






ಸೇಡಿಯಾಪುವಿನಲ್ಲೇ ನಿರ್ಮಾಣವಾಗಲಿದೆ 300 ಹಾಸಿಗೆಗಳ ಬೋಧನಾ ಆಸ್ಪತ್ರೆ


ಪುತ್ತೂರು: ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಪೂರಕವಾಗಿ 300 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಾಣದ ಸಿವಿಲ್ ಕಾಮಗಾರಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಕಾಯ್ದಿರಿಸಲಾಗಿರುವ 40 ಎಕ್ರೆ ಜಾಗದಲ್ಲಿಯೇ 300 ಬೆಡ್ನ ಮೆಡಿಕಲ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುದಾನವನ್ನು ಒದಗಿಸಿದ್ದು ಕಟ್ಟಡದ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಂತಿಮ ಮುದ್ರೆ ಬಿದ್ದಿದೆ.



2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-138 ರಲ್ಲಿ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು ಎಂದು, ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದರು.
ಆಯವ್ಯಯ ಘೋಷಣೆಯಂತೆ ಪುತ್ತೂರಿನ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು 300 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೇ ಗೇರಿಸುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕದ ಮುಖ್ಯ ಇಂಜಿನಿಯರ್ ಸಲ್ಲಿಸಿದ್ದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯದೊಂದಿಗೆ ಪರಿಶೀಲಿಸಿತ್ತು.ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಯೋಜನೆ ಪ್ರಸ್ತುತ ಸ್ಥಳದಲ್ಲಿ ಕಾರ್ಯಸಾಧ್ಯವಾಗುವುದಿಲ್ಲ.ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ಥಳ, ನಿರ್ಮಾಣ ಮತ್ತು ಕಾರ್ಯಸಾಧ್ಯತೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ,ಪುತ್ತೂರಿನಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖಾಂತರ ಹೊಸ ಸ್ಥಳದಲ್ಲಿ ನಿರ್ಮಿಸಲು, ಆರ್ಥಿಕ ಇಲಾಖೆಯ ಸೂಚನೆಯಂತೆ ಸದರಿ ಆಯವ್ಯಯದ ಘೋಷಣೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿತ್ತು.
ಪ್ರಸ್ತಾವನೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಗ್ರಾಮದ ಸೇಡಿಯಾವು ಎಂಬಲ್ಲಿ 300 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ನಿರ್ಮಿಸುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕದ ಮುಖ್ಯ ಇಂಜಿನಿಯರ್ ಅವರು ಕಾಮಗಾರಿಯ ರೂ.180 ಕೋಟಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಿದ್ದು,ಆಡಳಿತಾತ್ಮಕ ಅನುಮೋದನೆ ಕೋರಿರುತ್ತಾರೆ.
ಬನ್ನೂರು ಗ್ರಾಮದ ಸೇಡಿಯಾಪು ಬಳಿ 40 ಎಕರೆ ಜಾಗವನ್ನು ಗುರುತಿಸಿ, ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು/ಆಸ್ಪತ್ರೆ ಸ್ಥಾಪಿಸುವ ಉದ್ದೇಶಕ್ಕೆ ಮೀಸಲಿರಿಸಿದ ಜಾಗದಲ್ಲಿ ಸದರಿ ಯೋಜನೆಯನ್ನು ಪ್ರಸ್ತಾಪಿಸಲಾಗಿರುತ್ತದೆ.ಪ್ರಸ್ತಾಪಿಸಿರುವ ಜಾಗದ ಪೈಕಿ ಸುಮಾರು 19 ಎಕರೆಯಷ್ಟು ಜಾಗವು ಮೀಸಲು ಅರಣ್ಯವಾಗಿದ್ದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬಗ್ಗೆ, ಜಂಟಿ ಪರಿವೀಕ್ಷಣೆಯ ಸಂದರ್ಭದಲ್ಲಿ ಗಮನಿಸಲಾಗಿದೆ.ಪ್ರಸ್ತುತ, ಪ್ರಾಥಮಿಕವಾಗಿ ಭೌಗೋಳಿಕ ಸಮೀಕ್ಷೆ ನಡೆಸಲಾಗಿದ್ದು,ಈ ಪ್ರದೇಶವು ಇಳಿಜಾರು ಪ್ರದೇಶವಾಗಿದ್ದು, ಕೆಲವು ಭಾಗಗಳು ಅತೀ ಕಡಿದಾದ ಇಳಿಜಾರಿನಿಂದ ಕೂಡಿರುತ್ತದೆ.ಹಾಲಿ ಈ ಪ್ರದೇಶದಲ್ಲಿ ರಬ್ಬರ್ ಪ್ಲಾಂಟೇಶನ್ ಮತ್ತು ಮರಗಳು ಹಾಗೂ ಗಿಡಗಂಟೆಗಳಿಂದ ಆವೃತವಾಗಿರುತ್ತದೆ.ಈ ಪ್ರದೇಶದಲ್ಲಿ ಸುಮಾರು 01 ಎಕರೆ ಭೂಪ್ರದೇಶ ಆವೃತವಾದ ಕೆರೆ ಸಹ ಒಳಗೊಂಡಿರುತ್ತದೆ ಎಂದು ಪ್ರಸ್ತಾವನೆಯ ವರದಿಯಲ್ಲಿ ತಿಳಿಸಲಾಗಿತ್ತು.ಸದರಿ ಯೋಜನಾ ವರದಿಯನ್ನು 23.01.2026ರಂದು ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಮಂಡಿಸಲಾಗಿತ್ತು.ಈ ವೇಳೆ ಕೆಲವು ಸಲಹೆಗಳನ್ನು ನೀಡಿದ್ದು, ಅದರಂತೆ ಮಾರ್ಪಾಡು ಮಾಡಲಾಗಿದೆ.
ಕಟ್ಟಡದ ತಳಪಾಯವನ್ನು ಮುಂದಿನ ವಿಸ್ತರಣೆಗೆ ಅನುಕೂಲವಾಗುವಂತೆ ಎ+5 ಊಟಟ್ಟ ವಿನ್ಯಾಸವನ್ನು ಅಳವಡಿಸುವುದು.ಕಟ್ಟಡದ ವಿನ್ಯಾಸವನ್ನು ಮುಂದಿನ 650 ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಅನುಕೂಲವಾಗುವಂತೆ ಯೋಜಿಸುವುದು.ಹಾಲಿ ಸ್ಥಳದಲ್ಲಿರುವ ಕೆರೆಯ ಸುತ್ತಲೂ 30 ಮೀಟರ್ ವರೆಗೆ ಪಾರ್ಕ್/ಗಾರ್ಡನ್ ನಿರ್ಮಿಸುವುದು.ಯೋಜನೆಯಲ್ಲಿ ಪರಿಗಣಿಸಿರುವ ರಾಜ್ಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೈಬಿಡುವುದು ಎಂದು ಸಲಹೆ ನೀಡಲಾಗಿತ್ತು.ಬಳಿಕ 300 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಸಮಗ್ರ ಯೋಜನಾ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ರೂ.180 ಕೋಟಿಗಳಿಗೆ (ಸಿವಿಲ್ ಕಾಮಗಾರಿ ಮಾತ್ರ) ತಯಾರಿಸಿ, ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮುಖ್ಯ ಇಂಜಿನಿಯರ್ ಕೋರಿದ್ದರು.
ಪ್ರಸ್ತಾವನೆಯನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕುಷವಾಗಿ ಪರಿಶೀಲಿಸಿದ ನಂತರ,ಬನ್ನೂರು ಗ್ರಾಮದ ಸೇಡಿಯಾಪು ಬಳಿ 300 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ನಿರ್ಮಿಸುವ ಸಂಬಂಧ ಸಿವಿಲ್ ಕಾಮಗಾರಿಯ ರೂ.180 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಬಾಲಪ್ಪ ಅವರು ಮಾ.17ರಂದು ಆದೇಶಿಸಿದ್ದಾರೆ.ಸದರಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಇವರು ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಲವೇ ದಿನಗಳಲ್ಲಿ ಶಿಲಾನ್ಯಾಸ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಚಾಲನೆ ದೊರಕಿದೆ.ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮೊದಲು ಮೆಡಿಕಲ್ ಹಾಸ್ಪಿಟಲ್ ನಿರ್ಮಾಣವಾಗಬೇಕಿದೆ.ಈಗಾಗಲೇ ನಿಯೋಜಿತ ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ 300 ಬೆಡ್ನ ಹಾಸ್ಪಿಟಲ್ ನಿರ್ಮಾಣವಾಗಲಿದೆ.ಇದಕ್ಕಾಗಿ 180 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಅಂತಿಮವಾಗಿ ಕೆಲವೇ ದಿನಗಳಲ್ಲಿ ಕಾಮಗಾರಿಗೆ ಶಿಲಾನ್ಯಾಸವೂ ನಡೆಯಲಿದೆ.ಮೆಡಿಕಲ್ ಹಾಸ್ಪಿಟಲ್ ನಿರ್ಮಾಣವಾದ ಬಳಿಕ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇನೆ ಎಂಬ ತೃಪ್ತಿ ಇದೆ.ಜನರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳ ಜೊತೆಗೆ ಜನರ ಬೇಡಿಕೆಗಳು ಒಂದೊಂದಾಗಿ ಈಡೇರಲಿದೆ
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು










