ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಾಜಕೀಯ ಕಾರ್ಯಕ್ರಮ ಆರೋಪ: ಕಾರ್ಯನಿರ್ವಾಹಣಾಧಿಕಾರಿಗೆ ಬಿಜೆಪಿ ಮಹಿಳಾ ಮೋರ್ಚಾ ದೂರು

0

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಪುತ್ತೂರು ಬಿಜೆಪಿ ನಗರ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.


ಮಾ.8ರಂದು ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮಹಿಳಾ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ದೇವಸ್ಥಾನದ ಆವರಣದಲ್ಲಿ ರಾಜಕೀಯ ಚಟುವಟಿಕೆ ನಡೆಸಿದಂತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ದೂರಿನ ಪತ್ರದಲ್ಲಿ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು Karnataka Hindu Religious Institutions and Charitable Endowments Act, 1997 ಅಡಿಯಲ್ಲಿ ನೋಂದಾಯಿತವಾಗಿದ್ದು ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಈ ಕಾಯ್ದೆಯ ಪ್ರಕಾರ ದೇವಸ್ಥಾನದ ಆಸ್ತಿ, ಹಾಲ್, ಕಟ್ಟಡಗಳು ಹಾಗೂ ಇತರೆ ಸೌಕರ್ಯಗಳನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಸ್ಪಷ್ಟಪಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.


ವಿಶೇಷವಾಗಿ ಕಾಯ್ದೆಯ ಸೆಕ್ಷನ್ 63 ಪ್ರಕಾರ ದೇವಸ್ಥಾನದ ಆಸ್ತಿಗಳ ಬಳಕೆ ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು ಮತ್ತು ದುರುಪಯೋಗವನ್ನು ತಡೆಯುವ ಜವಾಬ್ದಾರಿ ಆಡಳಿತಾಧಿಕಾರಿಗಳಿಗೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಮಾ. 8ರಂದು ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ನಟರಾಜ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿರುವುದು ದೇವಸ್ಥಾನದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆ ತರುವಂತದ್ದು ಹಾಗೂ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮದಲ್ಲಿ ಅನ್ಯಧರ್ಮದ ವ್ಯಕ್ತಿಗಳೂ ಭಾಗವಹಿಸಿದ್ದರೆಂಬುದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.


ಈ ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ದೇವಸ್ಥಾನದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಾಯ್ದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ದೇವಸ್ಥಾನದ ಆಸ್ತಿಯನ್ನು ರಾಜಕೀಯ ಕಾರ್ಯಕ್ರಮಗಳಿಗೆ ಬಳಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ 7 ದಿನಗಳೊಳಗೆ ಕಚೇರಿಯಿಂದ ಮಾಹಿತಿ ನೀಡುವಂತೆ ಕೂಡ ದೂರಿನಲ್ಲಿ ವಿನಂತಿಸಲಾಗಿದೆ.


ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗಡೆ, ಕಾರ್ಯದರ್ಶಿ ಜಯಲಕ್ಷ್ಮಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಓಬಿಸಿ ಮೋರ್ಚಾ ಅಧ್ಯಕ್ಷ ನಿರಂಜನ್ ಮಾನ್ಯ, ಶಕ್ತಿಕೇಂದ್ರ ಅಧ್ಯಕ್ಷ ನಾಗೇಂದ್ರ ಬಾಳಿಗ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ನಾಗೇಶ್ ಹಾಗೂ ಕಾರ್ಯಕರ್ತ ರವಿ ಉಪಸ್ಥಿತರಿದ್ದರು.

ಮಹಿಳಾ ಸಂಘಟನಾ ಸಂಭ್ರಮಕ್ಕೆ ಸ್ಥಳ ಕೇಳಿ ಮನವಿ – ಈಶ್ವರ ಭಟ್ ಸ್ಪಷ್ಟನೆ
ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಂಘಟನಾ ಸಂಭ್ರಮ ಕಾರ್ಯಕ್ರಮವನ್ನು ನಟರಾಜ ವೇದಿಕೆಯಲ್ಲಿ ಮಾಡಲು ದೇವಳಕ್ಕೆ ಅರ್ಜಿ ಬಂದಿತ್ತು. ನಾವು ಕೂಡಾ ಮಹಿಳಾ ದಿನಾಚರಣೆ ಕಾರ್ಯಕ್ರಮ ಎಂಬ ನಿಟ್ಟಿನಲ್ಲಿ ಅನುಮತಿ ನೀಡಿದ್ದೇವೆ. ಆ ಕಾರ್ಯಕ್ರಮಕ್ಕೆ ನಾನು ಹೋಗಿ ಭೇಟಿ ನೀಡಿ ಬಂದಿದ್ದಾಗ ಅಲ್ಲಿ ಮಹಿಳಾ ಸಂಘಟನಾ ಸಂಭ್ರಮ ಎಂಬದು ಬ್ಯಾನರ್ ಅಳವಡಿಸಿದ್ದರು ಹೊರತು ಯಾವುದೇ ರಾಜಕೀಯ ಪಕ್ಷವನ್ನು ಉಲ್ಲೇಖಿಸಿಲ್ಲವಾಗಿತ್ತು. ಇದೀಗ ಕಾರ್ಯಕ್ರಮದಲ್ಲಿ ಪಕ್ಷದ ಹೆಸರು ಉಲ್ಲೇಖಿಸಿರುವ ಕುರಿತು ಮಾಹಿತಿ ತಿಳಿದು ಬಂದಂತೆ ತಕ್ಷಣ ದೇವಳದ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ನೊಟೀಸ್ ಕಳುಹಿಸಲಾಗಿದೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here