







ರಾಜಕೀಯ ರಹಿತ ಸಾಮಾಜಿಕ ಸಾಮರಸ್ಯದೊಂದಿಗೆ, ಧಾರ್ಮಿಕ ಸಭೆಗಳಿಲ್ಲದೆ ನಡೆಯಲಿದೆ ಕಾರ್ಯಕ್ರಮ
@ ಸಿಶೇ ಕಜೆಮಾರ್


ಪುತ್ತೂರು: ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಶ್ರೀ ಆಂಜನೇಯ ದೇವರು ಒಂದೇ ಕಡೆಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವ ದಕ್ಷಿಣ ಭಾರತದ ಅತ್ಯಂತ ಕಾರಣಿಕತೆಯ ಕ್ಷೇತ್ರವಾಗಿರುವ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಎ.9 ರಿಂದ 12 ರ ತನಕ ನಡೆಯಲಿರುವ ಹನುಮಗಿರಿ ಬ್ರಹ್ಮಕಲಶೋತ್ಸವವು ಹತ್ತು ಹಲವು ವೈವಿಧ್ಯತೆಗಳಿಂದ ಕೂಡಿದೆ. ಸಾಮಾಜಿಕ ಸಾಮರಸ್ಯದೊಂದಿಗೆ ರಾಜಕೀಯ ರಹಿತವಾಗಿ ಯಾವುದೇ ಧಾರ್ಮಿಕ ಸಭೆಗಳಿಲ್ಲದೆ ನಡೆಯಲಿರುವ ಈ ಬ್ರಹ್ಮಕಲಶೋತ್ಸವ ಸಂಭ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ. ಬಹುಷಹ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಒಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು ಶ್ರೀರಾಮ ದೇವರ ಜನ್ಮಭೂಮಿ ಅಯೋಧ್ಯೆಯಿಂದ ಹೊತ್ತಿ ಉರಿಸಿದ ಜ್ಯೋತಿಯು ಪ್ರತಿ ಮನೆಮನೆಯಲ್ಲಿ ಉರಿಯಲಿದ್ದು ಆ ಮೂಲಕ ರಾಮನ ಅನುಗ್ರಹ ಪ್ರತಿ ಮನೆಗೂ ಮುಟ್ಟಲಿದೆ. ಹನುಮಗಿರಿ ಬ್ರಹ್ಮಕಲಶೋತ್ಸವದ ವಿಶೇಷತೆಗಳೇನು ಎಂಬುದರ ಬಗ್ಗೆ ಇಲ್ಲಿದೆ ಒಂದು ಪುಟ್ಟ ಝಲಕ್…



ಸಾಮಾಜಿಕ ಸಾಮರಸ್ಯ:
ಹನುಮಗಿರಿ ಬ್ರಹ್ಮಕಲಶೋತ್ಸವದ ಮೊದಲ ವಿಶೇಷತೆ ಏನೆಂದರೆ ಇಲ್ಲಿ ಸಾಮಾಜಿಕ ಸಾಮರಸ್ಯವನ್ನು ಬಿಂಬಿಸಿದ್ದು ಅದೇನೆಂದರೆ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಉಪನ್ಯಾಸಕರಾದ ಡಾ.ರವೀಶ್ ಪಡುಮಲೆಯವರನ್ನು ನೇಮಕ ಮಾಡಿದ್ದು ಆಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಬ್ಬರು ದೈವ ನರ್ತಕ ಸಮುದಾಯದಿಂದ ಬಂದಿರುವ ಡಾ.ರವೀಶ್ರವರನ್ನು ಸ್ವಾಗತ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಎತ್ತಿತೋರಿಸಲಾಗಿದೆ.
ಅಯೋಧ್ಯೆಯಿಂದ ರಾಮ ಜ್ಯೋತಿ, ಅಂಜನಾದ್ರಿಯಿಂದ ಹನುಮ ಜ್ಯೋತಿ:
ರಾಮ ಜನ್ಮಭೂಮಿಯಾಗಿರುವ ಅಯೋಧ್ಯೆಯಿಂದ ರಾಮ ಜ್ಯೋತಿಯನ್ನು ಹಾಗೇ ಅಂಜನಾದ್ರಿಯ ಹನುಮ ಕ್ಷೇತ್ರದಿಂದ ಹನುಮ ಜ್ಯೋತಿಯನ್ನು ರಥಯಾತ್ರೆಯ ಮೂಲಕ ಹನುಮಗಿರಿಗೆ ತರಲಾಗುತ್ತಿದೆ. ಅಯೋಧ್ಯೆಯಿಂದ ಹೊರಡುವ ರಥಯಾತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 500 ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತದೆ. ಅಯೋಧ್ಯೆಯಿಂದ ಹಚ್ಚಿದ ಈ ಜ್ಯೋತಿಯನ್ನು ಪ್ರತಿ ಧಾರ್ಮಿಕ ಕೇಂದ್ರಗಳಿಗೆ ಹಾಗೇ ಪ್ರತಿ ಮನೆಗಳಿಗೆ ತಲುಪಿಸುವ ವ್ಯವಸ್ಥೆಯಾಗಲಿದೆ. ಅಯೋಧ್ಯೆಯಲ್ಲಿ ಹಚ್ಚಿದ ಒಂದೇ ಜ್ಯೋತಿ ಮನೆಯನ್ನು ಬೆಳಗಲಿದೆ. 9 ನೇ ತಾರೀಖಿಗೆ ಸಂಜೆ ಈ ರಾಮ ಜ್ಯೋತಿ ರಥಯಾತ್ರೆ ಹನುಮಗಿರಿಯನ್ನು ತಲುಪಲಿದೆ.
ರಾಜಕೀಯ ರಹಿತ, ಧಾರ್ಮಿಕ ಸಭೆಗಳಿಲ್ಲದ ಕಾರ್ಯಕ್ರಮ:
ಹೆಚ್ಚಿನ ಎಲ್ಲಾ ಬ್ರಹ್ಮಕಲಶೋತ್ಸವಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಒಂದಷ್ಟು ರಾಜಕೀಯ ಗಣ್ಯರು, ಅತಿಥಿಗಳು ಬಂದು ಭಾಷಣ ಮಾಡಿ ಹೋಗುತ್ತಾರೆ ಆದರೆ ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳೇ ಇಲ್ಲ ಬದಲಾಗಿ ಇದು ರಾಜಕೀಯ, ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಇಲ್ಲಿ ಎಲ್ಲಾ ರಾಜಕೀಯ ನೇತಾರರು, ಧಾರ್ಮಿಕ ಪಂಡಿತರು, ಗಣ್ಯರು ಹೀಗೆ ಪ್ರತಿಯೊಬ್ಬರು ಬಂದು ಸೇರಿಕೊಂಡು ನಡೆಸುವ ಕಾರ್ಯಕ್ರಮವಾಗಲಿದೆ. ಆಮಂತ್ರಣ ಪತ್ರಿಕೆಯನ್ನು ಗಮನಿಸಿದರೆ ಅಲ್ಲಿ ಯಾರೋಬ್ಬರು ಹೆಸರು ಕೂಡ ಪ್ರಕಟಿಸದೇ ಇರುವುದು ಕಂಡು ಬರುತ್ತದೆ. ಒಟ್ಟಿನಲ್ಲಿ ಧಾರ್ಮಿಕ, ವೈಧಿಕ ಕಾರ್ಯಕ್ರಮಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ.
ಸಮಾಜಕ್ಕೆ ಭಾರ ಆಗದಂತೆ ನೋಡಿಕೊಳ್ಳಲಾಗಿದೆ:
ಒಂದು ಧಾರ್ಮಿಕ ಕೇಂದ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಎಂದರೆ ಆ ಗ್ರಾಮದ, ಊರಿನ ಜನರಿಗೆ ಒಂದಷ್ಟು ಆರ್ಥಿಕ ಹೊರೆ ಬಂದೇ ಬರುತ್ತದೆ ಆದರೆ ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಸಮಾಜಕ್ಕೆ ಯಾವುದೇ ಹೊರೆ ಆಗದಂತೆ ನೋಡಿಕೊಳ್ಳಲಾಗಿದೆ. ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆಯನ್ನು ಮಾತ್ರ ಸ್ವೀಕರಿಸಲಾಗುತ್ತಿದೆ ಹೊರತು ಯಾವುದೇ ಧನ ಸಹಾಯದ ನೀರಿಕ್ಷೇಯನ್ನು ಇಟ್ಟುಕೊಳ್ಳದೇ ನಡೆಯುವ ಕಾರ್ಯಕ್ರಮ ಇದಾಗಲಿದೆ.
ರಾಮನಿಗೊಂದು, ಹನುಮನಿಗೊಂದು ನಾರಿಕೇಳ:
ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಇನ್ನೊಂದು ವಿಶೇಷತೆಯನ್ನು ಕಾಣಬಹುದಾಗಿದೆ ಅದೇನೆಂದರೆ ಇಲ್ಲಿ ಭಕ್ತರು ಎರಡು ತೆಂಗಿನಕಾಯಿಗಳನ್ನು ಅರ್ಪಣೆ ಮಾಡಬಹುದಾಗಿದೆ. ಅದರಲ್ಲಿ ಒಂದು ರಾಮನಿಗೆ ಇನ್ನೊಂದು ಹನುಮನಿಗೆ. ರಾಮನಿಗೊಂದು ಹನುಮನಿಗೊಂದು ನಾರಿಕೇಳ ಎನ್ನುವ ಚಿಂತನೆಯನ್ನು ಮಾಡಿಕೊಂಡು ಊರಪರವೂರ ಭಕ್ತರು ತಮ್ಮ ತೋಟದಲ್ಲಿ ಬೆಳೆದ ಎರಡು ನಾರಿಕೇಳವನ್ನು ಶ್ರೀ ಕ್ಷೇತ್ರಕ್ಕೆ ಸಲ್ಲಿಸಬಹುದು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅದೆಷ್ಟೇ ಶ್ರೀಮಂತನಾದರೂ ಎರಡು ತೆಂಗಿನ ಕಾಯಿ, ಬಡವನಿಗೂ ಎರಡು ತೆಂಗಿನ ಕಾಯಿಯನ್ನು ಅರ್ಪಣೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಕೋಟಿ ರಾಮ ತಾರಕ ಯಜ್ಞ:
ಶ್ರೀ ಕ್ಷೇತ್ರದಲ್ಲಿ ವಿಶೇಷವಾಗಿ ಕೋಟಿ ಶ್ರೀರಾಮ ತಾರಕ ಯಜ್ಞ ನಡೆಯಲಿದ್ದು ಈಗಾಗಲೇ 12 ಸಾವಿರಕ್ಕೂ ಅಧಿಕ ಮಂದಿ ದೀಕ್ಷೆ ಪಡೆದುಕೊಂಡಿದ್ದಾರೆ. ಪುತ್ತೂರು, ಸುಳ್ಯ, ಕಾಸರಗೋಡು, ಬಂಟ್ವಾಳ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಗ್ರಾಮ ಸಮಿತಿಗಳನ್ನು ರಚನೆ ಮಾಡಿಕೊಳ್ಳಲಾಗಿದ್ದು ಈಗಾಗಲೇ 60 ರಿಂದ 70 ಗ್ರಾಮ ಸಮಿತಿಗಳ ರಚನೆಯಾಗಿದೆ. ಇದು ಮೊದಲ ಬಾರಿಗೆ ಈ ರೀತಿಯ ಗ್ರಾಮ ಸಮಿತಿಗಳ ರಚನೆಯ ಮೂಲಕ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. 10 ಯಾಗದ ಕುಂಡಗಳು ಇರಲಿದ್ದು ಪ್ರತಿ 1 ಕುಂಡದಲ್ಲೂ 10 ಮಂದಿ ವೈಧಿಕರು ಇರಲಿದ್ದಾರೆ.
ಪವಿತ್ರಪಾಣಿಯಾಗಿ ನನ್ಯ ಅಚ್ಚುತ ಮೂಡೆತ್ತಾಯ:
ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಪವಿತ್ರಪಾಣಿಯಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಕೈಂಕರ್ಯ ವಹಿಸಿಕೊಳ್ಳಲಿದ್ದು ಅಚ್ಚುತ ಮೂಡೆತ್ತಾಯರವರು 7 ಬಾರಿಗೆ ಬ್ರಹ್ಮಕಲಶೋತ್ಸವದ ಪವಿತ್ರಪಾಣಿಯಾಗಿ ಕೈಂಕರ್ಯ ವಹಿಸಿಕೊಳ್ಳುತ್ತಿರುವುದು ವಿಶೇಷತೆಯಾಗಿದೆ. ಕಟೀಲು ಬ್ರಹ್ಮಕಲಶೋತ್ಸವ ಸೇರಿದಂತೆ ಹಲವು ಬ್ರಹ್ಮಕಲಶೋತ್ಸವಗಳನ್ನು ಯಶಸ್ವಿಯಾಗಿ ನೆರವೇರಿಸಿದ ನಳಿನ್ ಕುಮಾರ್ ಕಟೀಲುರವರು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ.
ಕಂಚಿ ಕಾಮಕೋಟಿ ಶ್ರೀ, ಪಂದಳ ಮಹಾರಾಜರ ಪಾದಸ್ಪರ್ಶ
ಹನುಮಗಿರಿ ಬ್ರಹ್ಮಕಲಶೋತ್ಸವಕ್ಕೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆ ಮಾಡಿದ ಕಂಚಿ ಕಾಮಕೋಟಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶ್ರೀಗಳು ಹಾಗೇ ಶಬರಿಮಲೆ ಪಂದಳ ಕ್ಷೇತ್ರದ ಮಹಾರಾಜರಾಗಿರುವ ಶ್ರೀ ನಾರಾಯಣ ವರ್ಮರವರು ಭಾಗವಹಿಸಲಿದ್ದಾರೆ. ಇವರಲ್ಲದೆ ಹಲವು ಮಂದಿ ಸ್ವಾಮೀಜಿಗಳು, ಪಂಡಿತರು ಭಾಗವಹಿಸುವ ಮೂಲಕ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ.
ಭರದಿಂದ ನಡೆಯುತ್ತಿದೆ ಜೀರ್ಣೋದ್ಧಾರ ಕಾರ್ಯಗಳು
ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ವಿಶೇಷವಾಗಿ ಪಂಚಮುಖಿ ಆಂಜನೇಯ ದೇವರ ಎದುರು ಭಾಗದಲ್ಲಿ ನಮಸ್ಕಾರ ಮಂಟಪ (ಸಿಂಹ ಮಂಟಪ) ರಚನೆಯಾಗುತ್ತಿದೆ. ಸಂಪೂರ್ಣ ಗ್ರಾನೈಟ್ನಿಂದ ನಿರ್ಮಣಗೊಳ್ಳುತ್ತಿರುವ ಈ ಸಿಂಹ ಮಂಟಪ ಆಕರ್ಷಕವಾಗಿದೆ. ಪಂಚಮುಖಿ ಆಂಜನೇಯ ಸ್ವಾಮಿಯ ಎದುರು ಭಾಗದಲ್ಲಿ ಅತ್ಯಂತ ದೊಡ್ಡ ಹೆಬ್ಬಾಗಿಲು ನಿರ್ಮಾಣ ಮಾಡಲಾಗಿದೆ ಹಾಗೆ ಮೂಡ ಗೋಪುರ ನಿರ್ಮಿಸಲಾಗಿದೆ. ಪಂಚಮುಖಿ ಆಂಜನೇಯ ಸ್ವಾಮಿ ಹಾಗೇ ಶ್ರೀ ಕೋದಂಡರಾಮ ದೇವರ ಪಾಣಿಪೀಠಕ್ಕೆ ತಾಮದ್ರದ ಹೊದಿಕೆ ಹಾಸಲಾಗುತ್ತಿದೆ. ಉಳಿದಂತೆ ಪಂಚಮುಖಿ ಆಂಜನೇಯ ಸ್ವಾಮಿಯ ಎದುರು ವಿಶಾಲವಾದ ಬಯಲು ಪ್ರದೇಶದಲ್ಲಿ ಆಕರ್ಷಕವಾದ ಹೂತೋಟ ನಿರ್ಮಾಣವಾಗುತ್ತಿದೆ. ಇಡೀ ಕ್ಷೇತ್ರದಲ್ಲಿ ಅಲ್ಲಲ್ಲಿ ಹೂ ತೋಟದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ನಿರಂತರ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು
ಬ್ರಹ್ಮಕಲಶೋತ್ಸವದ ಪ್ರತಿ ದಿನವು ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಸುಮಾರು 200 ಭಜನಾ ತಂಡಗಳು ನೋಂದಾವಣೆಗೊಂಡಿವೆ. ಅಮರಗಿರಿಯಲ್ಲಿ ಕುಶ ವೇದಿಕೆ ಮತ್ತು ಹನುಮಗಿರಿಯಲ್ಲಿರುವ ಲವ ವೇದಿಕೆ ಈ ಎರಡು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.










