ಯ ಕೆಲಸಕ್ಕೆ ಪ್ರತಿಯೊಬ್ಬರು ಸಹಕಾರ ನೀಡುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಶ್ರೀ ಕ್ಷೇತ್ರ ದೇವಗಿರಿ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಕೆದಂಬಾಡಿ ಗ್ರಾಮದಲ್ಲಿ ದೇವಸ್ಥಾನಗಳಿಲ್ಲ ಎಂಬ ಕೊರಗು ಇದೆ ಮುಂದಿನ ದಿನಗಳಲ್ಲಿ ದೇವಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ದೇವತಾ ಭಜನಾ ಮಂದಿರ ಈ ಗ್ರಾಮದ ಜನರ ಆರಾಧನಾ ಕ್ಷೇತ್ರವಾಗಲಿ, ಈ ಪುಣ್ಯ ಕಾರ್ಯದಲ್ಲಿ ಊರ ಪರವೂರ ಪ್ರತಿಯೊಬ್ಬ ಭಕ್ತರು ಕೈಜೋಡಿಸುವ ಮೂಲಕ ಒಂದು ವರ್ಷದೊಳಗೆ ಅತ್ಯಂತ ಸುಂದರವಾದ ಭಜನಾ ಮಂದಿರದ ನಿರ್ಮಾಣಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಆ ಮೂಲಕ ಶ್ರೀ ಮಹಾಗಣಪತಿ ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಹೇಳಿ ಸರ್ವರ ಸಹಕಾರ ಕೋರಿದರು.


ಪಂಚಮಿ ಗ್ರೂಪ್ಸ್ ಮಾಲಕ, ಉದ್ಯಮಿ ಮಿತ್ರಂಪಾಡಿ ಪುರಂದರ ರೈಯವರು ತಿಂಗಳಾಡಿಯ ದೇವಗಿರಿಯ ಶ್ರೀ ದೇವತಾ ಭಜನಾ ಮಂದಿರದ ನಿರ್ಮಾಣದ ಹಿಂದಿನ ಇತಿಹಾಸವನ್ನು ಸಭೆಯ ಮುಂದಿಟ್ಟರು. ಡೆಕ್ಕಳ ರಾಮಯ್ಯ ರೈಯವರಿಂದ ಹಿಡಿದು ಮಿತ್ರಂಪಾಡಿ ದಿ.ಚೆನ್ನಪ್ಪ ರೈಯವರ ತನಕದ ಅನೇಕ ಗಣ್ಯರು ಈ ಭಜನಾ ಮಂದಿರದ ಹಿಂದೆ ದುಡಿದಿದ್ದಾರೆ ಎಂಬ ವಿಷಯವನ್ನು ತಿಳಿಸಿದರು. ಹಿರಿಯರು ಆರಂಭಿಸಿದ ಈ ಭಜನಾ ಮಂದಿರವನ್ನು ಇಂದಿನ ಯುವ ಜನಾಂಗ ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದ್ದು ಈ ಪುಣ್ಯ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ತಿಳಿಸಿ ಶುಭಹಾರೈಸಿದರು. ಪುತ್ತೂರು ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ನಿರ್ದೇಶಕ ಡೆಕ್ಕಳ ರಾಮಯ್ಯ ರೈ ತಿಂಗಳಾಡಿಯವರು ಸಂದರ್ಭೋಚಿತವಾಗಿ ಮಾತನಾಡಿ ಭಜನಾ ಮಂದಿರದ ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿ ಶುಭ ಹಾರೈಸಿದರು. ಕುಂಬ್ರ ಮಾತೃಶ್ರೀ ಆರ್ಥ್ ಮೂರ‍್ಸ್ ಮಾಲಕ, ಉದ್ಯಮಿ ಕುಂಬ್ರ ಮೋಹನದಾಸ ರೈಯವರು ಮಾತನಾಡಿ, ದೇವಗಿರಿಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ದೇವತಾ ಭಜನಾ ಮಂದಿರಕ್ಕೆ ನಾವೆಲ್ಲರೂ ಅಳಿಲು ಸೇವೆ ಮಾಡುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗೋಣ ಎಂದರು. ನಿವೃತ್ತ ಸೇನಾಧಿಕಾರಿ ರಮೇಶ್ ರೈ ಬೊಳಿಕ್ಕಳರವರು ಮಾತನಾಡಿ, ಭಜನಾ ಮಂದಿರ ನಿರ್ಮಾಣಕ್ಕೆ ನಾವು ಮಾಡುವ ಸೇವೆಯು ಹಿಂದೂ ಸಮಾಜಕ್ಕೆ ಮಾಡುವ ಸೇವೆಯಾಗಿದೆ ಆದ್ದರಿಂದ ನಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗೋಣ ಎಂದು ಹೇಳಿ ಶುಭ ಹಾರೈಸಿದರು. ತಿಂಗಳಾಡಿ ಶ್ರೀ ಕ್ಷೇತ್ರ ದೇವಗಿರಿಯ ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ ಭಜನಾ ಮಂದಿರ ನಿರ್ಮಾಣಕ್ಕೆ ಸರ್ವರ ಸಹಕಾರ ಕೋರಿದರು.

ಶ್ರೀಕ್ಷೇತ್ರ ದೇವಗಿರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಸ್ವಾಗತಿಸಿದರು. ಶ್ರೀ ಕ್ಷೇತ್ರ ದೇವಗಿರಿ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಅನಿವಾರ್ಯ ಕಾರಣಗಳಿಂದ ಸಭೆಗೆ ಬರಲು ಸಾಧ್ಯವಾಗದೇ ಇದ್ದ ಪರಿಣಾಮ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದರು. ಅದನ್ನು ಸಭೆಗೆ ಮೈಕ್ ಮೂಲಕ ತಿಳಿಸಲಾಯಿತು. ಸದಸ್ಯ ಅಣ್ಣು ಗಾಂಧಿನಗರ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಸಂಚಾಲಕ, ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಭಜನಾ ಮಂದಿರ ನಡೆದು ಬಂದು ಹಾದಿಯ ಬಗ್ಗೆ ತಿಳಿಸಿದರು. ಗೌರವ ಸಲಹೆಗಾರರಾದ ಭಾಸ್ಕರ ರೈ ಮಾದೋಡಿ, ಶ್ರೀ ದೇವತಾ ಸಮಿತಿ ಕೋಶಾಧಿಕಾರಿ ಉಂಡೆಮನೆ ಶ್ರೀಕೃಷ್ಣ ಭಟ್, ಚಿದಾನಂದ ಗೌಡ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರುಗಳಾದ ಮಿತ್ರಂಪಾಡಿ ಜಯಾನಂದ ರೈ, ಪ್ರವೀಣ್ ಶೆಟ್ಟಿ ಕೆದಂಬಾಡಿಮಠ ತಿಂಗಳಾಡಿ, ಆನಂದ ರೈ ಮಠ, ರಾಧಾಕೃಷ್ಣ ರೈ ಚಾವಡಿ, ಕೆದಂಬಾಡಿಗುತ್ತು ಸೀತಾರಾಮ ರೈ,ಗೌರವ ಸಲಹೆಗಾರ ಎಸ್. ಪ್ರಸನ್ನ ರೈ ಮಜಲುಗದ್ದೆರವರುಗಳು ಅತಿಥಿಗಳಿಗೆ ಶಾಲು, ವೀಳ್ಯ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ತಿಂಗಳಾಡಿ ವಂದಿಸಿದರು. ಶ್ರೀ ದೇವತಾ ಸಮಿತಿ ಸದಸ್ಯ ಕೆದಂಬಾಡಿಗುತ್ತು ರತ್ನಾಕರ ರೈ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ದೇವತಾ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.


ನೂತನ ಭಜನಾ ಮಂದಿರಕ್ಕೆ ಭೂಮಿಪೂಜೆ, ಶಿಲಾನ್ಯಾಸ
ವೇದಮೂರ್ತಿ ಕೃಷ್ಣ ಕುಮಾರ್ ಉಪಾಧ್ಯಾಯ ಪಟ್ಲಮೂಲೆಯವರ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಭೂಮಿ ಪೂಜೆ, ಶಿಲಾನ್ಯಾಸ ನಡೆಯಿತು. ಆರಂಭದಲ್ಲಿ ಶ್ರೀ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಂದಿರದ ನಿರ್ಮಾಕ್ಕೆ ಆರಂಭದ ದೇಣಿಗೆ ಹಸ್ತಾಂತರ
ದೇವಗಿರಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ದೇವತಾ ಭಜನಾ ಮಂದಿರ ನಿರ್ಮಾಣಕ್ಕೆ ಆರಂಭದ ದೇಣಿಗೆಯನ್ನು ಹಸ್ತಾಂತರ ಮಾಡಲಾಯಿತು. ಶ್ರೀ ದೇವತಾ ಸಮಿತಿಯಿಂದ ಶ್ರೀಕ್ಷೇತ್ರ ದೇವಗಿರಿ ಜೀರ್ಣೋದ್ಧಾರ ಸಮಿತಿಗೆ ರೂ.1 ಲಕ್ಷ ರೂ ಹಾಗೇ ತಿಂಗಳಾಡಿ ಶ್ರೀ ಕೃಷ್ಣ ಮಿತ್ರವೃಂದದಿAದ ರೂ.1 ಲಕ್ಷ ದೇಣಿಗೆಯನ್ನು ಶ್ರೀಕ್ಷೇತ್ರ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆದಂಬಾಡಿಗುತ್ತು ಕೃಷ್ಣಕುಮಾರ್ ರೈಯವರು ದೇಣಿಗೆ ಸ್ವೀಕರಿಸಿದರು. ಹೈಕೋರ್ಟ್ ವಕೀಲರಾದ ಗೋಪಾಲಕೃಷ್ಣ ಗೌಡ ಇದ್ಯಪೆಯವರು 1 ಲಕ್ಷ ರೂ.ದೇಣಿಗೆ ನೀಡುವುದಾಗಿ ತಿಳಿಸಿರುವ ವಿಚಾರವನ್ನು ಕಾರ್ಯಕ್ರಮ ನಿರೂಪಕರು ಸಭೆಯ ಮುಂದಿಟ್ಟರು. ಇದೇ ಸಂದರ್ಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟರವರಿಗೆ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಸಂಸದರ ನಿಧಿ ಹಾಗೇ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರು ಭರವಸೆ ನೀಡಿದರು.

ರೂ.2 ಕೋಟಿ ಬಜೆಟ್ಟಿನ ಭಜನಾ ಮಂದಿರ
ತಿಂಗಳಾಡಿ ದೇವಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ದೇವತಾ ಭಜನಾ ಮಂದಿರವು ಸುಮಾರು 2 ಕೋಟಿ ರೂಪಾಯಿ ಬಜೆಟ್ಟನ್ನು ಒಳಗೊಂಡಿದೆ. ವಿಶೇಷವಾಗಿ ಭವ್ಯವಾದ ಭಜನಾ ಮಂದಿರ ಹಾಗೂ ಪಾಕಶಾಲೆ ಮತ್ತು ಅತಿಥಿ ಗೃಹ ಸೇರಿದ ಸಮುದಾಯ ಭವನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಲಿದೆ. ವಾಸ್ತು ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕರವರ ವಾಸ್ತು ಆಧಾರದಲ್ಲಿ ಕೆಲಸ ಕಾರ್ಯಗಳು ನಡೆಯಲಿದೆ.


‘ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ದೇವಗಿರಿಯಲ್ಲಿ ರಮೇಶ್ ಕಾರಂತರ ವಾಸ್ತು ಆಧಾರದಲ್ಲಿ ಭಜನಾ ಮಂದಿರ ನಿರ್ಮಾಣಗೊಳ್ಳಲಿದೆ. ಈ ಪುಣ್ಯ ಕಾರ್ಯದಲ್ಲಿ ಊರ ಪರವೂರ ಭಕ್ತರು ಸರ್ವ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಾರ್ಥನೆ.’
ಕೆದಂಬಾಡಿಗುತ್ತು ಕೃಷ್ಣಕುಮಾರ್ ರೈ, ಅಧ್ಯಕ್ಷರು ಶ್ರೀಕ್ಷೇತ್ರ ದೇವಗಿರಿ ಜೀರ್ಣೋದ್ಧಾರ ಸಮಿತಿ

LEAVE A REPLY

Please enter your comment!
Please enter your name here