







ಸಿಎಸ್ಆರ್ ಫಂಡ್ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕಂಪನಿಗಳಿಂದ ಪ್ರಾಮಾಣಿಕ ಪ್ರಯತ್ನ: ಕ್ಯಾ| ಬ್ರಿಜೇಶ್ ಚೌಟ


- 10 ಲಕ್ಷ ರೂ.ಅನುದಾನ; ಭಾಗೀರಥಿ ಮುರುಳ್ಯ ಭರವಸೆ
- ಸಾಮರಸ್ಯ, ಒಗ್ಗಟ್ಟಿಗೆ ಗೋಳಿತ್ತೊಟ್ಟು ಮಾದರಿ; ಕಿಶೋರ್ಕುಮಾರ್
- ಖಾಸಗಿ ಶಾಲೆಯಂತೆ ಬೆಳವಣಿಗೆ; ಕಿರಣ್ಚಂದ್ರ ಪುಷ್ಪಗಿರಿ
- ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ: ನವೀನ್ ಭಂಡಾರಿ
- ಸರಕಾರಿ ಶಾಲೆಗಳಲ್ಲಿ ಜೀವನ ಶಿಕ್ಷಣ; ವಿಷ್ಣುಪ್ರಸಾದ್ ಸಿ.
- *ಲಾಭದಲ್ಲಿ ಒಂದು ಭಾಗ ಸಾರ್ವಜನಿಕ ಸೇವೆಗೆ: ಪ್ರದೀಪ್ಕುಮಾರ್

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಗೋಳಿತ್ತಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ’ಶತಸಿರಿ’ ಶತಮಾನ ಸಂಭ್ರಮ 2026 ಹಾಗೂ ಶಾಲಾ ಶತಮಾನೋತ್ಸವ ಸವಿ ನೆನಪಿಗಾಗಿ ನಿರ್ಮಿಸಲಾದ ಶಾಲಾ ನೂತನ ಕಟ್ಟಡದ ಉದ್ಘಾಟನೆ ಏ.25ರಂದು ಬೆಳಗ್ಗೆ ನಡೆಯಿತು.




ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು, ಎನ್ಎಂಪಿಟಿ., ಎಂಆರ್ಪಿಎಲ್., ಪಾರಾದೀಪ್ ಫಾಸ್ಫೇಟ್ ಕಂಪನಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ವಿನಿಯೋಗ ಮಾಡುತ್ತಿವೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಈ ಕಂಪೆನಿಗಳಿಗೆ ಕೇಂದ್ರ ಸರಕಾರವು ದೊಡ್ಡ ಮಟ್ಟದ ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಈ ಕಂಪನಿಗಳು ಸಂಸದರು, ಶಾಸಕರ ಶಿಫಾರಸುನೊಂದಿಗೆ ಸಿಎಸ್ಆರ್ ಫಂಡ್ನ ಅನುದಾನ ಹಂಚಿಕೆ ಮಾಡಬೇಕು. ಆಗ ಅವಶ್ಯಕತೆ ಇರುವಲ್ಲಿಗೆ ಸಮಾನವಾಗಿ ಅನುದಾನ ಹಂಚಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತದೆ ಎಂದರು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಒಂದು ಕುಟುಂಬದಂತೆ ನಡೆಯುತ್ತಿದೆ. ಶಾಲೆಗಳಲ್ಲಿ ಸನಾತನ ಸಂಸ್ಕೃತಿಯ ಮೂಲವಾದ ಪ್ರೀತಿ, ಬಾಂಧವ್ಯ ಉಳಿಸಿ ಬೆಳೆಸಬೇಕು. ಮಕ್ಕಳ ಯೋಚನೆಗಳಿಗೆ ಬೆಂಬಲ ನೀಡಬೇಕು. 2047ರೊಳಗೆ ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ದೊಡ್ಡದಿದೆ ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.

10ಲಕ್ಷ ರೂ.ಅನುದಾನ;
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಸರಕಾರಿ ಶಾಲೆಗಳಿಗೆ ಸರಕಾರದಿಂದ ಕಿಂಚಿತ್ತು ಅನುದಾನ ಬಂದರೂ ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಸರಕಾರಿ ಶಾಲೆಗಳಿಗೆ ಅಂದಾಜು ೧ ಕೋಟಿ ರೂ.ಅನುದಾನ ಸಿಎಸ್ಆರ್ ಫಂಡ್ನಿಂದ ಲಭಿಸಿದೆ. ಗೋಳಿತ್ತಟ್ಟು ಶಾಲೆಗೆ 10 ಲಕ್ಷ ರೂ.ಅನುದಾನ ನೀಡುವುದಾಗಿ ಹೇಳಿದರು. ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಪೌಂಡೇಶನ್ ಇದ್ದಂತೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತಲ್ಲಿ ಮುಂದೆ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯವಿದೆ. ಆದ್ದರಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಹೇಳಿದರು.

ಸಾಮರಸ್ಯ, ಒಗ್ಗಟ್ಟಿಗೆ ಗೋಳಿತ್ತೊಟ್ಟು ಮಾದರಿ;
ಮಕ್ಕಳ ಕಥಾಸಂಕಲನ ’ಮಾತನಾಡುವ ಪುಸ್ತಕ’ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್ ಬಿ.ಆರ್., ಎಲ್ಲರೂ ಸಮಾನ ಮನಸ್ಕರಾಗಿ ಕೆಲಸ ಮಾಡಿದಾಗ ಶಾಲೆಯ ಬೆಳವಣಿಗೆ ಆಗಲಿದೆ ಎಂಬುದಕ್ಕೆ ಗೋಳಿತ್ತಟ್ಟು ಶಾಲೆ ಸಾಕ್ಷಿಯಾಗಿದೆ. ಸಾಮಾರಸ್ಯ, ಒಗ್ಗಟ್ಟಿಗೆ ಇಲ್ಲಿನ ಜನ ಮಾದರಿಯಾಗಿದ್ದಾರೆ. 100 ವರ್ಷಗಳ ಹಿಂದೆ ಶಾಲೆ ಆರಂಭಕ್ಕೆ ಜಾಗ ದಾನ ಮಾಡಿದ ದಾನಿಗಳಿಗೆ ಭಗವಂತ ಸನ್ಮಂಗಳ ಉಂಟು ಮಾಡಲಿ ಎಂದರು.

ಖಾಸಗಿ ಶಾಲೆಯಂತೆ ಬೆಳವಣಿಗೆ;
ಅತಿಥಿಯಾಗಿದ್ದ ಬೆಂಗಳೂರಿನ ಉದ್ಯಮಿ ಕಿರಣ್ಚಂದ್ರ ಪುಷ್ಪಗಿರಿ ಮಾತನಾಡಿ, ಸರಕಾರಿ ಶಾಲೆಯಾದರೂ ಇದು ಖಾಸಗಿ ಶಾಲೆಯಂತೆ ರಾರಾಜಿಸುತ್ತಿದೆ. ಪರಸ್ಪರ ವಿಶ್ವಾಸ, ನಂಬಿಕೆ ಇದ್ದಲ್ಲಿ ಯಾವುದೇ ಕೆಲಸಗಳೂ ಯಶಸ್ವಿಯಾಗಲಿದೆ. ಇಲ್ಲಿನ ಜನ ಜಾತಿ,ಮತ ಬೇಧವಿಲ್ಲದೆ ಸರಳತೆ, ಸಂಯಮದಿಂದ ತೊಡಗಿಕೊಂಡಿರುವುದರಿಂದಲೇ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ:
ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ, ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ೧೦೦ ವರ್ಷದ ಹಿಂದೆ ಶಾಲೆ ಸ್ಥಾಪನೆಗೆ ಜಾಗ ನೀಡಿ ಶಾಲೆ ಆರಂಭಿಸಿರುವುದರಿಂದ ಈ ಊರಿನ ನೂರಾರು ಮಂದಿ ವಿದ್ಯೆ ಕಲಿತ ದೊಡ್ಡ ಮಟ್ಟದ ಉದ್ಯೋಗ ಪಡೆಯುವಂತೆ ಆಗಿದೆ. ಗೋಳಿತ್ತೊಟ್ಟು ಕಡಬ ಹಾಗೂ ಪುತ್ತೂರು ತಾಲೂಕಿನ ಕೇಂದ್ರ ಭಾಗ. ಇಲ್ಲಿನ ಶಾಲೆಗೆ ಸುಂದರವಾದ ಕಟ್ಟಡ ನಿರ್ಮಾಣ ಆಗಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಿ ನಂ.೧ ಮಟ್ಟಕ್ಕೆ ಬೆಳೆಸಬಹುದು ಎಂಬುದಕ್ಕೆ ಈ ಶಾಲೆಯೇ ಸಾಕ್ಷಿ ಎಂದರು.

ಸರಕಾರಿ ಶಾಲೆಗಳಲ್ಲಿ ಜೀವನ ಶಿಕ್ಷಣ;
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ.ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಜೀವನ ಶಿಕ್ಷಣ ಕಲಿಸಲಾಗುತ್ತಿದೆ. ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪುತ್ತೂರು,ಕಡಬ ತಾಲೂಕಿ 22 ಸರಕಾರಿ ಶಾಲೆಗಳ ಪೈಕಿ 14 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಇದಕ್ಕೆಲ್ಲಾ ಪ್ರಾಥಮಿಕ ಹಂತದಲ್ಲಿ ಸರಕಾರಿ ಶಾಲೆಗಳಲ್ಲಿ ಸಿಕ್ಕಿರುವ ವಿದ್ಯೆಯೇ ಕಾರಣವಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆಯೊಂದಿಗೆ ಪೌಷ್ಠಿಕ ಆಹಾರವೂ ಸಿಗುತ್ತಿದೆ ಎಂದರು.
ಲಾಭದಲ್ಲಿ ಒಂದು ಭಾಗ ಸಾರ್ವಜನಿಕ ಸೇವೆಗೆ:
ಎಂಆರ್ಪಿಎಲ್ ಸಂಸ್ಥೆಯ ಆಪರೇಷನ್ ವಿಭಾಗದ ಮೇನೇಜರ್ ಪ್ರದೀಪ್ಕುಮಾರ್ ಮಾತನಾಡಿ, ಎಂಆರ್ಪಿಎಲ್ ಕಂಪನಿಗೆ ಬರುವ ಲಾಭಾಂಶದಲ್ಲಿ ಒಂದು ಭಾಗವನ್ನು ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಪ್ರಕೃತಿ ಮತ್ತು ಬಹುಜನ ಅಭಿವೃದ್ಧಿ ಎಂಬ ಸಾರ್ವಜನಿಕ ಸೇವೆಗಳಿಗೆ ವಿನಿಯೋಗಿಸಲಾಗುತ್ತಿದೆ. ಜನರು ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಮಾಜಿ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಬಜತ್ತೂರು ಕ್ಲಸ್ಟರ್ ಸಿಆರ್ಪಿ ಮಂಜುನಾಥ ಕೆ.ವಿ., ನೆಲ್ಯಾಡಿ ಕ್ಲಸ್ಟರ್ ಸಿಆರ್ಪಿ ಪ್ರಕಾಶ್ ಬಾಕಿಲ, ಶಾಲಾ ಶತಮಾನೋತ್ಸವ ಅಭಿವೃದ್ಧಿ ಸಮಿತಿ ಸಂಚಾಲಕ ಸುಂದರ ಶೆಟ್ಟಿ ಪುರ, ಪಾರಾದೀಪ್ ಫಾಸ್ಟೆಟ್ಟ್ ಕಂಪನಿಯ ಪ್ಲಾಂಟ್ ಹೆಡ್ ಎಸ್.ಗಿರೀಶ್, ಮೆಡಿಕಲ್ ಆಫೀಸರ್ ಡಾ.ಯೋಗೀಶ್, ಗೋಳಿತ್ತೊಟ್ಟು ಶ್ರೀದುರ್ಗಾ ಬೀಡಿ ಮಾಲಕ ಕೇಶವ ಪೂಜಾರಿ ಕಿನ್ಯಡ್ಕ, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಎ.ಎಸ್.ಶೇಖರ ಗೌಡ ಅನಿಲಭಾಗ್, ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ, ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಾರೀಫ್ ಹೊಸಮನೆ, ಮುಖ್ಯಶಿಕ್ಷಕಿ ಜಯಂತಿ ಬಿ.ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ಹಾರೀಫ್ ಹೊಸಮನೆ, ಕುಶಾಲಪ್ಪ ಗೌಡ ಅನಿಲ, ಉದಯ ವಿ.ಎನ್.ಭಟ್, ಬೈಜು ವಿ.ವಿ.ಅಂಬುಡೇಲು, ಚಿದಾನಂದ ಕಲ್ಲಡ್ಕ, ಜೋಸೆಫ್, ಪುಷ್ಪರಾಜ್ ಕಡಮದಪಳಿಕೆ, ರಾಮಕೃಷ್ಣ ಭಟ್ ಅಂಜರ, ಹರೀಶ್ ಸಮರಗುಂಡಿ, ಶೀನಪ್ಪ ಎಸ್.ನಾಯ್ಕ್, ಪುರುಷೋತ್ತಮ ಕುದ್ಕೋಳಿ, ಬಾಲಕೃಷ್ಣ ಅಲೆಕ್ಕಿ, ಸುಭಾಷ್ ಶೆಟ್ಟಿ ಪುರ, ಬಾಲಚಂದ್ರ ರೈ, ಕೊರಗಪ್ಪ ಗೌಡ ಕಲ್ಲಡ್ಕ, ಪೂವಪ್ಪ ಕರ್ಕೇರ, ಅಜಿತ್ ಪಾಲೇರಿ, ಶಿವರಾಮ ಅಲೆಕ್ಕಿ, ಅಬ್ದುಲ್ ಲತೀಫ್, ಶಾಲಿನಿಶೇಖರ ಪೂಜಾರಿ, ಗೋಪಾಲ ಗೌಡ ಕುದ್ಕೋಳಿ ಮತ್ತಿತರರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.
ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ನಾಸೀರ್ ಕೆ.ಎಸ್.ಸಮರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂಆರ್ಪಿಎಲ್, ಪಾರಾದೀಪ್ ಪಾಸ್ಪೆಟ್ಸ್, ಎನ್ಎಂಪಿಟಿ ಕಂಪನಿಗಳ ಅನುದಾನದಲ್ಲಿ ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ಮುಂದೆ ಗ್ರಂಥಾಲಯ, ಸುಸಜ್ಜಿತ ಆಟದ ಮೈದಾನ, ವಾಣಿಜ್ಯ ಸಂಕೀರ್ಣ ಸಹಿತ ಶಾಲೆಗೆ ವಿವಿಧ ಅವಶ್ಯಕತೆಗಳಿಗೆ ಎಂದು ಹೇಳಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ ಸ್ವಾಗತಿಸಿದರು. ಶಾಲಾ ಶತಮಾನೋತ್ಸವ ಕಾರ್ಯಕಾರಿ ಸಮಿತಿ ಸದಸ್ಯ ಡಾ.ರಾಮಕೃಷ್ಣ ಭಟ್ ಆಂಜರ ವಂದಿಸಿದರು. ಶಿಕ್ಷಕ ಅಬ್ದುಲ್ ಲತೀಫ್ ಸಿ., ಉಪನ್ಯಾಸಕಿ ಸುಪ್ರೀತಾಚರಣ್ ಪಾಲಪ್ಪೆ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಳಿಕ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ದಾನಿಗಳಿಗೆ ಗೌರವಾರ್ಪಣೆ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದಾನಿಗಳಿಗೆ ಸನ್ಮಾನ;
ಶಾಲೆಗೆ ಸಿಎಸ್ಆರ್ ಅನುದಾನ ಒದಗಿಸಿಕೊಟ್ಟ ಎಂಆರ್ಪಿಎಲ್ ಕಂಪನಿಯ ಆಪರೇಷನ್ ವಿಭಾಗದ ಮೇನೇಜರ್ ಪ್ರದೀಪ್ಕುಮಾರ್, ಪಾರಾದೀಪ್ ಪಾಸ್ಪೆಟ್ಸ್ ಕಂಪನಿಯ ಮೆಡಿಕಲ್ ಆಫೀಸರ್ ಡಾ.ಯೋಗೀಶ್, ಪ್ಲಾಂಟ್ ಹೆಡ್ ಎಸ್.ಗಿರೀಶ್ ಅವರನ್ನು ಶತಮಾನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ಶಾಲೆಗೆ ದೊಡ್ಡ ಮೊತ್ತದ ಅನುದಾನ ನೀಡಿದ ಸೌದಿ ಅರೇಬಿಯಾದ ಉದ್ಯಮಿ ಸೂಫಿ ಇಬ್ರಾಹಿಂ ಸಮರಗುಂಡಿ ಅವರ ಪರವಾಗಿ ತಮ್ಮ ಕೆ.ಎಸ್.ರಝಾಕ್ ಸಮರಗುಂಡಿ, ಗೋಳಿತ್ತೊಟ್ಟು ಶ್ರೀ ದುರ್ಗಾಬೀಡಿ ಮಾಲಕ ಕೇಶವ ಪೂಜಾರಿ ಕಿನ್ಯಡ್ಕ, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಎ.ಎಸ್.ಶೇಖರ ಗೌಡ ಅನಿಲಭಾಗ್, ಉದ್ಯಮಿ ಅಬ್ದುಲ್ ಹಮೀದ್ ಹೊಸಮನೆ(ಅಸ್ಕಾಫ್) ಅವರ ಪರವಾಗಿ ಸಹೋದರ ಅಬ್ದುಲ್ ಹಾರೀಫ್ ಹೊಸಮನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಮರಣ ಸಂಚಿಕೆ/ ಪುಸ್ತಕ ಬಿಡುಗಡೆ;
ಶತಮಾನೋತ್ಸವದ ಸವಿನೆನಪಿಗಾಗಿ ರಚಿಸಲಾಗುವ ’ಸದ್ಭಾವ’ ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಬಿಡುಗಡೆಗೊಳಿಸಿದರು. ಶಾಲಾ ಮಕ್ಕಳು ಬರೆದ ಕಥೆಗಳ ಗೊಂಚಲು ಕಥಾ ಸಂಲಕನ ’ಮಾತನಾಡುವ ಪುಸ್ತಕ’ವನ್ನು ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್ ಬೊಟ್ಯಾಡಿ ಬಿಡುಗಡೆಗೊಳಿಸಿದರು.
ಇಂದು ಗುರುವಂದನೆ, ಪೂರ್ವವಿದ್ಯಾರ್ಥಿಗಳ ಸಮ್ಮಿಲನ
ಏ.26ರಂದು ಪೂರ್ವಾಹ್ನ 10 ಗಂಟೆಗೆ ಗುರುವಂದನೆ, ಪೂರ್ವವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಅಜಿತ್ಕುಮಾರ್ ಪಾಲೇರಿ ಗುರುವಂದನೆ ಮಾಡಲಿದ್ದಾರೆ. ಸಂಜೆ ಶತಶ್ರುತಿ ಸಂಗೀತ ಸಂಜೆ, ಚೆಂಡವಾದನ, ಬಳಿಕ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪೂರ್ವ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ’ಗಾಳಿಪಟ’ ತುಳು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಧ್ವಜಾರೋಹಣ, ನೂತನ ಧ್ವಜಕಟ್ಟೆ ಉದ್ಘಾಟನೆ
ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಇದೇ ವೇಳೆ ಕೀರ್ತಿಶೇಷ ಕೊಣಾಲುಗುತ್ತು ಸತೀಶ್ ರೈಯವರ ಸ್ಮರಣಾರ್ಥ ಅವರ ಪತ್ನಿ ಮಕ್ಕಳು ಕೊಡುಗೆಯಾಗಿ ನೀಡಿದ ಧ್ವಜಕಟ್ಟೆಯ ಉದ್ಘಾಟನೆ ನಡೆಯಿತು. ಸತೀಶ್ ರೈ ಅವರ ಪತ್ನಿ ಚಿತ್ರಾ ಎಸ್.ರೈ ಅವರು ಉದ್ಘಾಟಿಸಿದರು. ಪುತ್ರ ಪ್ರತೀಕ್ಷ್ ರೈ, ಪುತ್ರಿ ಅಪೇಕ್ಷಾ ರೈ ಅವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜಯಂತಿ ಬಿ.ಎಂ.ಸ್ವಾಗತಿಸಿದರು. ಪೂವಪ್ಪ ಕರ್ಕೇರ ನಿರೂಪಿಸಿದರು. ಶತಮಾನೋತ್ಸವ ಸಮಿತಿಯವರು, ಎಸ್ಡಿಎಂಸಿ ಸದಸ್ಯರು, ಪೂರ್ವವಿದ್ಯಾರ್ಥಿಗಳು, ಪೋಷಕರು ಈ ವೇಳೆ ಉಪಸ್ಥಿತರಿದ್ದರು.










