






ಟೀಕೆ ಆರೋಪಗಳಿಗೆ ಕಿವಿಯಾಗದೆ ನಾಳೆಯಿಂದಲೇ ದೇವಳದ ಅಭಿವೃದ್ಧಿ ಕಾರ್ಯ ಪುನರಾರಂಭ


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈ ವರ್ಷದ ಜಾತ್ರೋತ್ಸವವು ಶ್ರೀ ದೇವರ ಆಶೀರ್ವಾದದಿಂದ ದೇವಳದ ತಂತ್ರಿ ರವೀಶ ತಂತ್ರಿಯವರು ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಅರ್ಚಕವೃಂದ, ಪರಿಚಾರಕರು, ಸಿಬ್ಬಂದಿಗಳು, ಭಕ್ತರ ಸಹಕಾರದಿಂದ ಬಹಳ ಸಡಗರ ಸಂಭ್ರಮದಿಂದ ನಡೆದಿದೆ. ಈ ವರ್ಷದ ಜಾತ್ರೋತ್ಸವ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಜಾತ್ರೆಯಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದ್ದಾರೆ. ಈ ನಡುವೆ ಟೀಕೆ ಆರೋಪಗಳು ಇರುವುದು ಸಹಜ. ಅದಕ್ಕೆ ಕಿವಿಯಾಗದೆ ನಾಳೆಯಿಂದಲೇ ದೇವಳದ ಜೀರ್ಣೋದ್ದಾರ ಅಭಿವೃದ್ಧಿ ಕಾರ್ಯಗಳು ಪುನರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.



ಜಾತ್ರೋತ್ಸವದಲ್ಲಿ 3 ಲಕ್ಷಕ್ಕಿಂತಲೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಪ್ರತಿ ದಿನ ಬಗೆ ಬಗೆಯ ಉಪಹಾರ, ರಾತ್ರಿಯೂ ಅನ್ನಪ್ರಸಾದ ಮತ್ತು ರಥೋತ್ಸವದ ದಿನ ರಾತ್ರಿ 11 ಗಂಟೆಯ ತನಕವೂ ಅನ್ನಪ್ರಸಾದ ವಿತರಿಸಲಾಗಿದ್ದು, ಎಲ್ಲರಿಗೂ ಅನ್ನಪ್ರಸಾದ ತೃಪ್ತಿಯಾಗಿದೆ. ಪ್ರತಿ ದಿನ ಪಲ್ಲಪೂಜೆ, ಗೋ ಗ್ರಾಸ, ಮಸ್ತ್ಯಕ್ಕೆ ಅನ್ನಪ್ರಸಾದ, ರಕ್ತೇಶ್ವರಿಗೆ ನೈವೈದ್ಯ ನೀಡುವ ಮೂಲಕ ಅನ್ನಪ್ರಸಾದ ಯಶಸ್ವಿಯಾಗಿದೆ. ಇನ್ನು ದೇವಳಕ್ಕೆ ಎಸ್.ಎಲ್.ವಿ.ಯ ದಿವಾಕರದಾಸ್ ದೇರ್ಲಾಜೆ ಸೇವೆಯಾಗಿ ಹೂವಿನ ಅಲಂಕಾರ ಮಾಡಿಸಿರುವುದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಅದ್ಭುತವಾಗಿ ಮೂಡಿ ಬಂದಿದೆ. ಒಟ್ಟು ಜಾತ್ರೋತ್ಸವದಲ್ಲಿ ಇತಿಹಾಸದಲ್ಲೇ ಇಷ್ಟೊಂದು ಭಕ್ತರು ಸೇರಿರಲಿಲ್ಲ ಎಂಬುದು ಭಕ್ತರೇ ತಿಳಿಸಿದ್ದಾರೆ.
ಅವಭೃತ ಸ್ನಾನಗಟ್ಟದಲ್ಲಿ ಸುಸಜ್ಜಿತ ವ್ಯವಸ್ಥೆ:
ಅವಭೃತ ಸ್ನಾನಗಟ್ಟದಲ್ಲಿ ಶೌಚಾಲಯದ ವ್ಯವಸ್ಥೆ, ವಿಶಾಲವಾದ ಮೈದಾನ ಮಾಡಿದ್ದೇವೆ. ಭಕ್ತರಿಗೆ ಬರುವಾಗ ಬಸ್ನ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದ್ದಾರೆ.
ಶ್ರೀ ದೇವರ ಸವಾರಿಯಲ್ಲಿ 9.95 ಲಕ್ಷ ರೂಪಾಯಿ ಭಂಡಾರಕ್ಕೆ
ಪ್ರತಿ ದಿನ ಶ್ರೀ ದೇವರು ಸವಾರಿಯಲ್ಲಿ ಭಕ್ತರು ನೀಡಿ ಕಾಣಿಕೆ ಒಟ್ಟು ರೂ. 9.95,433 ಲಕ್ಷ ಭಂಡಾರಕ್ಕೆ ಸೇರಿದೆ. ಬಟ್ಟಲು ಕಾಣಿಕೆಯಲ್ಲಿ ರೂ. 5,17,979 ಸಂಗ್ರಹವಾಗಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಕಾಣಿಕೆ ಜಾಸ್ತಿ ಬಿದ್ದಿದೆ. ಸೇವಾ ರಶೀದಿಯಲ್ಲೂ ಹೆಚ್ಚಾಗಿದೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.
ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ:
ಈ ಹಿಂದಿನಿಂದಲೇ ಕೆಲವೊಂದು ಟೀಕೆಗಳು ಬರುತ್ತಾ ಇದೆ. ಕೆಲವು ಮಂದಿ ತನ್ನ ರಾಜಕೀಯ ಲಾಭಕ್ಕಾಗಿ ದೇವಸ್ಥಾನವನ್ನು ಬಲಿಕೊಡುತ್ತಾರೆ. ಇನ್ನೂ ಕೆಲವರು ತಾವು ಶೈನ್ ಆಗಲು ಮೊಬೈಲ್ ಮತ್ತಿತರ ರೀತಿಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಜಾತ್ರೆ ಗದ್ದೆಯ ಏಲಂ ವಿಚಾರದಲ್ಲೂ ವಿವಿಧ ಆರೋಪ ಮಾಡುತ್ತಾರೆ. ಆದರೆ ಕಳೆದ 10 ವರ್ಷಗಳಿಂದಲೂ ಏಲಂನಲ್ಲೂ ಹೋಗದ ಜಾಗವನ್ನು ನಾವು ನೀಡಿ ದೇವಸ್ಥಾನಕ್ಕೆ ಭಂಡಾರಕ್ಕೆ ಹಣ ಮಾಡಿಕೊಟ್ಟಿದ್ದೇವೆ. ಗೋ ಶಾಲೆಯ ಬಳಿ ಅಂಗಡಿ ನೀಡಿದ್ದು ಜಾತ್ರೆಯ ಮೊದಲು. ಆದರೆ ಜಾತ್ರೆಯ ಸಂದರ್ಭ ಅವರು ಪ್ರತಿ ದಿನ ರೂ. 10ಸಾವಿರ ದೇವಳದ ಭಂಡಾರಕ್ಕೆ ನೀಡುತ್ತಿದ್ದರು. ಇಷ್ಟೆಲ್ಲ ಮಾಡುವುದು ಈಶ್ವರ ಭಟ್ ಅವರ ಮನೆಗಲ್ಲ. ದೇವಳದ ಭಂಡಾರಕ್ಕೆ ಎಂದು ಹೇಳಿದ ಈಶ್ವರ ಭಟ್ ಅವರು ಈಗಾಗಲೇ ದೇವಸ್ಥಾನಕ್ಕೆ ರೂ. 1 ಕೋಟಿಯಲ್ಲಿ ಜಾಗ ಖರೀದಿ ಮಾಡಿದ್ದೇವೆ. ಜಾಗ ನೀಡಿದವರಿಗೆ ಈಗಾಗಲೇ ಕೇವಲ ರೂ. 11ಲಕ್ಷ ಮಾತ್ರ ನೀಡಲಾಗಿದೆ. ಇನ್ನು ಉಳಿದ ಹಣ ಕೊಡಬೇಕು. ಇದರ ಜೊತೆಗೆ ಇನ್ನೂ 2 ಕೋಟಿ ರೂಪಾಯಿ ಜಾಗ ಖರೀದಿಸುತ್ತೇವೆ. ಅಯ್ಯಪ್ಪನ ಗುಡಿಗೆ ಜಾಗ ಖರೀದಿಸಿದ್ದೇವೆ. ಅವರಿಗೂ ಕೂಡಾ ರೂ. 10ಲಕ್ಷ ಮಾತ್ರ ನೀಡಿದ್ದು, ಇನ್ನು ಉಳಿದ ಹಣ ಕೊಡಬೇಕು. ಇಷ್ಟೆಲ್ಲ ಹಣವನ್ನು ನಾವು ಹೊಂದಾಣಿಕೆ ಮಾಡಬೇಕಾದರೆ ಭಕ್ತಾದಿಗಳ ಸಹಕಾರ ಮುಖ್ಯ. ನಾವು ಸಂತೆ ವ್ಯಾಪಾರಸ್ಥರ ತಲೆ ಒಡೆದು ದೇವಳದ ಭಂಡಾರಕ್ಕೆ ಹಣ ಸಂಗ್ರಹ ಮಾಡಿಲ್ಲ. ಪ್ರತಿಯೊಬ್ಬರನ್ನು ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಿದ್ದೇವೆ.
ಸಂತೆ ವ್ಯಾಪಾರದ ಏಲಂ ಹಣ ಭಂಡಾರಕ್ಕೆ ಸೇರುತ್ತದೆ ಹೊರತು ಈಶ್ವರ ಭಟ್ ಅವರ ಕಿಸೆಗೆ ಅಲ್ಲ:
ಸಂತೆ ವ್ಯಾಪಾರದ ಏಲಂ ಹಣ ಭಂಡಾರಕ್ಕೆ ಸೇರುತ್ತದೆ ಹೊರತು ಈಶ್ವರ ಭಟ್ ಅವರ ಕಿಸೆಗೆ ಅಲ್ಲ, ಇದರ ಜೊತೆಗೆ ಕೆಲವರು ಅಲ್ಲಲ್ಲಿ ಕೂತು ವ್ಯಾಪಾರ ಮಾಡುವಾಗ ಅವರಲ್ಲಿ ನೂರು ಇನ್ನೂರು ರೂಪಾಯಿ ಸಂಗ್ರಹವನ್ನು ಮಾಡಿದ್ದು, ದೇವಳದ ವತಿಯಿಂದ ಭಂಡಾರಕ್ಕೆ ಸೇರುತ್ತದೆ ಹೊರತು ಈಶ್ವರ ಭಟ್ ಅವರ ಕಿಸೆಗೆ ಹೋಗುವುದಿಲ್ಲ ಎಂದು ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ನಾನು ಗ್ರಹಿಸಿದಂತೆ ಪಟಾಕಿ ಒಡೆದಿಲ್ಲ:
ನಾವು ಭಕ್ತರಿಂದ ಸಿಡಿಮದ್ದು ಎಂದು ಹೇಳಿ ಕಳೆದ ಸಲ ರೂ. 9 ಲಕ್ಷಕ್ಕೆ ಮಾತುಕತೆ ಮಾಡಿದ್ದೆವು. ಇದರಿಂದ ದೇವಸ್ಥಾನಕ್ಕೆ ಸಿಡಿಮದ್ದಿನ ಹಣ ಉಳಿದಿದೆ. ಈ ವರ್ಷವೂ ನಮ್ಮವರೆಂದು ನಂಬಿ ಸಿಡಿಮದ್ದಿಗೆ ಅವಕಾಶ ನೀಡಿದ್ದೆ. ಆದರೆ ಬಿಳಿ ಇದ್ದದು ಹಾಲು ಎಂದು ಅದು ಕಹಿ ಹಾಲು ಎಂದು ನನಗೆ ಗೊತ್ತಾಗಿದ್ದು ಪಟಾಕಿ ಒಡೆದ ಬಳಿಕ. ನಾನು ಗ್ರಹಿಸಿದಂತೆ ಪಟಾಕಿ ನಿಜವಾಗಿಯೂ ಒಡೆದಿಲ್ಲ. ಅದು ನನಗೆ ಗೊತ್ತಾಗಿದೆ. ಅದು ನನಗೆ ಒಂದು ಸೋಲೆ. ಆದರೆ ಅಲ್ಲಿ ಪಟಾಕಿ ಸುತ್ತ ಬೇಲಿ ಹಾಕಿಸಿದ್ದೇನೆ. ಅಗ್ನಿಶಾಮಕದಳದವರನ್ನು ನಿಲ್ಲಿಸಿದ್ದೇನೆ. ಆದರೂ ಕೆಲವರು ಹತ್ತಿರ ಹೋಗಿ ಪೊಟೋ ತೆಗೆದು ಗಾಯಾ ಆಗಿದೆ. ಇದು ಬಹಳ ಬೇಸರ ಆಗಿದೆ. ಅವರಿಗೆ ನಮ್ಮಿಂದ ಏನು ಉಪಕಾರ ಬೇಕೋ ಅದನ್ನು ಮಾಡುತ್ತೇವೆ. ಸಿಡಿಮದ್ದು ಭಕ್ತರಿಗೆ ಹೇಗೆ ಬೇಕೋ ಹಾಗಿ ಮುಂದಿನ ದಿನ ಮಾಡುತ್ತೇವೆ. ಈ ಭಾರಿಯ ಸುಡುಮದ್ದು ಪ್ರದರ್ಶನಕ್ಕೆ ರೂ. 10ಲಕ್ಷಕ್ಕೆ ಮಾತುಕತೆ ಆಗಿದೆ. ಆದರೆ ಅವರಿಗೆ ರೂ. 10ಲಕ್ಷ ಕೊಡುವುದಿಲ್ಲ ಎಂದು ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ಭಕ್ತರೇ ದಾರಿ ಅಗಲೀಕರಣ ಮಾಡಿದ್ದು:
ಉಳ್ಳಾಲ್ತಿ ಅಮ್ಮನವರ ಭಂಡಾರ ಬರುವಲ್ಲಿ ಸರಿಯಾದ ದಾರಿ ಮಾಡಿಕೊಡುವಂತೆ ದೇವಸ್ಥಾನಕ್ಕೆ ಹಲವು ಮನವಿ ಬಂದಿದೆ. ಆದರೆ ನಾವು ಅದನ್ನು ನೋಡುವ ಮುಂದೆಯೇ ಭಕ್ತರೇ ಸೇರಿ ಕಿರಿದಾದ ಸ್ಥಳವನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ. ನಮಗೆ ಗೊತ್ತಾದ ಕೂಡಲೆ ನಾನು ಮಹಾಲಿಂಗೇಶ್ವರ ದೇವರಿಗೆ ತುಪ್ಪದ ದೀಪ ಬೆಳಗಿಸಿ ಯಾವುದೇ ಅಹಿತಕರ ಘಟನೆ ಆಗದಂತೆ ಪ್ರಾರ್ಥನೆ ಮಾಡಿ ಹೋಗಿ ಭಕ್ತರನ್ನು ಸಮಾಧಾನಿಸಿದ್ದೇನೆ. ಆ ಸ್ಥಳ ಖಾಸಗಿ ಆಗಿರಬಹುದು. ಆದರೆ ಆ ಸ್ಥಳಕ್ಕೆ ಮಹತ್ವವಿದೆ. ಮಹಾಲಿಂಗೇಶ್ವರ ದೇವರು ಉಳ್ಳಾಲ್ತಿ ಅಮ್ಮ ಭೇಟಿಯ ಸ್ಥಳ. ಉಳ್ಳಾಲ್ತಿ ಅಮ್ಮನವರ ಭಂಡಾರ ಬರುವ ಸಂದರ್ಭ ಅಲ್ಲಿ ಭಕ್ತರಿಂದ ಕೋಟಿಗಟ್ಟಲೆ ಮಲ್ಲಿಗೆ ಸಮರ್ಪಣೆ ಆಗುತ್ತದೆ. ಈ ಕುರಿತು ಜಾಗಕ್ಕೆ ಸಂಬಂಧಿಸಿದವರಲ್ಲಿ ಪೋನ್ನಲ್ಲಿ ಮಾತನಾಡಿದ್ದೇನೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.
ಭಕ್ತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ
ಪ್ರತಿಯೊಂದು ಮನೆಯಲ್ಲೂ ತಪ್ಪು ಆಗಿಯೇ ಆಗುತ್ತದೆ. ಹಾಗೆಂದು ಅದನ್ನು ಮೊಬೈಲ್ನಲ್ಲಿ ಹಾಕುವುದಿಲ್ಲ. ಅದೇ ರೀತಿ ದೇವಸ್ಥಾನ ಪ್ರತಿಯೊಬ್ಬ ಭಕ್ತರಿಗೆ ಸೇರಿದ್ದು, ಈಶ್ವರ ಭಟ್ ಅವರಿಗೆ ಮಾತ್ರ ಸೇರಿದ್ದು ಅಲ್ಲ. ಎಲ್ಲಾ ಭಕ್ತರಿಗೆ ದೇವಸ್ಥಾನದಲ್ಲಿ ಹಕ್ಕು ಇದೆ. ಲೆಕ್ಕ ಬೇಕಾದವರಿಗೆ ಕೊಡುತ್ತೇನೆ. ಆದರೆ ಸುಮ್ಮನೆ ಭಕ್ತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ.
ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ದೇವರ ಸವಾರಿಯಲ್ಲಿ ರೂ. 9.95ಲಕ್ಷ, ಬಟ್ಟಲು ಕಾಣಿಕೆಯಲ್ಲಿ ರೂ. 5.17ಲಕ್ಷ, ಜಾಯಿಂಟ್ ವೀಲ್ಹ್ ನಿಂದ ರೂ. 66ಲಕ್ಷ, ಸ್ಟಾಲ್ಗಳಿಂದ ರೂ. 69.28 ಲಕ್ಷ ದೇವಸ್ಥಾನದ ಭಂಡಾರಕ್ಕೆ ಜಮೆ. ಲೈಟಿಂಗ್ಸ್ಗೆ ಅತೀ ಕಡಿಮೆ ಬಿಡ್, ಭಕ್ತರಿಂದ ಸಿಡುಮದ್ದು ದೇವಳದ ಭಂಡಾರಕ್ಕೆ ಲಾಭ. ಏಲಂ ಆಗದ ಸ್ಥಳದಿಂದ ರೂ. 2ಲಕ್ಷ ದೇವಳಕ್ಕೆ ಲಾಭ. ಇವೆಲ್ಲ ದೇವಸ್ಥಾನದ ಭಂಡಾರಕ್ಕೆ ಹೊರತು ನನ್ನ ಮನೆಗೆ ಅಲ್ಲ.
ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು










