







ಕಡಬ: ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಸುಚೇತಾ ಕುಮಾರಿ ಬಿ.ಅವರು ಏ.30ರಂದು ಸೇವಾ ನಿವೃತ್ತಿಹೊಂದಲಿದ್ದಾರೆ. ಇರುವ 31 ವರ್ಷ 9 ತಿಂಗಳು ವಿವಿಧ ಶಾಲೆಗಳಲ್ಲಿ ಸಹಶಿಕ್ಷಕಿಯಾಗಿ, ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.



ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕುಂಟಾಲಪಲ್ಕೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 28-7-1994ರಂದು ಸಹಶಿಕ್ಷಕಿಯಾಗಿ ಸೇವೆ ಆರಂಭಿಸಿ, ಇಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ ಪುತ್ತೂರು ತಾಲೂಕಿನ ಶರವೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 6-8-1997 ರಿಂದ 23-9-2002ರ ತನಕ 5 ವರ್ಷ, ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 23-9-2002ರಿಂದ 17-8-2016ರ ತನಕ 14 ವರ್ಷಗಳ ಕಾಲ, ಬಳಿಕ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 17-8-2016ರಿಂದ 5-5-2022ರ ತನಕ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ಪೂರ್ಣಕಾಲಿಕ ಮುಖ್ಯಶಿಕ್ಷಕಿಯಾಗಿ ಭಡ್ತಿಹೊಂದಿ ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 5-5-2022ರಿಂದ 28-10-2025ರ ತನಕ ಮೂರು ವರ್ಷ, ಬಳಿಕ ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 29-10-2025ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು 30-4-2026ರಂದು ನಿವೃತ್ತಿ ಹೊಂದಲಿದ್ದಾರೆ.



ಸುಚೇತಾ ಕುಮಾರಿ ಅವರು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬಂಡೇರಿ ಮನೆಯ ದಿ| ರಾಮಯ್ಯ ಗೌಡ ಹಾಗೂ ದಿ| ವೀರಮ್ಮ ದಂಪತಿಯ ಪುತ್ರಿ. ಇವರು ಕಾರ್ಯತಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ, ನಿಡ್ಲೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ವಿರಾಜಪೇಟೆ ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಹೆಚ್ ತರಬೇತಿ ಪಡೆದುಕೊಂಡಿದ್ದಾರೆ. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಇವರು ಆಲಂಕಾರು ಪಜ್ಜಡ್ಕದಲ್ಲಿ ಪತಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಪಿ.ಕುಶಾಲಪ್ಪ ಗೌಡ, ಪುತ್ರಿ ರಶ್ಮಿ ಪಿ.ಕೆ., ಪುತ್ರ ರತನ್ ಪಿ.ಕೆ.ಅವರ ಜೊತೆ ವಾಸ್ತವ್ಯವಿದ್ದಾರೆ.









