ಪುತ್ತೂರು ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಗೇರು ಕೃಷಿಕರ ಸಮ್ಮಿಲನ

0

ಬ್ರ್ಯಾಂಡಿಂಗ್‌ಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು- ಎಸ್.ಆರ್.ಸತೀಶ್ಚಂದ್ರ
ಗೇರು ಬೆಳೆಗಾರರಿಗೆ ಸಂಘ ಅನಿವಾರ್ಯವಾಗಿದೆ- ನನ್ಯ ಅಚ್ಯುತ ಮೂಡೆತ್ತಾಯ
ನಮ್ಮ ಸಂಘ ಈಗ ಅಂಬೆಗಾಲಿಡುತ್ತಿದೆ- ಗಂಗಾಧರ ನಾಯಕ್

ಪುತ್ತೂರು: ಪುತ್ತೂರು ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗೇರು ಕೃಷಿಕರ ಸಮ್ಮಿಲನ ಸಮಾರಂಭ ಎ.18ರಂದು ಮುಕ್ರಂಪಾಡಿ ಸ್ಯಾನ್ ತೋಮ್ ಗುರುಮಂದಿರದ ಹಿಂಬದಿಯ ರಾಜಾಪುರ ಕಂಪೌಂಡ್‌ನಲ್ಲಿ ನಡೆಯಿತು.

ಬ್ರ್ಯಾಂಡಿಂಗ್‌ಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು:
ಮುಖ್ಯ ಅತಿಥಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರರವರು ಪುತ್ತೂರು ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನೂತನ ಜಾಲತಾಣ ಲೋಕಾರ್ಪಣೆಗೊಳಿಸಿ ಮಾತನಾಡಿ ಯಾವುದೇ ಸಂಘ ಆರಂಭವಾಗಲು ಮೊದಲು ಕಷ್ಟ. ಮತ್ತೆ ಆದು ಅದ್ಭುತವಾಗಿ ಬೆಳೆಯುತ್ತದೆ. ಬೇರೆ ಬೇರೆ ಹಂತ ದಾಟಿ ಇಂದು ಸಂಘ ನೂತನ ಪದಾಧಿಕಾರಿಗಳೊಂದಿಗೆ ಮುನ್ನಡೆಯಲಿದೆ ಎಂದರು. ಎನ್‌ಆರ್‌ಸಿಸಿ ಸಂಸ್ಥೆ ಗೇರು ಬೇಳೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ರೈತರಿಗೆ ಗೇರು ಬೆಳೆಯ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕು. ಇವತ್ತು ಸಾಧನೆ ಮಾಡಲು ಅದ್ಭುತ ಅವಕಾಶಗಳಿವೆ. ಸಂಶೋಧನೆ ನಿರಂತರ ಇರಬೇಕು. ಮೌಲ್ಯವರ್ಧಿತ ಉತ್ಪನ್ನಗಳು ಬರಬೇಕು. ಉತ್ಪಾದನೆಯಲ್ಲಿ ಗುಣಮಟ್ಟ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಇದ್ದರೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯ. ಆದುದರಿಂದ ಬ್ರ್ಯಾಂಡಿಂಗ್‌ಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು ಎಂದ ಅವರು ಕ್ಯಾಂಪ್ಕೋದಿಂದಲೂ ಮುಂದಿನ ದಿನಗಳಲ್ಲಿ ಗೇರು ಖರೀದಿ ಮಾಡಲಾಗುವುದು. ಎಂದು ಹೇಳಿ ಶುಭಹಾರೈಸಿದರು.

ಗೇರು ಬೆಳೆಗಾರರಿಗೆ ಸಂಘ ಅನಿವಾರ್ಯವಾಗಿದೆ:
ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ 2020ರಲ್ಲಿ ಪುತ್ತೂರು ಅಖಿಲ ಭಾರತ ಗೇರು ಬೆಳೆಗಾರರ ಸಂಘ ಆರಂಭವಾಗಿದೆ. ಗೇರು ಬೆಳೆಗಾರರಿಗೆ ಸಂಘ ಅನಿವಾರ್ಯವಾಗಿದೆ. ಗೇರು ಕೃಷಿಯನ್ನು ಸುಲಭವಾಗಿ ಮಾಡಬಹುದು. ವೈಜ್ಞಾನಿಕವಾಗಿ ಕೃಷಿ ಮಾಡಿ. ಗೇರು ಕೃಷಿಯಲ್ಲಿ ಹಲವು ಸವಾಲುಗಳಿವೆ. ಸುಧಾರಿತ ತಂತ್ರಜ್ಞಾನ ಬಳಸಿ ಉತ್ತಮ ಕೃಷಿ ಮಾಡಬಹುದು ಸರಕಾರ ಕೂಡ ಪ್ರೋತ್ಸಾಹ ನೀಡಬೇಕು. ಇದಕ್ಕೆಲ್ಲ ಸಂಘದ ಅನಿವಾರ್ಯತೆ ಇದೆ. ಇದು ಬೆಳೆಗಾರರಿಗೆ ಶಕ್ತಿಯಾಗಲಿ ಎಂದರು.

ಸಂಘದ ನಿಯೋಜಿತ ಅಧ್ಯಕ್ಷ ಗಂಗಾಧರ ನಾಯಕ್‌ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ 2020ರಲ್ಲಿ ಸಂಘ ಸ್ಥಾಪನೆ ಆಗಿದೆ. ಬಳಿಕ ಕೊರೋನ ಕಾಲದ ಪರಿಣಾಮವಾಗಿ ಸಕ್ರಿಯವಾಗಿ ಸಂಘದ ಕಾರ್ಯನಿರ್ವಹಣೆ ಕಷ್ಟವಾಯಿತು. ಇಂದು ನಮ್ಮ ಸಂಘ ಚಿಕ್ಕ ಮಗುವಿನ ಹಂತದಲ್ಲಿದೆ. ಈಗ ತಾನೆ ಅಂಬೆಗಾಲಿಡುತ್ತಿದೆ ಎಂದರು. ಇಂದು ಗೇರು ಬೆಳೆ ನಿರ್ಲಕ್ಷ್ಯದಲ್ಲಿದೆ. ಗೇರು ಬೆಳೆಯಲ್ಲಿ ರೈತರಿಗೆ ನಿರಾಸಕ್ತಿ ಇದೆ. ಇದಕ್ಕೆ ಪ್ರೋತ್ಸಾಹ ಕೊಡಲು ಸಂಘ ಆರಂಭ ಮಾಡಿದ್ದೇವೆ ಎಂದರು.

ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಶ್ರೀಪಡ್ರೆ ಗೇರು ಹಣ್ಣಿನ ಮೌಲ್ಯವರ್ಧನೆ ಸಾಧ್ಯತೆ ಹಾಗೂ ಸವಾಲು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಳಿಕ ಕೃಷಿಕರೊಂದಿಗೆ ಸಂವಾದ ನಡೆಯಿತು. ನಿತ್ಯ ಫುಡ್ ಪ್ರಾಡಕ್ಟ್‌ನವರ ಗೇರು ಹಣ್ಣಿನ ಮೌಲ್ಯವರ್ಧಿತ ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಗೋಪಾಲಕೃಷ್ಣ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ವಿವೇಕ್ ಆಳ್ವ ವಂದಿಸಿದರು.

ನೂತನ ಪದಾಧಿಕಾರಿಗಳು
ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆದು ಪದಾಧಿಕಾರಿಗಳ ಘೋಷಣೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಗಂಗಾಧರ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ವಿವೇಕ್ ಆಳ್ವ ಹಾಗೂ ಕೋಶಾಧಿಕಾರಿಯಾಗಿ ದೇವಿಪ್ರಸಾದ್ ಕಲ್ಲಾಜೆರವರು ಆಯ್ಕೆಯಾದರು. ಉಳಿದಂತೆ ಸದಸ್ಯರುಗಳ ಆಯ್ಕೆ ನಡೆಸಲಾಯಿತು.

LEAVE A REPLY

Please enter your comment!
Please enter your name here