






ಪುತ್ತೂರು: ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಗಾನಸಿರಿ ಕಲಾಕೇಂದ್ರ ಪುತ್ತೂರು ಕೊಡಮಾಡುವ ಗಾನಸಿರಿ ಸಾಧನಾ ಸಿರಿ ರಾಜ್ಯ ಪ್ರಶಸ್ತಿಗೆ ಬಾಲ ಪ್ರತಿಭೆ ಸೋನಿಕಾ ಜನಾರ್ದನ್‌ರವರು ಆಯ್ಕೆಯಾಗಿದ್ದಾರೆ.


ಪ್ರಮೀಳಾ ಜನಾರ್ಧನ್ ಮತ್ತು ಮೈಸೂರಿನಲ್ಲಿ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಜನಾರ್ಧನ್ ದಂಪತಿಗಳ ಪುತ್ರಿ ಬಾಲ ಪ್ರತಿಭೆ ಸೋನಿಕಾ ಜನಾರ್ಧನ್ ತನ್ನ ಸಣ್ಣ ಪ್ರಾಯದಲ್ಲಿಯೇ ಸಂಗೀತ ಕಲೆಯನ್ನು ಕರಗತ ಮಾಡಿಕೊಂಡು ಮಂಗಳೂರಿನ ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ, ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರ, ಮಧೂರು ಶ್ರೀ ಮದರನಂತೆಶ್ವರ ಮಹಾ ಗಣಪತಿ ದೇವಸ್ಥಾನದ ಮೂಡಪ್ಪ ಸೇವೆಯ ಪ್ರಯುಕ್ತ ನಡೆದ ಭಕ್ತಿ ಸಂಗೀತ , ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಶ್ರೀ ಕೃಷ್ಣ ಮಠ, ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನ,ಮಂಗಳೂರಿನಲ್ಲಿ ಐವನ್ ಡಿಸೋಜ ಅವರ ನೇತೃತ್ವದಲ್ಲಿ ದೀಪಾವಳಿಯ ಪ್ರಯುಕ್ತ ನಡೆದ ಭಾವೈಕ್ಯತೆಯ ಸಂಗಮ ಕಾರ್ಯಕ್ರಮ ಸೇರಿದಂತೆ ವಿವಿದೆಡೆ ತನ್ನ ಸ್ವರ ಮಾಧುರ್ಯ ಬಳಗದ ಜೊತೆಗೆ ಸಂಗೀತ ಕಾರ್ಯಕ್ರಮ ನೀಡಿರುತ್ತಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಯುವ ಸಂಭ್ರಮ ಹಾಗೂ ಮೈಸೂರು ಮಕ್ಕಳ ದಸರಾ ದಲ್ಲಿ ಭಾರತದ ಸಂವಿಧಾನ ಪೀಠಿಕೆ ಯನ್ನು ಸುಶ್ರಾವ್ಯ ಕಂಠ ದಿಂದ ಹಾಡಿ ನೆರೆದ ಅಪಾರ ಸಂಖ್ಯೆಯ ಯುವ ಸಮೂಹ ಹಾಗೂ ಗಣ್ಯರ ಮೆಚ್ಚುಗೆ ಪಡೆದುಕೊಂಡಿದ್ದಾರೆ.



ಮೈಸೂರಿನ ದಸರಾ ವಸ್ತು ಪ್ರದರ್ಶನ ವೇದಿಕೆ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರಿನ ಮಹಿಳಾ ಮತ್ತು ಮಕ್ಕಳ ದಸರಾ ಸೇರಿದಂತೆ ವಿವಿದೆಡೆ ವರ್ಣ ರಂಜಿತ ವೇದಿಕೆ ಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಈ ಸಂಗೀತ ಪ್ರತಿಭೆ ಯನ್ನು ಈಗಾಗಲೇ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪರವರು, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ವಿವಿಧ ಗಣ್ಯರು ಅಭಿನಂದಿಸಿ ಗೌರವಿಸಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ ಪುತ್ತೂರಿನ ಎ. ವಿ. ಜಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಯವರು ಸನ್ಮಾನಿಸಿ ಗೌರವಿಸಿದ್ದಾರೆ. ಸೋನಿಕಾ ಜನಾರ್ದನ್‌ರವರು ಹಲವಾರು ಆಲ್ಬಮ್ ಹಾಡುಗಳಿಗೂ ಇತರ ಕಲಾವಿದರ ಜೊತೆಗೆ ಧ್ವನಿ ನೀಡಿದ್ದಾರೆ. ಬಲ್ನಾಡು ದಂಡ ನಾಯಕ ಉಳ್ಳಾಲ್ತಿ ಭೇಟಿಯ ಕುರಿತ “ಸತ್ಯೋದ ಬೊಲ್ಪು ಮೂಡ್ಂಡುಯೇ’ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ ರ ಕುರಿತ ಹಾಡು ” ಗೆಜ್ಜೆ ಗಿರಿತ ಅಮರ್ ಬೊಳ್ಳಿಲು “, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗಳ ಕುರಿತ ಹಾಡು
” ಜನ ಸೇವಕ ಜನ ನಾಯಕ ” ಎಂಬ ಆಲ್ಬಮ್ ಹಾಡುಗಳಿಗೂ ಇತರ ಕಲಾವಿದರೊಂದಿಗೆ ಧ್ವನಿ ನೀಡಿದ್ದಾರೆ.ಪ್ರಸ್ತುತ ಮೈಸೂರಿನ ಐಡಿಯಲ್ ಜಾವ ರೋಟರಿ ಶಾಲೆಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಎ.5 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಗಾನಸಿರಿ ಕಲಾ ಕೇಂದ್ರದ ರಜತ ಸಂಭ್ರಮ ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.










