






ಈಶ್ವರಮಂಗಲ: ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಕೋಟಿ ರಾಮತಾರಕ ನಾಮ ಯಜ್ಞದ ಬಳಿಕ ಕಾಂಚಿ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.


ಅನೇಕ ಮಂತ್ರಗಳಂತೆ ಶ್ರೀರಾಮನ ಮಂತ್ರವೂ ಇದ್ದು, ಅದನ್ನು ತಾರಕನಾಮ ಎಂದು ಕರೆಯಲಾಗುತ್ತದೆ ಎಂದು ಹೇಳಿದರು. ರಾಮನಾಮ ಸಂಕೀರ್ತನೆ ಹಾಗೂ ಜಪ ಮಾಡುವವರಿಗೆ ಉತ್ಕೃಷ್ಟ ಫಲ ದೊರೆಯುತ್ತದೆ. ಇದರಿಂದ ಸ್ವರ್ಗಪ್ರಾಪ್ತಿಯೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಮಸ್ತ ಹಿಂದೂ ಸಮಾಜವು ಸರಳ ಹಾಗೂ ಸುಲಭವಾಗಿರುವ ಶ್ರೀರಾಮ ತಾರಕನಾಮ ಜಪವನ್ನು ಮಾಡಬೇಕು ಎಂದು ಕರೆ ನೀಡಿದರು.



ನಾವು ಹಿಂದೂವಾಗಿ ಹುಟ್ಟಿರುವುದು ನಮ್ಮ ಪುಣ್ಯ. ಹಿಂದೂಗಳು ಬೇರೆ ಧರ್ಮಕ್ಕೆ ಹೋಗಬಾರದು. ಪವಿತ್ರ ಹಿಂದೂ ಧರ್ಮದಲ್ಲೇ ಉಳಿದು ಬದುಕಬೇಕು. ಸದಾ ದೇಶದ ಪರವಾಗಿರಬೇಕು ಎಂದು ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರವು ಐದು ಮುಖಗಳನ್ನು ಹೊಂದಿದ್ದು, ಈ ಸನ್ನಿಧಿಯಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ. ಅಲ್ಲದೇ ಅಯೋಧ್ಯೆಯಿಂದ ಶ್ರೀರಾಮ ಹಾಗೂ ಆಂಜನೇಯರು ಜ್ಯೋತಿ ರೂಪದಲ್ಲಿ ಶ್ರೀಕ್ಷೇತ್ರದಲ್ಲಿ ಉಪಸ್ಥಿತರಿದ್ದಾರೆ ಎಂದು ಹೇಳಿದರು.
ಇದೇ ವೇಳೆ 13 ಸಾವಿರ ಮಂದಿಗೆ ರಾಮನಾಮ ಮಂತ್ರ ದೀಕ್ಷೆ ನೀಡಲಾಗಿದೆ. ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ಶ್ರೀರಾಮ ತಾರಕನಾಮವು ಪರಿವರ್ತನೆಯ ವಿಶಿಷ್ಟ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು. ಅಲ್ಲದೆ, ವಾಲ್ಮೀಕಿ ಮುನಿಯ ಪೌರಾಣಿಕ ಕಥೆಯನ್ನು ಉಲ್ಲೇಖಿಸಿ ರಾಮನಾಮದ ಶಕ್ತಿಯನ್ನು ಭಕ್ತರಿಗೆ ವಿವರಿಸಿದರು.
ವ್ಯಕ್ತಿಗಳಲ್ಲಿ ತಾತ್ವಿಕ ಶಕ್ತಿ ತುಂಬಿದರೆ ಸಮಾಜ ಹಾಗೂ ಜಗತ್ತು ಪರಿವರ್ತನೆಯಾಗಲಿದೆ. ಶ್ರೀಕ್ಷೇತ್ರದಲ್ಲಿ 13 ಸಾವಿರ ಮಂದಿ ರಾಮನಾಮ ದೀಕ್ಷೆ ಪಡೆದಿರುವುದರಿಂದ 13 ಸಾವಿರ ಮಂದಿಯ ಜೀವನ ಪರಿವರ್ತನೆಯಾದಂತಾಗಿದೆ ಎಂದು ಅವರು ಹೇಳಿದರು. ಹನುಮಗಿರಿ ಕ್ಷೇತ್ರವು ಇನ್ನಷ್ಟು ಬೆಳೆಯಲಿ ಎಂದು ಹೇಳಿದರು.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದ ಶ್ರೇಯಸ್ಸಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು. ಲೋಕಕಲ್ಯಾಣಕ್ಕಾಗಿ ನಡೆಯುವ ಧಾರ್ಮಿಕ ಕಾರ್ಯಗಳಿಂದ ದೇಶಕ್ಕೂ ಸುಭಿಕ್ಷೆ ಲಭಿಸುತ್ತದೆ. ಋಷಿ-ಮುನಿಗಳು ಹಾಗೂ ತಪಸ್ವಿಗಳ ಕಾರಣದಿಂದ ಭಾರತಭೂಮಿಗೆ ನೈಪುಣ್ಯತೆ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಕೋಟಿ ರಾಮತಾರಕ ನಾಮ ಯಜ್ಞದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು









