







@ ಸಿಶೇ ಕಜೆಮಾರ್
ಪುತ್ತೂರು: ಬೇಸಿಗೆಯ ಸುಡುವ ಬಿಸಿಲ ನಡುವೆಯೂ ಕಣ್ಣಿಗೆ ತಂಪು ನೀಡುವ, ಪ್ರಕೃತಿಯ ಅಚ್ಚರಿಯಂತೆ ಅರಳಿ ನಿಲ್ಲುವ ’ಮೇ ಫ್ಲವರ್’ ಅಥವಾ ಗುಲ್ಮೊಹರ್ ಮರಗಳು ಇಂದು ಅಪರೂಪವಾಗುತ್ತಿವೆ. ಮೇ ತಿಂಗಳು ಬಂತೆಂದರೆ ಸಾಕು, ಹಸಿರು ಎಲೆಗಳ ನಡುವೆ ಗಾಢ ಕೆಂಪು ಬಣ್ಣದ ಹೂವುಗಳು ಮರವನ್ನು ಸಂಪೂರ್ಣವಾಗಿ ಆವರಿಸಿ ಪ್ರಕೃತಿಗೆ ವಿಶೇಷ ಅಲಂಕಾರವನ್ನು ನೀಡುತ್ತವೆ. ಈ ಮರಗಳು ರಸ್ತೆ ಬದಿಗಳಲ್ಲಿ ಅರಳಿ ನಿಂತಾಗ ಹಾದಿಹೋಕರಿಗೆ ಅದೊಂದು ಸುಂದರ ಅನುಭವ ನೀಡುತ್ತದೆ. ರಸ್ತೆ ಬದಿಗಳಲ್ಲಿ ಈ ಹಿಂದೆ ಹೇರಳವಾಗಿ ಕಂಡುಬರುತ್ತಿದ್ದ ಈ ಮರಗಳು, ಮೇ ತಿಂಗಳ ಪ್ರಖರ ಬಿಸಿಲಿನಲ್ಲಿ ಒಂದು ರೀತಿಯ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತಿದ್ದವು. ಆದರೆ ಈಗ ಮರಗಳು ಕಾಣಸಿಗುತ್ತಿಲ್ಲ. ಒಂದು ಕಾಲದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದ ಈ ಮೇ ಫ್ಲವರ್ ಮರಗಳು ಈಗ ಕ್ರಮೇಣ ನಾಶವಾಗುತ್ತಿವೆ. ನಗರೀಕರಣ, ರಸ್ತೆ ಅಗಲೀಕರಣ ಮತ್ತು ಹಳೆಯ ಮರಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು ಈ ಮರಗಳ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣಗಳಾಗಿವೆ. ಪ್ರಕೃತಿಯ ಈ ಸುಂದರ ಸಿರಿಯನ್ನು ಮುಂದಿನ ಪೀಳಿಗೆ ಕೇವಲ ಚಿತ್ರಗಳಲ್ಲಿ ನೋಡುವಂತಾಗುತ್ತದೆಯೇ ಎಂಬ ಆತಂಕ ಪರಿಸರ ಪ್ರೇಮಿಗಳಲ್ಲಿ ಮೂಡಿದೆ. ಈ ಮರಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೆ, ದಟ್ಟವಾಗಿ ಹರಡುವ ಇದರ ಕೊಂಬೆಗಳು ದಾರಿಹೋಕರಿಗೆ ನೆರಳು ನೀಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದವು. ಈಗಲೂ ಅಲ್ಲಲ್ಲಿ ಕಾಣಸಿಗುವ ಈ ಕೆಂಪು ಹೂವಿನ ಮರಗಳು ಪರಿಸರದ ಸೌಂದರ್ಯವನ್ನು ಕಾಪಾಡುತ್ತಿದ್ದು, ಇವುಗಳ ಸಂರಕ್ಷಣೆ ಮತ್ತು ಹೊಸ ಸಸಿಗಳನ್ನು ನೆಡುವ ಅನಿವಾರ್ಯತೆ ಇಂದು ಎದುರಾಗಿದೆ.






ಒಂದು ಕಾಲದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಈ ಗುಲ್ಮೊಹರ್ ಅಥವಾ ಮೇ ಪ್ಲವರ್ ಮರದ ಗಿಡಗಳನ್ನೇ ಹೆಚ್ಚಾಗಿ ನೆಡುತ್ತಿದ್ದರು. ಇವು ಬೇಗನೆ ದೊಡ್ಡದಾಗುತ್ತವೆ ಎಂಬ ಒಂದು ಕಾರಣಕ್ಕೆ ಇದನ್ನೆ ಹೆಚ್ಚಾಗಿ ನೆಡುತ್ತಿದ್ದರು ಇದಲ್ಲದೆ ಇದರ ಕೊಂಬೆಗಳು ಸುತ್ತಲೂ ಚಾಚಿಕೊಳ್ಳುವುದರಿಂದ ದಾರಿ ಹೋಕರಿಗೆ, ಬಸ್ಸಿಗೆ ಕಾಯುವವರಿಗೆ ನೆರಳು ಸಿಗುತ್ತಿತ್ತು.ಆದರೆ ಇಂದು ರಸ್ತೆ ಅಗಲೀಕರಣ ಇತ್ಯಾದಿ ಕಾರಣಗಳಿಂದ ಮರಗಳು ನಾಶವಾಗಿವೆ. ಮುಂದಿನ ದಿನಗಳಲ್ಲಾದರೂ ಮೇ ಪ್ಲವರ್ ಗಿಡಗಳನ್ನೇ ರಸ್ತೆ ಬದಿಯಲ್ಲಿ ನೆಡುವ ಅಗತ್ಯತೆ ಇದೆ.









