






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೂಲಭೂತವಾದಿ/ ನಾಸ್ತಿಕತೆ ಹೊಂದಿರುವ ಜನರ ಪ್ರೇರಣೆಯಿಂದ ದೇವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ಧಾರ್ಮಿಕ ಧತ್ತಿ ಇಲಾಖಾ ನಿಯಮದಂತೆ ಕ್ರಮ ಜರುಗಿಸಬೇಕು ಎಂದು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.


ಲಕ್ಷೋಪಲಕ್ಷ ಭಕ್ತರು ಸೇರುವ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿ ಯಾವುದೇ ತೊಂದರೆ ಆಗಬಾರದು. ಎರಡು ಕುಟುಂಬಗಳ ಮಧ್ಯೆ ಇರುವ ವಿಚಾರವು ಈಗಾಗಲೇ ಕೋರ್ಟ್ ವ್ಯಾಪ್ತಿಯಲ್ಲಿದೆ. ದೇವಳದ ಕೊಡಿಮರ ಕಂಬಕ್ಕೂ ಆ ಕುಟುಂಬಗಳ ಕಲಹಕ್ಕೂ ಸಂಬಂಧವಿಲ್ಲ. ಅಂತಹ ವಿಚಾರ ಇದ್ದರೆ ಪ್ರತಿಭಟನೆಗೆ ಅದರದ್ದೇ ಆದ ಜಾಗ ಇದೆ. ಅದನ್ನು ಸರಕಾರಿ ಅಧಿಕಾರಿಗಳು ತೋರಿಸಿಕೊಡುತ್ತಾರೆ. ದೇವಾಲಯ ನಮ್ಮ ಹಿಂದೂಗಳ ಆರಾಧನಾ ಕೇಂದ್ರ ಅದು ಹಕ್ಕೋತ್ತಾಯ ಮಾಡುವ ಜಾಗವಲ್ಲ. ಇದಕ್ಕೆ ಪ್ರೇರಣೆಯಾಗಿ ಹೇಳಿಕೆಗಳು, ವಾಕ್ಸಮರಗಳು, ವಿಡಿಯೋಗಳು, ಪತ್ರಿಕಾಗೋಷ್ಟಿ ಇದೆಲ್ಲಾ ನಡೆಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಹೆಸರನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಗಳ ವಿರುದ್ಧ ಪತ್ರಿಕಾ ದಾಖಲೆ, ವಿಡಿಯೋ ದಾಖಲೆಗಳ ಆಧಾರದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಧಾರ್ಮಿಕ ಧತ್ತಿ ಇಲಾಖೆ ನಿಯಮದಂತೆ ಕ್ರಮ ಜರುಗಿಸಿ ಮತ್ತು ಜಾತ್ರೆಯ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಪತ್ರಿಕಾ ಹೇಳಿಕೆಯಲ್ಲಿ ಭಾಗವಹಿಸಿದ ವ್ಯಕ್ತಿಗಳು ದೇವಾಲಯದ ಒಳಗೆ ಬಾರದಂತೆ ಜಾತ್ರಾ ಸಮಯ ಮುಂಜಾಗ್ರತೆಯಾಗಿ ತಡೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸೊರಕೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.













