







ಪುತ್ತೂರು:ಇಂದು ಕೃಷಿಕರು ಯಾಂತ್ರೀಕೃತ ಕೃಷಿ ಮಾಡುತ್ತಿದ್ದು ಯಂತ್ರಗಳನ್ನು ಅವಲಂಬಿಸಿಕೊಂಡು ಕೃಷಿ ಕಾರ್ಯ ನಡೆಸುತಿದ್ದಾರೆ.ಅವರಿಗೆ ಕೃಷಿ ಉಪಕರಣಗಳಿಗೆ ಇಂಧನದ ಬಳಕೆ ಅನಿವಾರ್ಯವಾಗಿರುತ್ತದೆ.ಹೀಗೆ ಕೃಷಿಕರು ಯಂತ್ರಗಳನ್ನು ಉಪಯೋಗ ಮಾಡಲು ಅದಕ್ಕೆ ಬೇಕಾಗುವ ಇಂಧನವನ್ನು ಕ್ಯಾನ್ಗಳಲ್ಲಿ ಅಥವಾ ಬಾಟಲ್ಗಳಲ್ಲಿ ಕೊಂಡು ಹೋಗುವುದು ಸಾಮಾನ್ಯ. ಆದರೆ ಈಗ ರಾಜ್ಯ ಸರಕಾರ ಹೊಸ ಸುತ್ತೋಲೆ ಹೊರಡಿಸಿ ಪೆಟ್ರೋಲ್, ಡೀಸೆಲ್ನ್ನು ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ಪೂರೈಸಬೇಕು.ಬಾಟಲ್ ಅಥವಾ ಕ್ಯಾನ್ಗಳು, ಇನ್ನಿತರ ಯಾವುದೇ ಕಂಟೇನರ್ಗಳಿಗೆ ಪೂರೈಕೆ ಮಾಡುವುದನ್ನು ನಿಷೇಧಿಸಿದೆ.ಈ ತುಘಲಕ್ ಆದೇಶವನ್ನು ಸರಕಾರ ವಾಪಸ್ ಪಡೆದುಕೊಳ್ಳಬೇಕು.ಈ ಹಿಂದಿನಂತೆ ಕೃಷಿಕರಿಗೆ ಇಂಧನ ವಿತರಣೆ ಮಾಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.


ಕೃಷಿಕರಿಗೆ ಹೊಲ ಉಳುವ ಟ್ರ್ಯಾಕ್ಟರ್, ಪವರ್ ಟಿಲ್ಲರ್, ನೀರೆತ್ತುವ ಪಂಪ್ಸೆಟ್, ಹುಲ್ಲು ಕಳೆ ತೆಗೆಯುವ ಯಂತ್ರ, ಮರ ತುಂಡು ಮಾಡುವ ಯಂತ್ರ ಹೀಗೆ ಬೇರೆ ಬೇರೆ ಯಂತ್ರೋಪಕರಣಗಳನ್ನು ಬಳಸುವ ಸಂದರ್ಭದಲ್ಲಿ ಇಂಧನ ಬೇಕೇ ಬೇಕು.ಇದಕ್ಕಾಗಿ ಪೆಟ್ರೋಲ್, ಡೀಸೆಲ್ನ್ನು ಪಂಪ್ನಿಂದ ಪಡೆದುಕೊಳ್ಳುತ್ತಾರೆ.ಕೃಷಿಕ ಯಾವತ್ತೂ ಕಾಳಸಂತೆಯಲ್ಲಿ ಇಂಧನ ಮಾರಾಟ ಮಾಡುವುದಿಲ್ಲ.ಅಲ್ಲದೆ ಯಾವುದೇ ರೀತಿಯ ದುರ್ಬಳಕೆ ಮಾಡುವುದಿಲ್ಲ.ಸರಕಾರ ಹೊರಡಿಸಿದ ಈ ಆದೇಶದಿಂದ ಕೃಷಿಕರು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.ರೈತರ ಬಗ್ಗೆ ಕಾಳಜಿ ಇದ್ದರೆ ಇಂತಹ ಆದೇಶ ಮಾಡುವುದಿಲ್ಲ ಎಂದು ಮಠಂದೂರು ಹೇಳಿದರು.



ಪೆಟ್ರೋಲಿಯಂ ರೂಲ್ಸ್ ಪ್ರಕಾರ ರಿಟೈಲ್ ಔಟ್ಲೆಟ್ಗಳು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಕಂಟೇನರ್ಗಳಿಗೆ ಗರಿಷ್ಟ ಮಿತಿ 200 ಲೀ.ಗಳಿಗೆ ಒಳಪಟ್ಟು ಮಾತ್ರ ಇಂಧನ ಪೂರೈಸಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.2002ರ ಕೇಂದ್ರ ಸರಕಾರದ ಕಾನೂನನ್ನು ಈಗ ಅಳವಡಿಸುವುದು ಯಾಕೆ? ಎಂದು ಪ್ರಶ್ನಿಸಿದ ಮಾಜಿ ಶಾಸಕರು, ಕೃಷಿಕರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಗಳಿಂದ ಡೀಸೆಲ್ ಬೇಡಿಕೆಯ ಪರವಾನಿಗೆ ಪಡೆದುಕೊಂಡು ಡೀಸೆಲ್ ತಂದುಕೊಳ್ಳಬೇಕು ಎಂದು ಆದೇಶದಲ್ಲಿದೆ.ಆದರೆ ಪೆಟ್ರೋಲ್ಗೆ ಅನುಮತಿ ಇಲ್ಲ.ಸರಕಾರದ ಈ ಆದೇಶದಿಂದ ಕೃಷಿಕರು ಕೃಷಿ ಯಂತ್ರೋಪಕರಣಗಳನ್ನೂ ಪೆಟ್ರೋಲ್ ಪಂಪ್ಗೆ ಕೊಂಡೊಯ್ದು ಇಂಧನ ಹಾಕಬೇಕಾದ ಅನಿವಾರ್ಯತೆ ಒದಗಿದೆ.ಸರಕಾರದ ಬೇಜವಾಬ್ದಾರಿಯ ಈ ಆದೇಶದಿಂದ ಕೃಷಿಕರಿಗೆ ಕೃಷಿ ಯಂತ್ರೋಪಕರಣ ಬಳಕೆ ಮಾಡದಂತಹ ಸ್ಥಿತಿ ಬಂದಿದೆ ಎಂದರು.
ಕಳೆದ ಹಲವು ದಿನಗಳಿಂದ ಮಳೆ ಗಾಳಿ ಬರುತ್ತಿದೆ.ಗಾಳಿಗೆ ತೋಟದ ಅಡಿಕೆ ಮರಗಳು ಧರಾಶಾಹಿಯಾಗುತ್ತಿದೆ.ಬಿದ್ದ ಅಡಿಕೆ ಮರಗಳನ್ನು ಕಟ್ ಮಾಡಲು ಕೂಡ ಯಂತ್ರದ ಬಳಕೆ ಅನಿವಾರ್ಯ.ಇದಕ್ಕೆ ಪೆಟ್ರೋಲ್ ಬೇಕಾಗುತ್ತದೆ.ಆದುದರಿಂದ ಇದು ಗಂಭೀರ ವಿಚಾರ.ಈ ಸುತ್ತೋಲೆಯನ್ನು ಸರ್ಕಾರ ವಾಪಸ್ ಪಡೆದುಕೊಂಡು ಕೃಷಿಕರಿಗೆ ಈ ಹಿಂದಿನಂತೆ ಕ್ಯಾನ್ ಹಾಗೂ ಬಾಟಲ್ಗಳಲ್ಲಿಯೂ ಇಂಧನ ಪಡೆದುಕೊಳ್ಳಲು ವ್ಯವಸ್ಥೆ ಮಾಡಬೇಕು.ನಮ್ಮ ಬೇಡಿಕೆ ಈಡೇರದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಸಂಜೀವ ಮಠಂದೂರು ಎಚ್ಚರಿಸಿದರು.
ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ದಡ್ಡು,ಭಾರತೀಯ ಕಿಸಾನ್ ಸಂಘದ ಶ್ರೀರಾಮ್ಪ್ರಸಾದ್, ಸಾವಯವ ಕೃಷಿ ಪರಿವಾರದ ಧನಂಜಯ ಬೆದ್ರೋಡಿ, ಪೆಟ್ರೋಲ್ ಪಂಪ್ ಮಾಲಕ ಸುದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










