ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಾಗೂ ಬೆದರಿಕೆ -ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಇತರರ ವಿರುದ್ಧ ಪುತ್ತೂರಿನಲ್ಲಿ ದೂರು ದಾಖಲು

0

ಪುತ್ತೂರು: ಸುಳ್ಳು ಸಾಕ್ಷಿ ಹೇಳುವಂತೆ ಕಲಾವಿದ ಸುಂದರ್ ರೈ ಮಂದಾರ ಅವರಿಗೆ ಬೆದರಿಕೆ ಒಡ್ಡಿದ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಬುಝ್ ಯೂ ಟ್ಯೂಬ್ ಚಾನೆಲ್, ಪ್ರಸನ್ನರವಿ ಮತ್ತಿತರರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಕೇಸ್‌ನ ವಿವರ: ಒಳಮೊಗ್ರು ಗ್ರಾಮದ ಮಂದಾರ ಮನೆಯ ನಿವಾಸಿ ಕಲಾವಿದ ಸುಂದರ ರೈ ಮಂದಾರ(55) ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮೇ. 7ರಂದು ನೀಡಿದ ದೂರಿನಲ್ಲಿ ‘ನನ್ನ 9980202308 ಮೊಬೈಲ್ ಫೋನ್ ನಂಬ್ರಕ್ಕೆ 9082098933 ನೇ ನಂಬ್ರದಿಂದ ಸತೀಶ್ ಕುಮಾರ್ ರೈ ಪಡುಮಲೆ ಎಂಬ ಹೆಸರಿನ ವ್ಯಕ್ತಿ 21-೦4-2026ರಂದು ಕರೆ ಮಾಡಿ 15.04.2026ರಂದು ಮಹೇಶ್ ತಿಮರೋಡಿರವರ ವಿರುದ್ಧ ನಾನು ಕೇಸು ದಾಖಲಿಸಿದ ಪ್ರಕರಣಕ್ಕೆ ಸಂಬಂಽಸಿದಂತೆ ಸುತ್ತು ಬಳಸಿ ಮಾತನಾಡಿದ್ದಾರೆ. ತಿಮರೋಡಿ ಅವರನ್ನು ಸಮರ್ಥಿಸಿ ನನಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಕೇಸು ನೀಡಿದ್ದಕ್ಕೆ ಹೆದರಿಸಿ ಬೆದರಿಸಿದ್ದಾರೆ. ಮುಂಬಯಿಯಲ್ಲಿ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೆಸ್‌ಬುಕ್‌ನಲ್ಲಿ ನನ್ನ ಬಗ್ಗೆ 29-04-2026ರಂದು ಕೆಟ್ಟದಾಗಿ ಬರೆದು ಪ್ರಸಾರ ಮಾಡಿದ್ದಾರೆ. ಇದೇ ರೀತಿ ಕುಡ್ಲ ರಾಮ್ ಪೇಜ್‌ನವರು ಪ್ರಸನ್ನರವಿ ಮತ್ತು ಇತರರು ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ತಿಮರೋಡಿಯ ಅನುಯಾಯಿಗಳು ನನ್ನ ಮತ್ತು ಪತ್ನಿಯ ಬಗ್ಗೆ ಅತ್ಯಂತ ಕೆಟ್ಟದಾಗಿ, ಅಶ್ಲೀಲವಾಗಿ ಯಕ್ಷಗಾನದ ಹಾಡು ರಚಿಸಿ ಪ್ರಸಾರ ಮಾಡಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ತಾವು ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ತಿಮರೋಡಿಯ ವಿರುದ್ಧ ನಾನು ದೂರು ದಾಖಲಿಸಿದ ಏಕ ಮಾತ್ರ ಉದ್ದೇಶಕ್ಕೆ ನನ್ನ ಮತ್ತು ಮನೆಯವರ ಬಗ್ಗೆ, ಕೀಳು ಪದ ಬಳಕೆ ಮಾಡಿ ಮಾನಸಿಕ ಒತ್ತಡಕ್ಕೆ ಒಳಪಡಿಸಿ ಅವಹೇಳನ ಮಾಡಿ ಬೆದರಿಕೆ ಒಡ್ಡಿದ್ದಾರೆ. ನನಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೂಡಾ ತಮಾಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿಯಾಗಿಸಿ ಸುಳ್ಳು, ತಿರುಚಿದ ಕೆಟ್ಟ ಕೆಟ್ಟ ಕೀಳು ಅಭಿರುಚಿಯ ಸಂದೇಶಗಳನ್ನು ರವಾನಿಸಿದ್ದಾರೆ. ಮಾತ್ರವಲ್ಲದೆ ನನ್ನ ದೈನಂದಿನ ಉತ್ಪತ್ತಿಗೆ ಮತ್ತು ಜೀವನೋಪಾಯಕ್ಕೆ ಕುಂದು ಬರುವಂತೆ ಮಾಡಿದ್ದಾರೆ. ಈ ಮೂಲಕ, ನಾವು ಪೊಲೀಸ್ ಹಾಗೂ ನ್ಯಾಯಾಲಯದ ಮುಂದೆ ನೀಡಿರುವ ಸತ್ಯ ಹೇಳಿಕೆ ಮತ್ತು ದೂರನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಾಯಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಮೇ.7ರಂದು ಕಲಂ 351(2) ಮತ್ತು 232 ಬಿಎನ್‌ಎಸ್ ಅಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಬುಝ್ ಯೂ ಟ್ಯೂಬ್ ಚಾನೆಲ್, ಪ್ರಸನ್ನರವಿ ಮತ್ತಿತರರ ವಿರುದ್ಧ ಕೇಸು (ಅ.ಕ್ರ.73/2026) ದಾಖಲಿಸಿ ಪುತ್ತೂರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ತಿಮರೋಡಿಯ ಜಾಮೀನು ಅರ್ಜಿ ವಜಾಗೊಳಿಸಿದ ಮಂಗಳೂರು ಕೋರ್ಟ್‌- ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ
ಮೊಬೈಲ್ ಫೋನ್‌ಗೆ ಕರೆ ಮಾಡಿ ಯಕ್ಷಗಾನ ಕಲಾವಿದರು ಮತ್ತು ಅವರ ಹೆತ್ತವರನ್ನು ಅವಹೇಳನ ಮಾಡಿರುವುದಲ್ಲದೆ ಬೆದರಿಕೆ ಹಾಕಿದ ಆರೋಪದಡಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳೂರಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕಲಾವಿದ ಸುಂದರ್ ರೈ ಮಂದಾರ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಕೇಸ್‌ಗೆ ಸಂಬಂಽಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.


ಪ್ರಕರಣದ ವಿವರ:
ಯಕ್ಷಗಾನ ಕಲಾವಿದರಾಗಿರುವ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರ ಜತೆ ಏ.11ರಂದು ಮೊಬೈಲ್ ಫೋನ್‌ನಲ್ಲಿ ಮಾತನಾಡುವ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಯಕ್ಷಗಾನ ಕಲಾವಿದರಾಗಿರುವ ತನ್ನ ಪುತ್ರ ದಿನೇಶ್ ಕೊಡಪದವು ಹಾಗೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ದಿನೇಶ್ ಕೋಡಪವು ಅವರ ತಾಯಿ ಲೀಲಾವತಿ ಶೆಟ್ಟಿಗಾರ್ ಅವರು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಏ.13ರಂದು ಪ್ರಕರಣ ದಾಖಲಿಸಿದ್ದರು. ಬಿಎನ್‌ಎಸ್ ಕಾಯಿದೆ ಕಲಂ 196 (1), 352, 351 (2) ಹಾಗೂ 79ರಡಿ ಧರ್ಮ ನಿಂದನೆ, ಅವಾಚ್ಯ ಶಬ್ದಗಳಿಂದ ಬೈಗುಳ, ಜೀವ ಬೆದರಿಕೆ ಹಾಗೂ ಮಾನ ಹಾನಿ ಮಾಡಿದ ಆರೋಪದಡಿ ದಾಖಲಾಗಿದ್ದ ಈ ಕೇಸ್‌ನಲ್ಲಿ ಕಲಾವಿದರಾದ ಸುಂದರ ರೈ ಮಂದಾರ, ಪ್ರಜ್ವಲ್ ಕುಮಾರ್ ಅವರಿಗೂ ಬೈದಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮ್ಮ ಪರ ವಕೀಲ ವಿಜಯ ವಾಸು ಪೂಜಾರಿ ಅವರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಯುವ ವೇಳೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಮಂಗಳೂರಿನ ಆರನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಮಾರುತಿ ಕದುಟಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ. ಕಲಾವಿದರನ್ನು ಮತ್ತು ಅವರ ಮನೆಯವರನ್ನು ನಿಂದಿಸಿ ಅವಹೇಳನ ಮಾಡಿ ಬೆದರಿಕೆ ಒಡ್ಡಿದ ಆರೋಪದಡಿ ಕಲಾವಿದ ಸುಂದರ್ ರೈ ಮಂದಾರ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಕೇಸ್‌ಗೆ ಸಂಬಂದಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತಮ್ಮ ಪರ ವಕೀಲ ವಿಜಯ ವಾಸು ಪೂಜಾರಿ ಅವರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಇದೀಗ ಹೊಸದಾಗಿ ಸುಂದರ್ ರೈ ಮಂದಾರ ಅವರು ಸುಳ್ಳು ಸಾಕ್ಷಿ ಹೇಳುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಕೇಸ್‌ಗೆ ಸಂಬಂಧಿಸಿಯೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ತಿಮರೋಡಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here