






ಪುತ್ತೂರು:ನರಿಮೊಗರು ಗ್ರಾಮದ ಪುರುಷರಕಟ್ಟೆ ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಮಾತಿನ ಚಕಮಕಿ,ಹಲ್ಲೆ ನಡೆದಿರುವ ಕುರಿತು ನೀಡಲಾದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನರಿಮೊಗರು ಪುರುಷರಕಟ್ಟೆ ಬಿ.ಕೆ.ಶ್ರೀನಿವಾಸ ರಾವ್ (50) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.’ಮಾ.06ರಂದು ಸಂಜೆ ತನ್ನ ಬಾಬ್ತು ಕಾರಿನಲ್ಲಿ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿಗೆ ಬಂದು ಅಂಗಡಿಯ ಬಳಿ ಕಾರು ನಿಲ್ಲಿಸುವ ವೇಳೆ ಆರೋಪಿತ ಸಲೀಮುದ್ದೀನ್ ಯನೆ ಪಾಪು ಎಂಬಾತ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆತನ ಕಾರನ್ನು ಉದ್ದೇಶಪೂರ್ವಕವಾಗಿ ಹಿಂದಕ್ಕೆ ಚಲಾಯಿಸಿದ್ದರಿಂದ ಆತನ ಕಾರಿಗೆ ನನ್ನ ಕಾರು ತಾಗಿರುತ್ತದೆ.ಆ ವೇಳೆ ಆರೋಪಿಯು ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾನೆ.ತನಗೆ ಹಾಗೂ ಆರೋಪಿಗೆ ಮಾತಿನ ಚಕಮಕಿಯಾಗಿದ್ದು, ಸ್ಥಳಿಯರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ.ಆರೋಪಿಯ ಅಣ್ಣ ಜಮಾಲುದ್ದೀನ್ ಎಂಬಾತ ಬಂದು ನನ್ನೊಂದಿಗಿದ್ದ ಜಾಗದ ತಕರಾರಿನ ಪೂರ್ವದ್ವೇಷದಿಂದ ನನಗೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾನೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.



ತನಗಾದ ಗಾಯಕ್ಕೆ ಬಿ.ಕೆ.ಶ್ರೀನಿವಾಸ ರಾವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಕಲಂ : 352,115(2),118(1),351(3) ಜೊತೆಗೆ 3(5) BNS 2023 ಯಂತೆ ಪ್ರಕರಣ (ಅಕ್ರ.27/2026) ದಾಖಲಾಗಿರುತ್ತದೆ.
ಅಬ್ದುಲ್ ರಹಿಮಾನ್ ಯಾರೆಂದೇ ಗೊತ್ತಿಲ್ಲ:
ಮುಕ್ವೆಯಲ್ಲಿ ವಾಹನ ಅಪಘಾತ ವಿಚಾರದಲ್ಲಿ ಶ್ರೀನಿವಾಸ್ ಅವರ ಬೆಂಬಲಿಗ ಎನ್ನಲಾದ ಅಬ್ದುಲ್ ರಹಿಮಾನ್ ಎಂಬವರು ಆಯುಧವೊಂದನ್ನು ಪ್ರದರ್ಶನ ಮಾಡಿದ್ದಾಗಿ ಮಾ.7ರ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಆದರೆ ಅಬ್ದುಲ್ ರಹಿಮಾನ್ ಯಾರೆಂದೇ ನನಗೆ ಗೊತ್ತಿಲ್ಲ.ನನ್ನ ಬೆಂಬಲಿಗ ಅಬ್ದುಲ್ ರಹಿಮಾನ್ ಯಾರೂ ಇಲ್ಲ ಎಂದು ಬಿ.ಕೆ.ಶ್ರೀನಿವಾಸ ರಾವ್ ಸ್ಪಷ್ಟನೆ ನೀಡಿದ್ದಾರೆ.










