ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣಾಯಣದ ಸಮಾರೋಪ

0

ಮಕ್ಕಳನ್ನು ಬಾಲ್ಯದಲ್ಲಿ ಕ್ರಿಯಾಶೀಲರನ್ನಾಗಿಸುವುದೇ ಮಕ್ಕಳ ಕಲಿಕೆಗೆ ಬುನಾದಿ – ಬಿ.ವಿ. ಸೂರ್ಯನಾರಾಯಣ 

ಸವಣೂರು: ಮಕ್ಕಳನ್ನು ಬಾಲ್ಯದಲ್ಲಿ ಕ್ರಿಯಾಶೀಲರನ್ನಾಗಿಸುವುದೇ ಮಕ್ಕಳ ಕಲಿಕೆಗೆ ಬುನಾದಿ ಎಂದು ಹಿರಿಯ ಸಾಹಿತಿ ಮತ್ತು ನಿವೃತ್ತ ಪ್ರಾಂಶುಪಾಲರಾದ ಬಿ. ವಿ. ಸೂರ್ಯನಾರಾಯಣರವರು ಹೇಳಿದರು.

ಅವರು ಪುಣ್ಚಪಾಡಿ ಶಾಲಾ 7ನೇ ವರ್ಷದ ಮಕ್ಕಳ ಶಿಬಿರ ಬಣ್ಣಾಯಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಣ್ಣಾಯಣ ಶಿಬಿರದಲ್ಲಿ ಹಲವು ಚಟುವಟಿಕೆಗಳನ್ನು ನಡೆಸಲಾಗಿದ್ದು ಮಕ್ಕಳು ಸೃಜನಶೀಲರಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು. ಇಷ್ಟೊಂದು ಅರ್ಥಪೂರ್ಣ ಕಾರ್ಯಕ್ರಮದ ಸಂಘಟನೆ ಮಾಡಿದ ಪುಣ್ಚಪ್ಪಾಡಿ ಶಾಲೆಯು ಮಾದರಿಯಾಗಿದೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ್ ಹೆಚ್ ಬಿ ಮಾತನಾಡಿ ಪುಣ್ಚಪ್ಪಾಡಿ ಶಾಲೆಯು ಅತ್ಯುತ್ತಮ ಕಲಿಕಾ ವಾತಾವರಣವನ್ನು ಹೊಂದಿದ್ದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಬಣ್ಣಾಯಣ ಶಿಬಿರವು ಯಶಸ್ವಿಯಾಗಿ ನಡೆದಿದ್ದು ಶಾಲೆಯ ಎಲ್ಲರ ಶ್ರಮ  ಶ್ಲಾಘನೀಯ ಎಂದರು. ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣ ರೈ ಪುಣ್ಚಪ್ಪಾಡಿ ಮಾತನಾಡಿ ಶಾಲೆಯಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳು ಮಕ್ಕಳ ವಿಕಾಸಕ್ಕೆ ಸಹಕಾರಿಯಾಗಿದ್ದು ಮಕ್ಕಳ ಬದುಕಿನ ದಾರಿಗೆ ನೆರವಾಗುತ್ತಿದೆ. ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಹಾಗೂ ಪೋಷಕರ ವೃಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು.

ಜನಜಾಗೃತಿ ವೇದಿಕೆ ಕಡಬ ಇದರ ಅಧ್ಯಕ್ಷರಾದ ವಕೀಲ ಮಹೇಶ್ ಕೆ ಸವಣೂರು ಮಾತನಾಡಿ , ನಮ್ಮೂರಿನ ಕ್ರಿಯಾಶೀಲ ಶಾಲೆ ಪುಣ್ಚಪ್ಪಾಡಿಯು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಕ್ರಿಯಾಶೀಲರಾಗಿ ಬೆಳೆಯಬೇಕು ಎಂದರು.  ಸವಣೂರು ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಜಯಂತ ವೈ ಮಾತನಾಡಿ ಪುಣ್ಚಪ್ಪಾಡಿ ಶಾಲೆಯು ಸವಣೂರು ಕ್ಲಸ್ಟರ್‌ನ  ಅತ್ಯುತ್ತಮ ಶಾಲೆಯಾಗಿದ್ದು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಡೆಸಿದಂತಹ ಬಣ್ಣಾಯಣ  ಶಿಬಿರವು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ್ ಮಾತನಾಡಿ ಶತಮಾನೋತ್ಸವದ ಅಂಚಿನಲ್ಲಿರುವ ನಮ್ಮ ಶಾಲೆಯು ಈಗಾಗಲೇ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಊರವರ ಸಹಕಾರವನ್ನು ನೆನಪಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಸಮಾಜಸೇವಕ ಕೃಷಿಕ ಗಿರಿಶಂಕರ ಸುಲಾಯ ಮಾತನಾಡಿ ಶಿಬಿರದಲ್ಲಿ ಕಲಿತ ಎಲ್ಲಾ ವಿಷಯಗಳನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲೆಯು ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ 100 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶೇಷವಾಗಿ ಆಚರಿಸಲು ಅಣಿಯಾಗಿದೆ ಎಂದರು.  

ಸಂಪನ್ಮೂಲ ವ್ಯಕ್ತಿ ಡಾ. ಪವಿತ್ರ ರೂಪೇಶ್ ಮಾತನಾಡಿ ಪುಣ್ಚಪ್ಪಾಡಿ ಶಾಲೆಯ ಮಕ್ಕಳ ಸಂಗೀತದಲ್ಲಿ ಇರುವ  ಆಸಕ್ತಿ ನನಗೆ ಬಹಳ ಇಷ್ಟವಾಯಿತು. ಸಂಗೀತವು ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು  ಹೇಳಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಗಿರಿಶಂಕರ ಸುಲಾಯ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಕನ್ನಡ ಶಾಲೆ ಉಳಿಸಿ ಅಭಿಯಾನದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಾಲಾ ಮುಖ್ಯಶಿಕ್ಷಕಿ ರಶ್ಮಿತಾ ಜೈನ್‌ರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು‌. ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಹೆಚ್.ಬಿ. ಶಾಲೆಗೆ ಗಡಿಯಾರ ಕೊಡುಗೆಯಾಗಿ ನೀಡಿದರು. 7ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಪ್ರದರ್ಶನ ಕವಾಟನ್ನು ಕೊಡುಗೆಯಾಗಿ ನೀಡಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವಿಜಯ ಕುಚ್ಚೆಜಾಲು,  ಉಪಾಧ್ಯಕ್ಷರಾದ ಯಮುನಾ ಕೆ, ವಿದ್ಯಾರ್ಥಿ ನಾಯಕ ತನ್ವಿತ್ ಪಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಶಿಬಿರ ಯಶಸ್ವಿಯಾಗಿ ನಡೆಸಲು ಪೋಷಕರು, ಊರವರು ತನು, ಮನ, ಧನಗಳ ಸಹಕಾರವನ್ನು ನೀಡಿದರು.

ಶಾಲಾ ಮುಖ್ಯಗುರು ರಶ್ಮಿತಾ ಜೈನ್ ನರಿಮೊಗರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೋಭಾ ಕೆ ವಂದಿಸಿದರು. ಶಿಕ್ಷಕರಾದ ಭಾಗೀರಥಿ, ಲೀಲಾವತಿ, ಭವಾನಿ ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. 

ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ
ರಾಷ್ಟ್ರಮಟ್ಟದ ಸಾವಯವ ಕೃಷಿ ಹೋರಾಟಗಾರ ಹಿರಿಯ ಕೃಷಿಕ ಶ್ರೀ ಹರಿಕೃಷ್ಣ ಕಾಮತ್ ಮುಡಿಪಿನಡ್ಕ ಬೆಳಗ್ಗಿನ ಅವಧಿಯಲ್ಲಿ ಮಕ್ಕಳೊಂದಿಗೆ ಹಾಗೂ ಪೋಷಕರೊಂದಿಗೆ ನೀರು ಮಣ್ಣು ಹಸಿರಿನ ರಕ್ಷಣೆಯ  ಬಗ್ಗೆ ಮಾತನಾಡಿದರು. ಮಣ್ಣನ್ನು ಹೇಗೆ ಸಂರಕ್ಷಿಸುವುದು, ಸಾವಯವ ಕೃಷಿಯನ್ನು ನಿರ್ವಹಿಸುವುದು , ದಿನನಿತ್ಯ ಉಪಯೋಗಿಸುವ ಪದಾರ್ಥಗಳಿಂದ ನಮ್ಮ ದೇಹಕ್ಕೆ ಸೇರುವ ವಿಷದಿಂದ ಕಾಪಾಡುವ ಕುರಿತು, ಪ್ರಕೃತಿಯನ್ನು ಉಳಿಸುವುದರ ಕುರಿತಾಗಿ ಮಾತನಾಡಿ  ಜಾಗೃತಿಯನ್ನು ಮೂಡಿಸಿದರು.

ನಾಲ್ಕು ದಿನಗಳ ಕಾಲ ನಡೆದ ಬಣ್ಣಾಯಣ ಮಕ್ಕಳ ಸಂತಸ ಕಲಿಕಾ ಸಂಭ್ರಮ ಶಿಬಿರದ ರಂಗದಾಟದಲ್ಲಿ ಉದಯ್ ಸಾರಂಗ್ ರಂಗಕರ್ಮಿ ಪೆರ್ಲ ಮಕ್ಕಳಿಗೆ ರಂಗ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಹಾಡಿನಾಟದಲ್ಲಿ ಸಂಗೀತ ವಿದುಷಿ ಡಾ. ಪವಿತ್ರ ರೂಪೇಶ್ ಬೇರೆ ಬೇರೆ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಮಣ್ಣಿನಾಟದಲ್ಲಿ ಶ್ರೀ ಪದ್ಮನಾಭ ಮಾದಕಟ್ಟೆ ಹಿರಿಯ ಕಲಾವಿದರು ವಿಟ್ಲ ಮಣ್ಣಿನಲ್ಲಿ ವಿವಿಧ ಕಲಾಕೃತಿಗಳನ್ನು ಮಾಡುವುದನ್ನು ಹಾಗೂ ಕಸದಿಂದ ರಸ ಪರಿಕಲ್ಪನೆಯಲ್ಲಿ ಪೇಪರ್ ಬ್ಯಾಗುಗಳನ್ನು ಮಾಡುವುದರ ತರಬೇತಿ ನೀಡಿದರು. ಬಣ್ಣದಾಟದಲ್ಲಿ ಶ್ರೀ ರಂಜಿತ್ ಕೆಎಂ ಕುಂಬ್ರ ಚಿತ್ರಕಲಾ ಶಿಕ್ಷಕರು ಆಕರ್ಷಕ ಕ್ರಾಫ್ಟ್ ಹಾಗೂ ಚಿತ್ರಕಲೆಗಳ ತರಬೇತಿ ನೀಡಿದರು. 
ಮಕ್ಕಳು ಶಿಬಿರದಲ್ಲಿ ಮಾಡಿದ ವಿವಿಧ ಮಣ್ಣಿನ ಕಲಾಕೃತಿಗಳು ಕ್ರಾಫ್ಟ್ ಗಳು ಮತ್ತು ಚಿತ್ರಕಲೆಗಳನ್ನು ಶಾಲೆಯಂಗಳದಲ್ಲಿ ಪ್ರದರ್ಶಶಿಸಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here