







ಪುತ್ತೂರು: ವಿಟ್ಲ ಕಸಬಾ ಗ್ರಾಮದ ನೆತ್ತರಕೆರೆ ಎಂಬಲ್ಲಿ ಕಳೆದ 5 ವರ್ಷಗಳಿಂದ ಇದ್ದ ರಸ್ತೆ ವಿವಾದಕ್ಕೆ ತೆರೆ ಬಿದ್ದಿದೆ, ಸ್ಥಳಕ್ಕೆ ತೆರಳಿ ರಸ್ತೆ ವೀಕ್ಷಣೆ ಮಾಡಿದ ಶಾಸಕ ಅಶೋಕ್ ರೈ ಅವರು ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿದ್ದಾರೆ.


ಈ ವ್ಯಾಪ್ತಿಯಲ್ಲಿ ಕೆಲವು ಮನೆಗಳಿವೆ. ಆದರೆ ಪ್ರವೇಶದಲ್ಲೇ ರಸ್ತೆ ಸಮಸ್ಯೆ ಉದ್ಭವವಾಗಿತ್ತು. ರಸ್ತೆ ಅಕ್ಕಪಕ್ಕದಲ್ಲಿ ಬೇರೆಯವರಿಗೆ ಸೇರಿದ ಸ್ಥಳವಿದ್ದ ಕಾರಣ ರಸ್ತೆ ಅಗಲೀಕರಣ ಮಾಡಲು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇಲ್ಲಿನ ರತ್ನಾ ಎಂಬವರ ಮಗ ವಿಕಲಚೇತನರಾಗಿದ್ದು ನಡೆದುಕೊಂಡೇ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇಲ್ಲಿನ ರಸ್ತೆ ಸಮಸ್ಯೆಯ ಬಗ್ಗೆ ರತ್ನಾ ಅವರು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಶಾಸಕರು ಕಂದಾಯ ಅಧಿಕಾರಿಗಳಿಗೆ ಸರ್ವೆ ನಡೆಸುವಂತೆ ಸೂಚನೆಯನ್ನು ನೀಡಿದ್ದರು. ಜಾಗದ ಮಾಲಕರುಗಳ ಜೊತೆ ಮಾತುಕತೆ ನಡೆಸಿದ ಶಾಸಕರು ವಿವಾದಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.



ಈ ಸಂದರ್ಭದಲ್ಲಿ ಬಂಟ್ವಾಳ ತಹಶಿಲ್ದಾರ್ ಮಂಜುನಾಥ, ಕಂದಾಯ ನಿರೀಕ್ಷಕ ರವಿ, ಗ್ರಾಮಕರಣಿಕ ಅಜಿತ್ ಉಪಸ್ಥಿತರಿದ್ದರು. ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಅವರ ಕಚೇರಿ ವ್ಯವಸ್ಥಾಪಕರಾದ ಪ್ರವಿಣ್ ಬನ್ನೂರುರವರು ಸಹಕರಿಸಿದರು.










