ಬೆಟ್ಟಂಪಾಡಿ ಶ್ರಿಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಲೋಗೋ, ವಿಜ್ಞಾಪನಾ ಪತ್ರ ಬಿಡುಗಡೆ-ಭಕ್ತಾದಿಗಳಿಂದ ಶ್ರಮದಾನ

0

ಉತ್ತಮ ರೀತಿಯಲ್ಲಿ ಬ್ರಹ್ಮಕಲಶ ನಡೆಯಬೇಕು- ಅಶೋಕ್ ಕುಮಾರ್ ರೈ

ಪುತ್ತೂರು: 2027ರ ಫೆಬ್ರವರಿಯಲ್ಲಿ ನಡೆಯಲಿರುವ ಬೆಟ್ಟಂಪಾಡಿ ಶ್ರಿಮಹಾಲಿಂಗೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪ್ರಯುಕ್ತ ಕ್ಷೇತ್ರದ ದಕ್ಷಿಣ ಭಾಗದ ಗೋಪುರ ತೆರವುಗೊಳಿಸುವ ಬಗ್ಗೆ ಭಕ್ತಾದಿಗಳಿಂದ “ಈಶ ಸೇವೆ” ಶ್ರಮದಾನ ಹಾಗೂ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ ಸಮಾರಂಭ ಎ.19ರಂದು ನಡೆಯಿತು.


ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು 2013ರಲ್ಲಿ ನಡೆದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಯಾವಾಗಲೂ ನೆನಪಿನಲ್ಲಿ ಉಳಿಯುವಂತಹ ರೀತಿಯಲ್ಲಿ ನಡೆದಿದೆ. ಬ್ರಹ್ಮಕಲಶದ ಕಾರಣದಿಂದ ನಾನು ಈ ಪ್ರದೇಶಕ್ಕೆ ಚಿರಪರಿಚತನಾಗಿದ್ದೇನೆ. 12 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರ ಅಣಿಯಾಗುತ್ತಿದೆ. ಇದರ ಅಂಗವಾಗಿ ಇಂದು ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆಯಾಗಿದೆ. ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಇದಕ್ಕೆ ಪೂರಕವಾದ ಎಲ್ಲಾ ಕೆಲಸಗಳು ನಡೆಯಬೇಕು, ಭಕ್ತಾದಿಗಳಿಂದ ನಡೆದ ವಾಗ್ದಾನಗಳು ಕೂಡ ನೀಡುವಂತಹ ಕಾರ್ಯ ಆಗಬೇಕು. ಉತ್ತಮ ರೀತಿಯಲ್ಲಿ ಬ್ರಹ್ಮಕಲಶ ನಡೆಯಬೇಕು. ದಿನಕ್ಕೆ 10 ಸಾವಿರ ಮಂದಿಗೆ ಅನ್ನಸಂತರ್ಪಣೆ ನಡೆಯುವಂತೆ ಆಗಬೇಕು ಎಂದ ಅವರು ನನ್ನಿಂದ ಏನು ಕೆಲಸ ಆಗಬೇಕೋ ಅದನ್ನು ಮಾಡಿಕೊಡುತ್ತೇನೆ. ಪಕ್ಷಾತೀತವಾಗಿ, ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ ಎಂದರು.


ಬ್ರಹ್ಮಕಲಶೋತ್ಸವದ ರಶೀದಿ ಪುಸ್ತಕ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ ಮಾತನಾಡಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯ ತಾಲೂಕಿನಲ್ಲಿ ಪ್ರಸಿದ್ಧವಾದ ಹಾಗೂ ಕಾರಣಿಕತೆಯ ಕ್ಷೇತ್ರವಾಗಿದೆ. ಮುಂದಿನ ವರ್ಷ ನಡೆಯಲಿರುವ ಬ್ರಹ್ಮಕಲಶೋತ್ಸವ ವಿಜ್ರಂಭಣೆಯಿಂದ ನಡೆಯಲಿ ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಧಾರ್ಮಿಕ ಪರಿಷತ್‌ನಿಂದ ರೂ.5 ಲಕ್ಷ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.

ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಯೋಗೀಶ್ ಮಣಿಯಾಣಿ ತಲೆಪ್ಪಾಡಿ, ಅರುಣ್ ಕುಮಾರ್ ರೈ ಮದಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಕ್ತಾದಿಗಳು ಭಾಗವಹಿಸಿದ್ದರು.

ಭಕ್ತಾದಿಗಳಿಂದ “ಈಶಸೇವೆ”
ದೇವಾಲಯದ ಅಭಿವೃದ್ಧಿ ಕಾರ್ಯಗಳ ಅಂಗವಾಗಿ ನೂತನವಾಗಿ ದಕ್ಷಿಣಾಗೋಪುರ ನಿರ್ಮಾಣವಾಗಲಿದ್ದು ಶಿಥಿಲಾವಸ್ಥೆಯಲ್ಲಿದ್ದ ಈ ಗೋಪುರವನ್ನು ತೆರವುಗೊಳಿಸುವ ಬಗ್ಗೆ ಭಕ್ತಾದಿಗಳಿಂದ “ಈಶಸೇವೆ” ಹೆಸರಿನಲ್ಲಿ ಶಿವಸ್ಮರಣೆಯಲ್ಲಿ ಶ್ರಮದಾನ ಕಾರ್ಯ ನಡೆಯಿತು. ಸುಮಾರು ೨೦೦ಕ್ಕೂ ಮಿಕ್ಕಿ ಭಕ್ತಾದಿಗಳಿಂದ ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ ತನಕ ಗೋಪುರ ತೆರವುಗೊಳಿಸುವ ಕಾರ್ಯ ನಡೆಯಿತು. ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಗಣಪತಿ ಭಟ್ ಕೋನಡ್ಕ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಅನ್ನದಾನ ಸೇವೆ ನಡೆಯಿತು.

ಆಕರ್ಷಕವಾದ ನೂತನ ಲೋಗೋ(ಲಾಂಛನ)
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನೂತನ ಆಕರ್ಷಕ ಲೋಗೋ(ಲಾಂಛನ)ವನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು. ನೂತನ ಲೋಗೋವನ್ನು ಪ್ರೇಮ್ ರಾಜ್ ಆರ್ಲಪದವು ಹಾಗೂ ರಂಜಿತ್ ತೆಲಪ್ಪಾಡಿ ಇವರು ವಿನ್ಯಾಸಗೊಳಿಸಿ ಡಿಜಿಟಲ್ ಸ್ಪರ್ಶ ನೀಡಿದ್ದಾರೆ. ಲಾಂಛನದಲ್ಲಿ ಲಿಂಗರೂಪದಲ್ಲಿರುವ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವರು, ಡಮರುಗ ಸಹಿತ ತ್ರಿಶೂಲ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹಾಗೂ ಹಿನ್ನಲೆಯಲ್ಲಿ ದೇವಾಲಯದ ಚಿತ್ರ ಒಳಗೊಂಡಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here