







ಪುತ್ತೂರು: ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಆಶಾಜ್ಯೋತಿ ಕೆ. ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ 27 ಮಂದಿಯ ಪೈಕಿ 17 ಮಂದಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.


ಘಟನೆಯ ವಿವರ:
2025ರ ಏಪ್ರಿಲ್ 25ರಂದು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಕೆ. ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದ ಆರೋಪಿಯನ್ನು ದಸ್ತಗಿರಿ ಮಾಡಿಲ್ಲ ಎಂದು ಆರೋಪಿಸಿ ಏ. 26ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಸಂಘಟನೆಗಳ ಸದಸ್ಯರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರು ರಸ್ತೆಯ ಮಧ್ಯದಲ್ಲಿ 1 ಗಂಟೆ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ಪೊಲೀಸರಿಗೆ ಧಿಕ್ಕಾರ ಘೋಷಣೆ ಕೂಗಿದ್ದಾರೆ. ಅಲ್ಲದೆ ಕರ್ತವ್ಯದಲ್ಲಿದ್ದ ಪೊಲೀಸರನ್ನು ಪ್ರತಿಭಟನಾಕಾರರಲ್ಲಿ ಕೆಲವರು ತಳ್ಳಿಕೊಂಡು ಸಮವಸ್ತ್ರಕ್ಕೆ ಕೈ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆಗಿನ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಮನೀಶ್, ಹೆಚ್, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಗೀತೇಶ್ ರೈ, ಕೆ.ಉದಯಕುಮಾರ್, ನರಸಿಂಹ ಶೆಟ್ಟಿ, ಪುನೀತ್ ಮಾಡತ್ತಾರು, ದಯಾನಂದ ಶೆಟ್ಟಿ, ಸುಜೀತ್ ಕುಮಾರ್, ಸಂತೋಷ್ ಕುಮಾರ್ ರೈ, ಸಚಿನ್, ಕೆ.ಅನಿಲ್‌ಕುಮಾರ್, ಎಂ.ರವಿ ರೈ, ಗಣೇಶ, ನಿತೀಶ್ ಪಿ., ನಾಗೇಶ್, ಭಾಮಿ ಜಗದೀಶ ಶೆಣೈ, ಬಿ.ಶೀನಪ್ಪ ಕುಲಾಲ್, ರಾಜೇಶ್ ಬನ್ನೂರು, ನಿತೀನ್ ಬಿ., ಸಂಜಯ್, ಗೌರಿ ಬನ್ನೂರು, ವಿದ್ಯಾ ಆರ್.ಗೌರಿ, ಸತೀಶ್ ನಾಯ್ ಮತ್ತು ಲೀಲಾವತಿ ಅವರ ವಿರುದ್ಧ ಕೇಸು ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ತಮ್ಮ ವಿರುದ್ಧದ ಪ್ರಕರಣ ರದ್ದು ಪಡಿಸಬೇಕು ಎಂದು ಕೋರಿ ಅಜಿತ್ ರೈ ಹೊಸಮನೆ, ದಿನೇಶ್ ಪಿ., ನರಸಿಂಹ ಶೆಟ್ಟಿ, ಪುನೀತ್ ಮಾಡತ್ತಾರು, ದಯಾನಂದ ಶೆಟ್ಟಿ, ಸಂತೋಷ್ ಕುಮಾರ್ ರೈ, ನಿತೇಶ್ ಪಿ., ನಾಗೇಶ್ ಟಿ.ಎಸ್., ಭಾಮಿ ಜಗದೀಶ್ ಶೇಣೈ, ಶೀನಪ್ಪ ಕುಲಾಲ್, ರಾಜೇಶ್ ಬನ್ನೂರು, ಬಿ.ಸಂಜೀವ ಗೌಡ, ಗೌರಿ ಹೆಚ್., ವಿದ್ಯಾ ಆರ್. ಗೌರಿ, ದೀಕ್ಷಾ ಪೈ, ಸತೀಶ್ ನಾಯ್ಕ ಮತ್ತು ಲೀಲಾವತಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಪುತ್ತೂರು ವಾದಿಸಿದ್ದರು. ಯುವ ನ್ಯಾಯವಾದಿ ಸುಯೋಗ್ ಹೇರಳೆ ಪುತ್ತೂರು ಅವರು ವಕಾಲತ್ತು ವಹಿಸಿದ್ದರು.













