






ನೆಲ್ಯಾಡಿ: ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿ, ಸಹ ಸವಾರೆ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆ ಸಮೀಪ ಏ.29ರಂದು ಸಂಜೆ ನಡೆದಿದೆ.



ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ನಿವಾಸಿ ಶಿವಕುಮಾರ್ ಅವರ ಪುತ್ರ, ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್(24ವ.)ಮೃತಪಟ್ಟ ದುರ್ದೈವಿ ಯುವಕ. ಸಹ ಸವಾರೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಎಲಿಯ ನಿವಾಸಿ, ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿನಿ ನೇಹಾ ಎಂಬಾಕೆ ಗಂಭೀರ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ತಂಡ ದ್ವಿಚಕ್ರ ವಾಹನಗಳಲ್ಲಿ ನೆಲ್ಯಾಡಿ ಕಡೆಯಲ್ಲಿ ನಡೆದ ಪರಿಚಿತರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರ್ತಿಕ್ ಹಾಗೂ ನೇಹಾ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಹಾಗೂ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ನೀರಕಟ್ಟೆಯಲ್ಲಿ ಡಿಕ್ಕಿ ಸಂಭವಿಸಿ ಈ ಅವಘಡ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡಿರುವ ನೇಹಾ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.




ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದ ಕಾರ್ತಿಕ್:
ಮೃತ ಕಾರ್ತಿಕ್ ಅಂತಿಮ ಬಿಬಿಎ ವಿದ್ಯಾರ್ಥಿಯಾಗಿದ್ದು, ಕಾಲೇಜು ಶಿಕ್ಷಣದ ಜೊತೆಗೆ ಬಿಡುವಿನ ವೇಳೆಯಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಸ್ವಾವಲಂಭಿ ಬದುಕು ಕಟ್ಟಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಾಣಿ ಪ್ರಿಯನೂ ಆಗಿದ್ದು ನಾಸಿಕ್ ಬ್ಯಾಂಡ್ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದ. ಮದುವೆ ಇನ್ನಿತರ ಸಮಾರಂಭಗಳಲ್ಲಿ ಪ್ಲವರ್ ಡೆಕೋರೇಷನ್ ಸಹ ಇವರು ಮಾಡುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಮೃತರ ಕಾರ್ತಿಕ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.










